ಚಿಂಚೋಳಿ: ಮೀಸಲು (ಪರಿಶಿಷ್ಟ ಜಾತಿ)ವಿಧಾನಸಭೆಯಲ್ಲಿ ಸ್ಪರ್ಧಿಸುವ ಸ್ಥಳೀಯ ಎಡಗೈ ಮತ್ತು ಬಲಗೈ ಸಮುದಾಯಗಳ ಮುಖಂಡರ ಮೇಲೆ ಸವರ್ಣೀಯರು ಕರುಣೆ ಮತ್ತು ಪ್ರೀತಿ ತೋರಿಸಿ ಒಂದು ಸಲ ಶಾಸಕರಾಗುವ ಅವಕಾಶ ನೀಡಬೇಕೆಂದು ದಲಿತ ಹಿರಿಯ ಮುಖಂಡ ರಮೇಶ ಯಾಕಾಪುರ ಮನವಿ ಮಾಡಿದರು.
ಮಾಜಿ ಮುಖ್ಯಮಂತ್ರಿ ದಿ.ವೀರೇಂದ್ರ ಪಾಟೀಲರ ಸಮಾಧಿ ಸ್ಥಳದಲ್ಲಿ ಶುಕ್ರವಾರ ಎಡಗೈ ಮತ್ತು ಬಲಗೈ ಸಮುದಾಯಗಳ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಎಡಗೈ ಮತ್ತು ಬಲಗೈ ಸಮುದಾಯದ 46 ಸಾವಿರ ಮತದಾರರು ಇದ್ದರೂ ನಮಗೆ ಶಾಸಕರಾಗುವ ಅವಕಾಶಗಳು ಸಿಗುತ್ತಿಲ್ಲ. ಪ್ರತಿಯೊಂದು ತಾಂಡಾಗಳಲ್ಲಿ ಕೇವಲ ಒಂದೆರಡು ಮನೆಗಳಿರುವ ತಾಂಡಾಗಳನ್ನೇ ಹೆಚ್ಚು ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ. ಆದರೆ ಪ್ರತಿ ಗ್ರಾಮಗಳಲ್ಲಿ ದಲಿತರು ವಾಸಿಸುತ್ತಿದ್ದಾರೆ ಎಂದು ಹೇಳಿದರು.
ಅನೇಕ ವರ್ಷಗಳಿಂದ ಮೇಲ್ವರ್ಗದ ಸವರ್ಣೀಯರ ರಕ್ಷಣೆ ಹಾಗೂ ಹೊಲಗದ್ದೆಗಳಲ್ಲಿ ದುಡಿಯುವ, ಸತ್ತ ದನಕರುಗಳನ್ನು ಎತ್ತಿ ಬೀಸಾಡುವ ನಾವು ಮೇಲ್ವರ್ಗದವರ ಸೇವಕರಾಗಿ ದುಡಿಯುತ್ತಿದ್ದೇವೆ. ಆದರೆ ನಮಗೆ ರಾಜಕೀಯ ಅಧಿಕಾರ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತಿದ್ದ ಬಂಜಾರಾ ಲಂಬಾಣಿ ಸಮಾಜವನ್ನು ಮುಖ್ಯಮಂತ್ರಿ ಡಿ. ದೇವರಾಜ ಅರಸು ಸಚಿವ ಸಂಪುಟದಲ್ಲಿ ಭೋವಿ ಮತ್ತು ಲಂಬಾಣಿ ಜಾತಿ ಶಾಸಕರೇ ಇಲ್ಲದಿದ್ದರೂ ಎಡಗೈ ಮತ್ತು ಬಲಗೈ ಶಾಸಕರು ಸಂವಿಧಾನದಲ್ಲಿ ತಿದ್ದುಪಡಿ ಮಾಡಿ ಎಸ್‌ಸಿ ಪಟ್ಟಿಗೆ ಸೇರಿಸಿರುವುದರಿಂದ ಲಂಬಾಣಿ ಜನಾಂಗಕ್ಕೆ ಎಲ್ಲ ಅವಕಾಶಗಳು ಸಿಗುತ್ತಿವೆ. ಸಂವಿಧಾನದ ಪ್ರಕಾರ ಮೀಸಲಾತಿ ಕೇವಲ ದಲಿತರಿಗಾಗಿದ್ದು, ಈಗ ಎಲ್ಲ ವರ್ಗದವರಿಗೆ ಕಲ್ಪಿಸಲಾಗಿದೆ. ಇಂದು ಎರಡೂ ಸಮುದಾಯದವರು ಒಗ್ಗಟ್ಟಾಗಿ ಲೋಕಸಭೆ, ವಿಧಾನಸಭೆ ಹಾಗೂ ಜಿಪಂ, ತಾಪಂ ಚುನಾವಣೆಯಲ್ಲಿ ಶಕ್ತಿ ಪ್ರದರ್ಶನ ಮಾಡಬೇಕಾಗಿದೆ ಎಂದರು.
ಜಿ.ಪಂ ಮಾಜಿ ಅಧ್ಯಕ್ಷ ಭೀಮರಾವ ತೇಗಲತಿಪ್ಪಿ ಮಾತನಾಡಿ, ನಾವೆಲ್ಲರೂ ಮುಸ್ಲಿಂ ಮತ್ತು ಲಂಬಾಣಿ ಜಾತಿಯವರಂತೆ ಒಗ್ಗಟ್ಟಿನಿಂದ ಕೂಡಿರಬೇಕಾಗಿದೆ. ನಮ್ಮ ಸಮಾಜ ತಾಲೂಕಿನಲ್ಲಿ ಹೆಚ್ಚಿನ ಮತಗಳು ಹೊಂದಿದ್ದರೂ ಚುನಾವಣೆ ಸಂದರ್ಭದಲ್ಲಿ ಕಡೆಗಾಣಿಸಲಾಗುತ್ತಿದೆ. ಹೀಗಾಗಿ ನಾವೆಲ್ಲ ಒಂದೇ ಎನ್ನುವ ಭಾವನೆ ಬರಬೇಕಾಗಿವೆ ಎಂದು ಹೇಳಿದರು.
ಗಣಪತರಾವ್ ಚಿಮ್ಮನಚೋಡಕರ, ಗೋಪಾಲರಾವ್ ಕಟ್ಟಿಮನಿ, ಮಾಣಿಕರಾಗ ಗುಲಗುಂಜಿ, ಆನಂದ ಟೈಗರ್, ಗೌತಮ ಬೊಮ್ಮನಳ್ಳಿ, ಶಿವಕುಮಾರ ಕೊಳ್ಳೂರ, ನಿವೃತ್ತ ಬ್ಯಾಂಕ್ ಅಧಿಕಾರಿ ಎಚ್.ಎಸ್. ಮಟ್ಟಿ, ಜಿ.ಪಂ ಸದಸ್ಯ ಸಂಜೀವನ್ ಯಾಕಾಪುರ, ರಾಜಾ ಶಿವಶರಣಪ್ಪ ಮಾತನಾಡಿದರು.
ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಸಿವಿಲ್ ನ್ಯಾಯಲಯದ ನಿವೃತ್ತ ನ್ಯಾಯಾಧೀಶ ಜಿ.ಕೆ. ಗೋಖಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಂತಕುಮಾರ ಕಟ್ಟಿಮನಿ, ಈರಪ್ಪ ಓಂಕಾರ, ಸುಭಾಷ ಶೀಲವಂತ, ಶರಣಪ್ಪ ಮಾಳಗಿ, ಸೈಬಣ್ಣ ಕೊಂಡಂಪಳ್ಳಿ ಇನ್ನಿತರರಿದ್ದರು. ಆರ್. ಗಣಪತರಾವ ಸ್ವಾಗತಿಸಿದರು, ಪ್ರೇಮಕುಮಾರ ಕಟ್ಟಿ ನಿರೂಪಿಸಿದರು, ಮಾರುತಿ ಗಂಜಗಿರಿ ವಂದಿಸಿದರು.