Advertisement

ಕುಂಚಾವರಂ ವನ್ಯಜೀವಿಧಾಮ ಅರಣ್ಯ ರಕ್ಷಣೆಗೆ ಬೆಂಕಿ ರೇಖೆ

12:19 PM Feb 01, 2020 | Naveen |

ಚಿಂಚೋಳಿ: ತಾಲೂಕಿನ ಕುಂಚಾವರಂ ವನ್ಯಜೀವಿ ಧಾಮ ಅರಣ್ಯ ಪ್ರದೇಶದಲ್ಲಿ ಬೇಸಿಗೆ ದಿನಗಳಲ್ಲಿ ಯಾವುದೇ ಬೆಂಕಿ ಅನಾಹುತ ಸಂಭವಿಸದಂತೆ ಅರಣ್ಯ ಪ್ರದೇಶ ರಕ್ಷಿಸಲು ವಲಯ ವನ್ಯಜೀವಿಧಾಮ ಅರಣ್ಯ ಇಲಾಖೆ ಸಿಬ್ಬಂದಿ ಕಳೆದ ಡಿಸೆಂಬರ್‌ನಿಂದಲೇ ಬೆಂಕಿ ರೇಖೆ (ಫೈರ್‌ ಲೈನ್‌) ನಿರ್ಮಿಸುತ್ತಿದ್ದಾರೆ.

Advertisement

ಶಿವರಾಮಪುರ-ಶಹಾಪುರ ರಾಜ್ಯ ಹೆದ್ದಾರಿಯಲ್ಲಿ ಬರುವ ಕುಂಚಾವರಂ ಅರಣ್ಯಪ್ರದೇಶವನ್ನು 2011ರಲ್ಲಿ ರಾಜ್ಯ ಸರ್ಕಾರ ವನ್ಯಜೀವಿಧಾಮ ಪ್ರದೇಶವೆಂದು ಘೋಷಿಸಿದ ನಂತರ ಕಾಡಿನಲ್ಲಿ ವಿವಿಧ ಜಾತಿಯ ಮರಗಳು, ಕಾಡು ಪ್ರಾಣಿಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.

ಈ ಮೀಸಲು ಅರಣ್ಯಪ್ರದೇಶದಲ್ಲಿ ಯಾವುದೇ ಬೆಂಕಿ ಅನಾಹುತ ಆಗದಂತೆ ಅರಣ್ಯ ಸಿಬ್ಬಂದಿ ರಾಜ್ಯ ಹೆದ್ದಾರಿ ಮತ್ತು ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳು, ಅರಣ್ಯ ಪ್ರದೇಶದಿಂದ ಹಾಯ್ದು ಹೋಗಿರುವ ರಸ್ತೆ ಅಂದರೆ ಒಟ್ಟು 200 ಕಿಮೀ ಉದ್ದದ ಮಾರ್ಗದಲ್ಲಿ ಬೆಂಕಿ ರೇಖೆ ನಿರ್ಮಿಸಲು ಮುಂದಾಗಿದೆ. ಬೆಂಕಿ ಅನಾಹುತ ಉಂಟಾಗುವ ಸೇರಿಭಿಕನಳ್ಳಿ, ಶಾದೀಪುರ, ಮಂಡಿ ಬಸವಣ್ಣ, ಸಂಗಾಪುರ, ಗೊಟ್ಟಂಗೊಟ್ಟ,ಬೊಮ್ಮಾಪುರ, ಕುಂಚಾವರಂ-
ಜಹೀರಾಬಾದ ರಸ್ತೆ, ಬಡಾತಾಂಡಾ, ವಂಟಿಚಿಂತಾ ತಾಂಡಾ ಪ್ರದೇಶ ಎಂದು ಗುರುತಿಸಲಾಗಿರುವ ಅರಣ್ಯದಲ್ಲಿ ರಸ್ತೆ ಬದಿಯಲ್ಲಿ ಜಂಗಲ್‌ ಕಟಿಂಗ್‌ ನಡೆದಿದೆ. ಇದಕ್ಕಾಗಿ ಸ್ಥಳೀಯ 15 ಜನರನ್ನು ವಾಚರ್‌ ಗಳೆಂದು ನೇಮಕ ಮಾಡಿಕೊಳ್ಳಲಾಗಿದೆ.

100 ಕಿಮೀ ಕಾರ್ಯ ಪೂರ್ಣ: ಚಿಂಚೋಳಿ ಅರಣ್ಯ ಪ್ರದೇಶದಲ್ಲಿ ಸುಮಾರು 100 ಕಿಮೀ ಉದ್ದದ ಬೆಂಕಿ ರೇಖೆ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಇದಕ್ಕಾಗಿ ವನ್ಯಜೀವಿಧಾಮ ಇಲಾಖೆ 2.50 ಲಕ್ಷ ರೂ. ಖರ್ಚು ಮಾಡುತ್ತಿದೆ. ಅರಣ್ಯ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ ಪತ್ತೆ ಹಚ್ಚಲು ಇಲಾಖೆಯು 15 ಫೈರ್‌ ವಾಚರ್‌ಗಳಲ್ಲಿ ಪ್ರತಿಯೊಂದು ಗುಂಪಿನಲ್ಲಿ ವಾಚರ್‌ ಗಳಿವೆ. ಫಾರೆಸ್ಟ್‌ ಐ ಪಾಯಿಂಟ್‌ಗಳಲ್ಲಿ ವಾಚರ್‌ ಗಳನ್ನು ನಿಯೋಜಿಸಲಾಗಿರುತ್ತದೆ. ಇವರು ತಮ್ಮ ವ್ಯಾಪ್ತಿಯೊಳಗಿನ ಕಾಡಿನಲ್ಲಿ ಅಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡರೆ ತಕ್ಷಣ ಹಿರಿಯ ಅ ಧಿಕಾರಿಗಳ ಗಮನಕ್ಕೆ ತಂದು, ಬೆಂಕಿ ನಂದಿಸಲು ಮುಂದಾಗುತ್ತಾರೆ.

ಮೂರು ವಿಧದಲ್ಲಿ ಬೆಂಕಿ ಅನಾಹುತ: ಗ್ರೌಂಡ್‌ ಫೈರ್‌ (ತರಗು ಹುಲ್ಲಿಗೆ ಬೆಂಕಿ), ಮಿಡ್‌ ಫೈರ್‌(ಪೊದೆ ಲಂಟಾನ ಇತ್ಯಾದಿ ಬೆಂಕಿ), ಕ್ರೌನ್‌ ಫೈರ್‌ (ಮರಗಳ ತುದಿಯಲ್ಲಿ ಕಾಣಿಸಿಕೊಳ್ಳುವ ಬೆಂಕಿ) ಈ ಮೂರು ರೀತಿಯ ಬೆಂಕಿಯ ಕಾಡ್ಗಿಚ್ಚನ್ನು ವನ್ಯಜೀವಿಧಾಮ ಇಲಾಖೆ ಗುರುತಿಸಿದೆ. ಅತಿದೊಡ್ಡ ಅರಣ್ಯ ಪ್ರದೇಶ: ಕುಂಚಾವರಂ ಅರಣ್ಯ
ಪ್ರದೇಶ ಜಿಲ್ಲೆಯಲ್ಲಿಯೇ ಅತಿ ದೊಡ್ಡ ಅಂದರೆ 13488.31 ಹೆಕ್ಟೇರ್‌ ಪ್ರದೇಶ ಹೊಂದಿದೆ. ಇದರಲ್ಲಿ ವನ್ಯಜೀವಿಧಾಮ ಅರಣ್ಯಪ್ರದೇಶ 134.88 ಚದರ ಕಿಮೀ ಪ್ರದೇಶದ ವ್ಯಾಪ್ತಿಗೆ ಒಳಪಡುತ್ತದೆ. ವಿವಿಧ ಜಾತಿಯ ಮರಗಳು, ಔಷಧಿ ಸಸ್ಯಗಳು, ಹಣ್ಣಿನ ಮರಗಳು ಇಲ್ಲಿವೆ. ತೋಳ, ಮಂಗ, ಕೋತಿ, ಜಿಂಕೆ, ಕಾಡು ಕುರಿ, ಕಾಡುಹಂದಿ, ನವಿಲು, ಮುಳ್ಳು ಹಂದಿ, ಮುಂಗುಸಿ, ಸಾರಂಗ ಹಾಗೂ ಪಕ್ಷಿಗಳು ಇಲ್ಲಿವೆ.

Advertisement

ಕುಂಚಾವರಂ ಬೆಂಕಿ ರೇಖೆ ಎಂದರೇನು? ಅರಣ್ಯಪ್ರದೇಶ ಸುರಕ್ಷತೆಗೆ ಅಗತ್ಯ ಕ್ರಮ
ಕೈಗೊಳ್ಳಲಾಗುತ್ತಿದೆ. ಜನರು ಕಾಡಿನೊಳಗೆ ಹೋಗದಂತೆ ಎಚ್ಚರಿಕೆ ನೀಡಲಾಗುತ್ತಿದೆ. ಅಲ್ಲದೇ ತಾಂಡಾ ಮತ್ತು ಗ್ರಾಮಗಳಲ್ಲಿ ಡಂಗೂರ ಸಾರುವ ಮೂಲಕ ಜನ ಜಾಗೃತಿ ಮೂಡಿಸಲಾಗುತ್ತಿದೆ.
ಸಂಜೀವಕುಮಾರ ಚವ್ಹಾಣ,
ವನ್ಯಜೀವಿಧಾಮ ಅರಣ್ಯಾಧಿಕಾರಿ, ಕುಂಚಾವರಂ

ಮಳೆಗಾಲ ಮತ್ತು ಚಳಿಗಾಲದಲ್ಲಿ ಕುಂಚಾವರಂ ಅರಣ್ಯಪ್ರದೇಶ ಹಚ್ಚ ಹಸಿಗಿನಿಂದ ಕಂಗೊಳಿಸುತ್ತದೆ. ಸಣ್ಣಪುಟ್ಟ ಜಲಪಾತಗಳು ಉಕ್ಕಿ ಹರಿಯುತ್ತವೆ. ಬೆಟ್ಟ-ಗುಡ್ಡಗಳ್ಳಿ ಬೆಳೆದಿರುವ ಬಾನೆತ್ತರದ ಮರಗಳಿಂದ ಕೂಡಿದ ಇಂತಹ ಪ್ರದೇಶವನ್ನು ರಕ್ಷಿಸಬೇಕಿದೆ. ಇದೊಂದು ನಮ್ಮ ಭಾಗದ ಮಲೆನಾಡು ಪ್ರದೇಶ. ಕಾಡಿನೊಳಗೆ ಹೋಗುವ ಸಂದರ್ಭದಲ್ಲಿ ಪ್ರಯಾಣಿಕರು ಬೀಡಿ, ಸಿಗರೇಟ್‌ ಸೇದಬಾರದು.
ಶಿವನಾಗಯ್ಯ ಸ್ವಾಮಿ,
ಸಮಾಜ ಸೇವಕ

ಬೆಂಕಿ ರೇಖೆ ಎಂದರೇನು?
ವಸಂತ ಋತುವಿನಲ್ಲಿ ಮರಗಳ ಎಲೆಗಳು ಸಾಮಾನ್ಯವಾಗಿ ಉದುರಿ, ಹೊಸ ಎಲೆಗಳು ಚಿಗುರುತ್ತವೆ. ಇದರಿಂದ ಅಪಾರ ಪ್ರಮಾಣದಲ್ಲಿ ಉದುರಿದ ಎಲೆಗಳು ಒಂದೆಡೆ ಸಂಗ್ರಹವಾಗಿರುತ್ತದೆ. ದಾರಿ ಹೋಕರು, ವಿಶ್ರಾಂತಿಗೆ ಆಗಮಿಸಿದ ಜನರು ಧೂಮಪಾನ
ಮಾಡಿ ಬೀಸಾಡುವ ಸಿಗರೇಟ್‌, ಬೀಡಿಯ ಕಿಡಿಹೊತ್ತಿ ಬೆಂಕಿ ತಗಲುವ ಸಾಧ್ಯತೆಗಳು ಹೆಚ್ಚು .ಹಿಂದೆ ಇಂತಹ ಅನೇಕ ಘಟನೆಗಳು ಬಹಳಷ್ಟು ಕಡೆ ನಡೆದಿವೆ. ಅರಣ್ಯದಲ್ಲಿ ಈ ರೀತಿ ಏಕಾಏಕಿ ಉಂಟಾಗುವ ಬೆಂಕಿಯನ್ನು ತಡೆಯುವ ಅಥವಾ ದೂರದವರೆಗೆ ವ್ಯಾಪಿಸದಂತೆ ಬೆಂಕಿ ರೇಖೆ (ಫೈರ್‌ ಲೈನ್‌) ತಂತ್ರ ಬಳಕೆ ಮಾಡಲಾಗುತ್ತದೆ. ಅರಣ್ಯ ಪ್ರದೇಶದ ಮೂಲಕ ಸಾಗುವ ರಸ್ತೆಗಳ ಅಕ್ಕ-ಪಕ್ಕ, ಕಾಡಿನ ಕಾಲು ದಾರಿಗಳು, ಬೆಂಕಿ ಸ್ಥಳಗಳನ್ನು ಗುರುತಿಸಲಾಗುತ್ತದೆ. ನಂತರ ಮೂರು ಮೀಟರ್‌ ಅಗಲದ ಅಂತರದಲ್ಲಿ ಅರಣ್ಯ ಸಿಬ್ಬಂದಿಯೇ ಬೆಂಕಿ ಹಚ್ಚಿ ಒಣಗಿದ ಹುಲ್ಲು, ತರಗು ಗಿಡಗಳನ್ನು ಸುಟ್ಟು ನಾಶಪಡಿಸುತ್ತಾರೆ. ಬೆಂಕಿ ಒಂದು ಕಡೆಯಿಂದ ಮತ್ತೂಂದು ಕಡೆಗೆ ಹರಡುವುದನ್ನು ತಡೆಯುವುದಕ್ಕೆ ಇದೊಂದು ತಂತ್ರವಾಗಿದೆ.

„ಶಾಮರಾವ ಚಿಂಚೋಳಿ

Advertisement

Udayavani is now on Telegram. Click here to join our channel and stay updated with the latest news.

Next