ಬೆಂಗಳೂರು : ಇಂದು ಸಂಜೆ ತಮ್ಮ ಸಚಿವ ಪದಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿರುವ ಮೂವರು ಅತೃಪ್ತ ಕಾಂಗ್ರೆಸ್ ಶಾಸಕರ ಪೈಕಿ ಓರ್ವರಾಗಿರುವ ಚಿಂಚೋಳಿ ಶಾಸಕ ಉಮೇಶ್ ಜಾಧವ್ ಅವರ ವಿರುದ್ಧ ಶಿಸ್ತು ಕ್ರಮವಾಗಿ ಅವರಿಗೆ ಈಚೆಗೆ ನೀಡಲಾಗಿದ್ದ ಉಗ್ರಾಣ ಮಂಡಳಿಯ ಅಧ್ಯಕ್ಷ ಹುದ್ದೆಯನ್ನು ಮರಳಿ ಪಡೆಯಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಇಂದು ಈ ನಿರ್ಧಾರ ಕೈಗೊಳ್ಳುವ ಮೂಲಕ ಕಾಂಗ್ರೆಸ್ ನಾಯಕರು, ತಮ್ಮ ಸಂಪರ್ಕಕ್ಕೆ ಸಿಗದೆ ಪಕ್ಷದ ವರಿಷ್ಠರನ್ನು ಕಾಡುತ್ತಿರುವ ಅತೃಪ್ತ ಶಾಸಕರಿಗೆ ಕಠಿನ ಸಂದೇಶವನ್ನು ರವಾನಿಸಿರುವುದು ಸ್ಪಷ್ಟವಿದೆ ಎಂದು ವರದಿಗಳು ಹೇಳಿವೆ.
ನಾಳೆ ಶುಕ್ರವಾರ ಬೆಳಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು ಈ ಸಭೆಗೆ ಕಡ್ಡಾಯವಾಗಿ ಹಾಜರಾಗುವಂತೆ ಸದಸ್ಯರಿಗೆ ವಿಪ್ ಜಾರಿ ಮಾಡಲಾಗಿದೆ.
ಇದರ ಹೊರತಾಗಿಯೂ ಗೈರಾಗುವ ಶಾಸಕರನ್ನು ಅನರ್ಹ ಮಾಡುವಂತೆ ಸ್ಪೀಕರ್ ಅವರನ್ನು ಪಕ್ಷವು ಅಧಿಕೃತವಾಗಿ ಕೋರುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ಈ ನಡುವೆ ಉಮೇಶ್ ಜಾಧವ್ ಸೇರಿದಂತೆ ಒಟ್ಟು ಮೂವರು ಅತೃಪ್ತ ಕಾಂಗ್ರೆಸ್ ಶಾಸಕರು ಇಂದು ಸಂಜೆಯ ಹೊತ್ತಿಗೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.