ಚಿಂಚೋಳಿ: ತಾಲೂಕಿನ ಅನೇಕ ಗ್ರಾಮಗಳಲ್ಲಿ ತೊಗರಿ ರಾಶಿ ಜೋರಾಗಿ ನಡೆಯುತ್ತಿದ್ದರೂ ಬೆಂಬಲ ಬೆಲೆ ಅತಿ ಕಡಿಮೆ ಇರುವುದರಿಂದ, ತೊಗರಿ ಬೆಳೆದ ರೈತರಲ್ಲಿ ನಿರಾಸೆ ಭಾವನೆ ಮೂಡಿಸಿದೆ.
ತಾಲೂಕಿನಲ್ಲಿ ಪ್ರಸಕ್ತ ಸಾಲಿನ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ಮಾತ್ರ ಉತ್ತಮ ಮಳೆ ಆಗಿರುವುದರಿಂದ ರೈತರು ತೊಗರಿ ಬೆಳೆಯನ್ನೇ ಹೆಚ್ಚಾಗಿ ಬೆಳೆದಿದ್ದಾರೆ. ಈಗ ಹಲವು ಗ್ರಾಮಗಳಲ್ಲಿ ತೊಗರಿ ರಾಶಿ ಜೋರಾಗಿ ನಡೆಯುತ್ತಿದೆ. ಪ್ರಸಕ್ತ ಸಾಲಿನಲ್ಲಿ 60 ಸಾವಿರ ಹೆಕ್ಟೇರ್ ಜಮೀನಿನಲ್ಲಿ ರೈತರು ತೊಗರಿ ಬಿತ್ತನೆ ಮಾಡಿದ್ದಾರೆ.
ಕೋಡ್ಲಿ, ರಟಕಲ್, ಸುಲೇಪೇಟ, ಶಿರೋಳಿ, ಸಾಲೇಬೀರನಳ್ಳಿ, ಕನಕಪುರ, ಚಿಮ್ಮಾಇದಲಾಯಿ, ಐನೋಳಿ, ಪೋಲಕಪಳ್ಳಿ, ಗಣಾಪುರ, ಕರಚಖೇಡ, ರುದನೂರ, ಬೂತಪುರ, ಕೊರವಿ, ಕುಡಹಳ್ಳಿ,ದೇಗಲಮಡಿ, ರಾಯಕೋಡ, ಹಲಚೇರ ಗ್ರಾಮಗಳಲ್ಲಿ ತೊಗರಿ ರಾಶಿ ನಡೆಯುತ್ತಿದೆ. ಪ್ರತಿ ಎಕರೆಗೆ ಐದಾರು ಕ್ವಿಂಟಲ್ ತೊಗರಿ ಇಳುವರಿ ಬರಬಹುದೆಂದು ರೈತರ ನಿರೀಕ್ಷೆಯಾಗಿದೆ.
ಕರಿಕಲ್ಲಿನ ಬಿಸಿಲು ನಾಡು ಪ್ರದೇಶಗಳೆಂದು ಕರೆಯಲ್ಪಡುವ ಪಸ್ತಪುರ, ಮೋಘಾ, ರುಮ್ಮನಗೂಡ, ಸಾಸರಗಾಂವ, ಚೆಂಗಟಾ, ಚಂದನಕೇರಾ, ಕೊಟಗಾ, ಐನಾಪುರ, ರಾಣಾಪುರ, ಹೂವಿನಬಾವಿ ಗ್ರಾಮ ಮತ್ತು ತಾಂಡಾಗಳಲ್ಲಿ ತೊಗರಿ ರಾಶಿ ಪೂರ್ಣಗೊಂಡಿದೆ. ಆದರೆ ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕಕ್ಕಾಗಿ ತಂದ ಹಣವನ್ನು ಮರು ಪಾವತಿ ಮಾಡಲು ಕಡಿಮೆ ಬೆಲೆಯಲ್ಲಿ ತೊಗರಿ ಮಾರಾಟ ಮಾಡಿಕೊಳ್ಳುತ್ತಿದ್ದಾರೆ.
ಸರ್ಕಾರದ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ತೊಗರಿ ಕಾಳನ್ನು ಖರೀದಿಸುವುದಕ್ಕಾಗಿ ಕೇಂದ್ರ ಸರ್ಕಾರ ನಿಗದಿಪಡಿಸಿದ ಕನಿಷ್ಠ ಬೆಲೆ 5800ರೂ., ರಾಜ್ಯ ಸರ್ಕಾರದ ಪ್ರೋತ್ಸಾಹ ಧನ 300ರೂ. ಸೇರಿ ಪ್ರತಿ ಕ್ವಿಂಟಲ್‌ಗೆ 6100ರೂ. ನಿಗದಿ ಪಡಿಸಿ ಪ್ರತಿ ಎಕರೆಗೆ ಐದು ಕ್ವಿಂಟಲ್‌ನಂತೆ ಪ್ರತಿ ರೈತರಿಂದ ಗರಿಷ್ಠ ಪ್ರಮಾಣ 10 ಕ್ವಿಂಟಲ್ ಖರೀದಿಸಲು ನಿಗದಿಪಡಿಸಲಾಗಿದೆ.
ತಾಲೂಕಿನಲ್ಲಿ ಒಟ್ಟು 22 ತೊಗರಿ ನೋಂದಣಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಆದರೆ ತೊಗರಿ ಖರೀದಿ ಕೇಂದ್ರಗಳಲ್ಲಿ ತೊಗರಿ ಮಾರಾಟ ಪ್ರಕ್ರಿಯೆ ಇನ್ನು ಪ್ರಾರಂಭವಾಗಿಲ್ಲ. ಆದ್ದರಿಂದ ಪ್ರತಿ ಕ್ವಿಂಟಲ್‌ಗೆ 8 ಸಾವಿರ ರೂ. ತೊಗರಿ ಬೆಂಬಲ ಬೆಲೆಯಲ್ಲಿ ಖರೀದಿಸಬೇಕು ಎನ್ನುವುದು ರೈತರ ಒತ್ತಾಯವಾಗಿದೆ.
ಶಾಮರಾವ ಚಿಂಚೋಳಿ