ಚಿಂಚೋಳಿ: ತಾಲೂಕಿನಲ್ಲಿ ಕಳೆದ ನಾಲ್ಕು ದಿನಗಳಿಂದ ಮಳೆರಾಯನ ಆರ್ಭಟಕ್ಕೆ ನದಿಗಳು ಉಕ್ಕಿ ಹರಿಯುತ್ತಿವೆ ಮತ್ತು ಬ್ಯಾರೆಜ್ ಸೇತುವೆಗಳು ಜಲಾವೃತಗೊಂಡಿರುವುದರಿಂದ ಅನೇಕ ಗ್ರಾಮಗಳ ಗ್ರಾಮಸ್ಥರಿಗೆ ತೊಂದರೆಯುಂಟಾಗಿದೆ.
ತಾಲೂಕಿನಲ್ಲಿ ಮಳೆ ಅರ್ಭಟಕ್ಕೆ ಕೆಳದಂಡೆ ಮುಲ್ಲಾಮಾರಿ ಜಲಾಶಯದಿಂದ ನಾಲ್ಕು ಗೇಟುಗಳ ಮೂಲಕ ಎರಡು ಸಾವಿರ ಕ್ಯೂಸೆಕ್ ನೀರು ಹರಿದು ಬಿಟ್ಟಿರುವುದರಿಂದ ಚಿಮ್ಮನಚೋಡ, ತಾಜಲಾಪುರ, ಗರಗಪಳ್ಳಿ, ಕನಕಪುರ, ಗೌಡನಹಳ್ಳಿ, ಗಾರಂಪಳ್ಳಿ ಸೇತುವೆಗಳು ಕಳೆದ ಮೂರು ದಿನಗಳಿಂದ ಜಲಾವೃತವಾಗಿವೆ.
ಇದರಿಂದಾಗಿ ರೋಗಿಗಳು ಆಸ್ಪತ್ರೆಗೆ ಹೋಗುವುದಕ್ಕೆ ತೊಂದರೆ ಪಡಬೇಕಾಗಿದೆ. ಚಿಮ್ಮನಚೋಡ ಸೇತುವೆ ಜಲಾವೃತದಿಂದಾಗಿ ಸಲಗರಬಸಂತಪುರ, ಮದರಗಿ, ನಿರ್ಣಾ, ಮುತ್ತಂಗಿ, ಮನ್ನಾಎಕ್ಕೆಳಿಗೆ ಹೋಗುವ ವಾಹನಗಳು ಚಿಂಚೋಳಿ ರಸ್ತೆ ಮೂಲಕ ಹೋಗಬೇಕಾಯಿತು.
ಗರಗಪಳ್ಳಿ ಸೇತುವೆ ಮುಳುಗಿದ ಪ್ರಯುಕ್ತ ಕುಂಚಾವರಂ ಸುಲೇಪೇಟ ಮಾರ್ಗರಸ್ತೆ ಸಂಚಾರಕ್ಕೆ ಅಡ್ಡಿಯಾಯಿತು.
ತಾಜಲಾಪುರ ಗ್ರಾಮದ ಮತ್ತಗಾರಂಪಳ್ಳಿ ಗ್ರಾಮದ ಸೇತುವೆ ಮಳೆ ನೀರಿನಿಂದ ಮುಳುಗಿ ಹೋಗಿದ್ದರಿಂದ ಜನರು ಊರೊಳಗೆ ಹೋಗಲು ರಸ್ತೆ ಇಲ್ಲದಿರುವ ಕಾರಣ ತುಮಕುಂಟಾ ರಸ್ತೆ ಮೂಲಕ ಗ್ರಾಮಕ್ಕೆಬರಬೇಕಾಗಿದೆ ಎಂದು ಸತೀಶರೆಡ್ಡಿ ತಾಜಲಾಪುರ ಮತ್ತು ಹಣಮಂತ ಬೋವಿ ತಿಳಿಸಿದ್ದಾರೆ.
ಗಾರಂಪಳ್ಳಿ ಗ್ರಾಮದ ವ್ಯಕ್ತಿಯೋರ್ವನು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಅವರ ಮೃತ ದೇಹ ಕಲಬುರಗಿ ಆಸ್ಪತ್ರೆಯಿಂದ ತಂದಾಗ ರಾತ್ರಿಯ ಸೇತುವೆ ತುಂಬಿ ಹರಿಯುವುದರಿಂದಶವ ನದಿ ದಂಡೆಯ ಹತ್ತಿರದಲ್ಲಿ ಇಡಬೇಕಾಯಿತು.ಶವ ಸಂಸ್ಕಾರಕ್ಕೆ ತೊಂದರೆಯಾಯಿತು.
ಕುಂಚಾವರಂ ಗಡಿಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಿಂದಾಗಿ ಎತ್ತಪೋತ ಜಲಧಾರೆ ಮೈದುಂಬಿಹರಿಯುತ್ತಿದೆ.