ಚಿಂಚೋಳಿ: 2021-22ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ತಾಲೂಕು ಜಿಲ್ಲೆಯಲ್ಲೇ ಅತಿ ಹೆಚ್ಚು ಮಾನವ ಉದ್ಯೋಗ ದಿನಗಳನ್ನು ಸೃಜನ ಮಾಡುವುದರ ಮೂಲಕ ಉತ್ತಮ ಸಾಧನೆ ಮಾಡಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅನಿಲಕುಮಾರ ರಾಠೊಡ ತಿಳಿಸಿದರು.
ತಾಪಂ ಸಭಾಂಗಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2021-22ನೇ ಸಾಲಿನಲ್ಲಿ 10,15,321 ಮಾನವ ದಿನಗಳ ಸೃಜನೆಯ ಗುರಿ ನಿಗದಿಪಡಿಸಲಾಗಿತ್ತು. ಗುರಿ ಸಾಧನೆಗಾಗಿ ಉದ್ಯೋಗ ಖಾತ್ರಿ ಕೆಲಸಗಳನ್ನು ಕಾರ್ಯಾರಂಭ ಮಾಡಿ, ಎಲ್ಲ ಗ್ರಾಮ ಪಂಚಾಯಿತಿ ಸಿಬ್ಬಂದಿ ತಾಲೂಕಿನಲ್ಲಿ ಕಳೆದ ಮಾರ್ಚ್ 31ರ ಅಂತ್ಯಕ್ಕೆ ಒಟ್ಟು 12,57,907 ಮಾನವ ದಿನಗಳನ್ನು ಸೃಜನ ಮಾಡಿದ್ದಾರೆ. ಈ ಮೂಲಕ ಶೇ. 123.89ರಷ್ಟು ಗುರಿ ಸಾಧನೆಯೊಂದಿಗೆ ತಾಲೂಕು ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ ಎಂದು ಹೇಳಿದರು.
ಪ್ರಸ್ತುತ 2022-23ನೇ ಸಾಲಿನ ಹಣಕಾಸು ವರ್ಷ ಪ್ರಾರಂಭವಾಗಿದೆ. ಕಳೆದ ವರ್ಷದ ಗುರಿ ಸಾಧನೆಯಂತೆ ಈ ವರ್ಷವೂ ಉತ್ತಮ ಪ್ರಗತಿ ಸಾಧಿಸಲು 10,42,093 ಮಾನವ ದಿನಗಳ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಗ್ರಾಮ ಪಂಚಾಯಿತಿ ಪಿಡಿಒ, ಇತರೆ ಸಿಬ್ಬಂದಿಗೆ ನರೇಗಾ ಕಾಮಗಾರಿಗಳನ್ನು ಪ್ರಾರಂಭಿಸಲು ಸೂಚನೆ ನೀಡಲಾಗಿದೆ. ಅದರಂತೆ ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ಕೆಲಸ ಪ್ರಾರಂಭಿಸಲಗಿದೆ ಎಂದು ವಿವರಿಸಿದರು.
ತಾಲೂಕಿನ ಕುಂಚಾವರಂ ಗ್ರಾಪಂ ಅತಿ ಹೆಚ್ಚು 950, ಚಿಮ್ಮನಚೋಡ ಗ್ರಾಪಂ 512 ಕೂಲಿಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನು ಹೆಚ್ಚಿನ ಕೂಲಿಕಾರರಿಗೆ ಕೆಲಸಕ್ಕೆ ಬರುವಂತೆ ಪ್ರೇರೇಪಿಸಲು ಎಲ್ಲ ಗ್ರಾಪಂಗಳಲ್ಲಿಯೂ “ದುಡಿಯೋಣ ಬಾರಾ’ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಕೂಲಿಕಾರ್ಮಿಕರು ಕೆಲಸ ಬಯಸಿ ನಗರ ಪ್ರದೇಶಗಳಿಗೆ ವಲಸೆ ಹೋಗದೇ, ಸ್ಥಳೀಯವಾಗಿ ತಮ್ಮ ಗ್ರಾಮಗಳಲ್ಲಿಯೇ ಕೆಲಸ ನಿರ್ವಹಿಸಿ ನರೇಗಾ ಯೋಜನೆ ಸದುಪಯೋಗ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು. ಪಿಡಿಒ ವಾಲಿ ಬಕ್ಕಪ್ಪ, ಸಂಜೀವಕುಮಾರ ಕಳಸ್ಕರ, ಭೀಮಸೇನ, ರಮೇಶ ದೇಗಲಮಡಿ ಮತ್ತಿತರರು ಇದ್ದರು.
ಪ್ರಸ್ತುತ ಸಾಲಿನ ಕ್ರಿಯಾ ಯೋಜನೆಯನ್ನು ಜಲ ಸಂರಕ್ಷಣೆ ಕಾಮಗಾರಿ (ಅಂತರ್ಜಲ ಚೇತನ), ಅರಣ್ಯ ಇಲಾಖೆ, ಪ್ರಾಕೃತಿಕ ಸಂಪನ್ಮೂಲ ಕಾಮಗಾರಿಗಳು ಶೇ. 65, ರಸ್ತೆ ಕಾಮಗಾರಿಗಳು ಶೇ.10, ಇತರೆ ಶೇ. 25 ಕಾಮಗಾರಿಗಳು ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಭರದಿಂದ ನಡೆಯುತ್ತಿವೆ. ಎನ್.ಎಂ.ಎಂ.ಎಸ್ ಆ್ಯಪ್ ಮೂಲಕ ಕಡ್ಡಾಯವಾಗಿ ಹಾಜರಾತಿ ತೆಗೆದುಕೊಳ್ಳಲಾಗುತ್ತಿದೆ. ಪ್ರಾರಂಭದಲ್ಲಿ ಕೆಲವು ಗ್ರಾಪಂಗಳಲ್ಲಿ ಸರ್ವರ್, ನೆಟವರ್ಕ್ ಸಮಸ್ಯೆಗಳು ಕಂಡು ಬಂದಿದ್ದು, ಎಲ್ಲ ಗ್ರಾಪಂಗಳಿಗೆ ನೋಡಲ್ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದಾರೆ.
-ಅನಿಲಕುಮಾರ ರಾಠೊಡ, ಇಒ