ಚಿಂಚೋಳಿ: ತಾಲೂಕಿನ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆಗೆ ಸರಕಾರ ವಿವಿಧ ಯೋಜನೆ ಅಡಿಯಲ್ಲಿ ಸಾಕಷ್ಟು ಅನುದಾನ ಮಂಜೂರಾಗಿದ್ದು, ಈ ಯೋಜನೆಯಡಿ ಕೈಗೊಳ್ಳಲಾದ ಅಭಿವೃದ್ಧಿ ಕಾಮಗಾರಿಗಳಲ್ಲಿ ನಡೆದ ಹಗರಣಗಳ ಕುರಿತು ಸರ್ಕಾರ ಉನ್ನತಮಟ್ಟದ ತನಿಖೆ ಕೈಗೊಳ್ಳಬೇಕೆಂದು ರೈತರು ಒತ್ತಾಯಿಸಿದ್ದಾರೆ.
Advertisement
ತಾಲೂಕಿನಲ್ಲಿ 1973-74ನೇ ಸಾಲಿನ ಬರಗಾಲ ಪರಿಹಾರ ಯೋಜನೆ ಅಡಿಯಲ್ಲಿ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆ ಅಭಿವೃದ್ಧಿ ಮತ್ತು ಮುಖ್ಯ ಕಾಲುವೆ ಆಧುನೀಕರಣ ಹಾಗೂ ಪುನರ್ವಸತಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಸಾಕಷ್ಟು ಅನುದಾನ ಮಂಜೂರುಗೊಳಿಸಲಾಗಿದೆ. ಆದರೆ ಯೋಜನೆ ಅಡಿಯಲ್ಲಿ ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳು ಕಳಪೆಮಟ್ಟದ್ದಾಗಿದ್ದಲ್ಲದೇ ಇನ್ನೂವರೆಗೂ ಪೂರ್ಣಗೊಂಡಿಲ್ಲ.
ನೀರಾವರಿ ಅಭಿವೃದ್ಧಿ ನಿಗಮದಿಂದ 125 ಕೋಟಿ ರೂ. ಅನುದಾನ ನೀಡಲಾಗಿದೆ. ಮುಖ್ಯ ಕಾಲುವೆ ಕಾಮಗಾರಿಯಲ್ಲಿ ನಡೆದ
ಭ್ರಷ್ಟಾಚಾರ, ಕಳಪೆಮಟ್ಟದ ಕೆಲಸದಿಂದಾಗಿ ಕಾಲುವೆ ಇನ್ನೂವರೆಗೆ ಪೂರ್ಣಗೊಂಡಿಲ್ಲ. ರೈತರ ಜಮೀನುಗಳಿಗೆ ನೀರು ಹರಿಯುತ್ತಿಲ್ಲವೆಂದು ತಾಲೂಕು ಭೀಮಾ ಮಿಷನ್ ಅಧ್ಯಕ್ಷ ಭೀಮಶೆಟ್ಟಿ ಮುಕ್ಕಾ ಆರೋಪಿಸಿದ್ದಾರೆ. ಮುಖ್ಯ ಕಾಲುವೆ ಆಧುನೀಕರಣಕ್ಕಾಗಿ ಅಣೆಕಟ್ಟು ಹತ್ತಿರ “ಡ್ರಿಪ್’ ಯೋಜನೆ ಅಡಿಯಲ್ಲಿ ಸಿಮೆಂಟ್ ಕಾಮಗಾರಿಗೆ 40 ಕೋಟಿ ರೂ.,
ಪುನರ್ವಸತಿ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳಿಗಾಗಿ ಆಗಿನ ನೀರಾವರಿ ಸಚಿವ ಎಂ.ಬಿ.ಪಾಟೀಲ 18ಕೋಟಿ ರೂ. ಮಂಜೂರುಗೊಳಿಸಿದ್ದರು. ಆದರೆ ನಿರಾಶ್ರಿತರ ಪುನರ್ವಸತಿ ಕೇಂದ್ರಗಳಲ್ಲಿ ಜನರು ಸೌಲಭ್ಯಕ್ಕಾಗಿ ತೊಂದರೆ ಪಡುವಂತಹ ಪರಿಸ್ಥಿತಿಯಿದೆ ಎಂದು ನಿರಾಶ್ರಿತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Related Articles
Advertisement
ತಾಲೂಕಿನ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆಯಲ್ಲಿ ನಡೆದ ಕಳಪೆಮಟ್ಟದ ಕಾಮಗಾರಿಗಳಿಂದ ರೈತರ ಜಮೀನಿಗೆ ನೀರು ಹರಿಯುತ್ತಿಲ್ಲ. ಯೋಜನೆ ಕುರಿತು ಸರ್ಕಾರ ಸಮಗ್ರ ತನಿಖೆ ನಡೆಸಬೇಕು.*ಭೀಮಶೆಟ್ಟಿ ಎಂಪಳ್ಳಿ,
ಅಧ್ಯಕ್ಷ, ಕೃಷಿ ಕೂಲಿಕಾರ್ಮಿಕರ ಸಂಘ ಕೆಳದಂಡೆ ಮುಲ್ಲಾಮಾರಿ ಯೋಜನೆ ಕಾಮಗಾರಿ ಅನೇಕ ವರ್ಷಗಳಿಂದ ಪೂರ್ಣಗೊಂಡಿಲ್ಲ. ತಾಲೂಕಿನಲ್ಲಿ ಮಧ್ಯಮ ನೀರಾವರಿ ಯೋಜನೆಯಿಂದ ರೈತರಿಗೆ ಯಾವುದೇ ಉಪಯೋಗವಾಗಿಲ್ಲ. ಸರ್ಕಾರ ನೀಡಿದ ಅನುದಾನ ಲೂಟಿಯಾದ ಬಗ್ಗೆ ತನಿಖೆ ಆಗಬೇಕು.
*ಅಂಬರೀಶ ಗೋಣಿ,ರೈತ, ಸುಲೇಪೇಟ ಕೆಳದಂಡೆ ಮುಲ್ಲಾಮಾರಿ ಯೋಜನೆ ಅಡಿಯಲ್ಲಿ ಕೆರೋಳಿ ಗ್ರಾಮದ ಅನೇಕ ರೈತರ ಹೊಲಗಳು ಯೋಜನೆಗೆ ಒಳಪಟ್ಟಿದ್ದರೂ
ಕಳೆದ 40 ವರ್ಷಗಳಿಂದ ರೈತರ ಜಮೀನುಗಳಿಗೆ ನೀರು ಹರಿಯುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಈ ಕುರಿತು ಉನ್ನತಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸುವುದು ಸೂಕ್ತ.
*ಬಸವರಾಜ ಕೆರೋಳಿ,ಕಾಂಗ್ರೆಸ್ ಮುಖಂಡ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆಯಿಂದ ನಮ್ಮ ಗ್ರಾಮದ ರೈತರ ಹೊಲಗಳಿಗೆ ನೀರು ಹರಿಯುತ್ತಿಲ್ಲ. ಯೋಜನೆ ಕೇವಲ ಹೆಸರಿಗಷ್ಟೇ ಎನ್ನುವಂತಾಗಿದೆ. ಹೊಲಗಳಿಗೆ ನೀರು ಹರಿಸಿದರೆ ರೈತರು ನೀರಾವರಿ ಸೌಲಭ್ಯ ಪಡೆಯಬಹುದು.
*ಹಣಮಂತ ಪೂಜಾರಿ,
ತಾಲೂಕು ಜೆಡಿಎಸ್ ಮುಖಂಡ.