ಚಿಂಚೋಳಿ: ಗುರುವಿನ ಪಾದಪೂಜೆ ವೀರಶೈವದಲ್ಲಿ ವಿಶೇಷ ಸ್ಥಾನವಿದೆ. ಪಾದ ಸ್ಪರ್ಶ ಮಾಡಿದರೆ ಮುಕ್ತಿ ಸಿಗಲಿದೆ. ಪ್ರತಿಯೊಬ್ಬರಿಗೂ ಗುರುವಿನ ಮೇಲೆ ಅಪಾರ ಭಕ್ತಿ ಇರಬೇಕು ಎಂದು ಚಿಂಚೋಳಿ ಹಾರಕೂಡ ಹಿರೇಮಠದ ಸಂಸ್ಥಾನ ಪೀಠಾಧಿಪತಿ ಡಾ| ಚನ್ನವೀರ ಶಿವಾಚಾರ್ಯರರು ಹೇಳಿದರು.
ಪಟ್ಟಣದ ಹಾರಕೂಡ ಚನ್ನಬಸವೇಶ್ವರ ಮಠದಲ್ಲಿ ಮಂಗಳವಾರ ಗುರುಪೂರ್ಣಿಮೆ ನಿಮಿತ್ತ ನಡೆದ ಪಾದಪೂಜೆ ಕಾರ್ಯಕ್ರಮದಲ್ಲಿ ಸ್ವಾಮೀಜಿ ಮಾತನಾಡಿದರು.
ಗುರು ಮತ್ತು ಪಾದಪೂಜೆ ಅತಿ ಶ್ರೇಷ್ಠವಾದುದು. ಕೆಲವು ಕಡೆ ಮಳೆ ಇದೆ. ಇನ್ನು ಕೆಲವು ಪ್ರದೇಶದಲ್ಲಿ ಮಳೆ ಇಲ್ಲ. ಪುಣ್ಯಪುರುಷರು, ಮಹಾತ್ಮರ ಶರಣ ಕೃಪೆಯಿಂದಾಗಿ ಇನ್ನು ಮುಂದೆ ಚೆನ್ನಾಗಿ ಬರಲಿದೆ. ಹಾರಕೂಡ ಚನ್ನಬಸವೇಶ್ವರ ಆಶೀರ್ವಾದ ಸದಾ ಭಕ್ತರ ಮೇಲಿದೆ ಎಂದು ಹೇಳಿದರು.
ಹಾರಕೂಡ ಮಠದಲ್ಲಿ ಬೆಳಗಿನಿಂದಲೇ ಚನ್ನಬಸವ ಶಿವಯೋಗಿಗಳ ಗದ್ದುಗೆ ವಿಶೇಷ ಪೂಜೆ, ಅಭಿಷೇಕ ಮತ್ತು ಬಿಲ್ವ ಪತ್ರಿ, ಹೂವುಗಳ ಪುಷ್ಪಾರ್ಚನೆ ಮಾಡಲಾಯಿತು.
ಭಕ್ತರ ಜಯಘೋಷಗಳ ಮಧ್ಯೆ ಹಾರಕೂಡ ಪೀಠಾಧಿ ಪತಿಗಳ ಪಾದಪೂಜೆ ಮಾಡಲಾಯಿತು. ಜಿಪಂ ಸದಸ್ಯ ಗೌತಮ ಪಾಟೀಲ, ಚನ್ನಬಸಪ್ಪ ನಾವದಗಿ, ಶಾಮರಾವ ಸೀಳಿನ, ನಾಗರಾಜ ಕಲಬುರಗಿ, ಸಂತೋಷ ಗಡಂತಿ, ರಾಜಶೇಖರ ಮಜ್ಜಗಿ, ನಾಗರಾಜ ಮಲಕೂಡ, ಅಪ್ಪಣ್ಣ, ಕಾತಿಕೇಯ ಸ್ವಾಮಿ, ಮಲ್ಲಿಕಾರ್ಜುನ ಶಾಸ್ತ್ರಿಗಳು, ನವಲಿಂಗ ಪಾಟೀಲ ಇದ್ದರು.
ಬೀದರ, ಕಲಬುರಗಿ, ಬಸವಕಲ್ಯಾಣ, ಸೇಡಂ, ಹುಮನಾಬಾದ, ಚಿತ್ತಾಪುರ, ಭಾಲ್ಕಿ ಇನ್ನತರ ನಗರ ಪ್ರದೇಶಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.