ಚಿಂಚೋಳಿ: ಮೀಸಲು ಚಿಂಚೋಳಿ ವಿಧಾನಸಭೆ ಮತಕ್ಷೇತ್ರಕ್ಕೆ ಕಳೆದ ಮೇ 19 ರಂದು ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಮುಖಂಡರು ಹಾಗೂ ಬಿ.ಎಸ್. ಯಡಿಯೂರಪ್ಪ ಅವರು ನಮ್ಮ ಪಕ್ಷದ ಅಭ್ಯರ್ಥಿ ಗೆದ್ದರೆ ತಾಲೂಕಿನಲ್ಲಿ ಹೊಸದಾಗಿ, ಇಲ್ಲವೇ ನನೆಗುದಿಗೆ ಬಿದ್ದಿರುವ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಬ್ಬು ಬೆಳೆಗಾರರಲ್ಲಿ ಆಸೆ ಚಿಗುರೊಡೆದಿದೆ.
ಚಿಂಚೋಳಿ ಮೀಸಲು ವಿಧಾನಸಭೆ ಉಪ ಚುನಾವಣೆಯಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಷಣ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಂದಿನ ಎರಡು ತಿಂಗಳಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಮುಂದಿನ ಮುಖ್ಯಮಂತ್ರಿ ನಾನೇ ಆಗಲಿದ್ದೇನೆ. ಆಗ ಅನೇಕ ವರ್ಷಗಳಿಂದ ಹೊರ ವಲಯದ ಚಿಂಚೋಳಿ-ಕಲಬುರಗಿ ರಾಜ್ಯ ಹೆದ್ದಾರಿ ಬಳಿಯಲ್ಲಿ ನನೆಗುದಿಗೆ ಬಿದ್ದಿರುವ ಸಕ್ಕರೆ ಕಾರ್ಖಾನೆ ಪ್ರಾರಂಭಿಸುತ್ತೇನೆ ಎಂದು ಭರವಸೆ ನೀಡಿದ್ದರು. ಅಲ್ಲದೇ ಮಾಜಿ ಕೇಂದ್ರ ಸಚಿವ ಬಸವಣ್ಣಗೌಡ ಯತ್ನಾಳ ಅವರು ಭರವಸೆ ನೀಡಿದ್ದರು. ಅದೀಗ ಈಡೇರುವುದೇ ಎನ್ನುವ ಆಶಾ ಭಾವನೆ ಕಬ್ಬು ಬೆಳೆವ ರೈತರದ್ದಾಗಿದೆ.
ಆಗ ಶಾಸಕ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದ ಬಿಜೆಪಿ ಅಭ್ಯರ್ಥಿ ಡಾ| ಅವಿನಾಶ ಜಾಧವ ಮತ್ತು ಕಲಬುರಗಿ ಲೋಕಸಭೆಗೆ ಸ್ಪರ್ಧಿಸಿದ್ದ ಡಾ| ಉಮೇಶ ಜಾಧವ ಭರವಸೆಗಳ ಮಹಾಪೂರವನ್ನೇ ಹರಿಸಿದ್ದರು. ಈಗ ಇವರಿಬ್ಬರೂ ಗೆಲವು ಸಾಧಿಸಿದ್ದಾರೆ. ಅಲ್ಲದೇ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾರೆ. ಹೀಗಿರುವಾಗ ಹೊಸ ಸಕ್ಕರೆ ಸ್ಥಾಪನೆ ಆಗೇ ಆಗುತ್ತದೆ ಎನ್ನುವ ನಿರೀಕ್ಷೆಯಲ್ಲಿ ಕಬ್ಬುಬೆಳೆಗಾರರಿದ್ದಾರೆ.
ಚಿಂಚೋಳಿ ಸಕ್ಕರೆ ಕಾರ್ಖಾನೆಯನ್ನು 1998ರಲ್ಲಿ ಆಗಿನ ಕೇಂದ್ರ ಮಾಜಿ ಹಣಕಾಸು ಸಚಿವ ಪಿ. ಚಿದಂಬರ ಅಡಿಗಲ್ಲು ಸಮಾರಂಭ ನೆರವೇರಿಸಿದ್ದರು. 200 ಎಕರೆ ಜಮೀನು ಪ್ರದೇಶ ಹೊಂದಿರುವ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ಚೆನ್ನೈ ಕೊಯಮತ್ತೂರನ ರಾಜಶ್ರೀಪತಿ ಮತ್ತು ಹೈದ್ರಾಬಾದ್‌ನ ಟರ್ಬೋ ಕಂಪನಿಗೆ ನೀಡಲಾಗಿತ್ತು. ಎರಡು ಕಂಪನಿಗಳು ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ಅತ್ಯಾಧುನಿಕ ಯಂತ್ರೋಪಕರಣ ಅಳವಡಿಸಿದ್ದವು. ನಂತರ ಹಣಕಾಸಿನ ಸಮಸ್ಯೆಯಿಂದಾಗಿ ಕಾರ್ಖಾನೆ ಕಾರ್ಯಾರಂಭವಾಗದೇ ಎರಡು ದಶಕಗಳಿಂದ ನನೆಗುದಿಗೆ ಬಿದ್ದಿದೆ.
ತಾಲೂಕಿನಲ್ಲಿ ಕಬ್ಬು ಬೆಳೆದ ರೈತರು ಹುಮನಾಬಾದನ ಹಳ್ಳಿಖೇಡ, ಯಾದಗಿರಿ ಮತ್ತು ಮನ್ನಾಎಕ್ಕೆಳ್ಳಿಗೆ ಕಬ್ಬನ್ನು ಸಾಗಿಸುತ್ತಾರೆ. ಚಿಂಚೋಳಿ ಪಟ್ಟಣದಲ್ಲಿಯೇ ಹೊಸದಾಗಿ ಸಕ್ಕರೆ ಕಾರ್ಖಾನೆ ಇಲ್ಲವೇ ನನೆಗುದಿಗೆ ಬಿದ್ದಿರುವ ಕಾರ್ಖಾನೆ ಪ್ರಾರಂಭಿಸಿದರೆ ಹಿಂದುಳಿದ ಭಾಗದ ಕಬ್ಬು ಬೆಳೆಗಾರರಿಗೆ ಅನುಕೂಲವಾಗುತ್ತದೆ.