ಚಿಂಚೋಳಿ: ನಾನು ಉಪಚುನಾವಣೆಯಲ್ಲಿ ಗೆದ್ದರೆ ಮಾತ್ರ ಬಿ.ಎಸ್. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ ಎಂದು ಡಾ| ಅವಿನಾಶ ಜಾಧವ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಗಂಗಮ್ಮ ಭೀಮಶೆಟ್ಟಿ ಪಾಟೀಲ ಕಲ್ಯಾಣ ಮಂಟಪದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ನಗರ ಮತ್ತು ಗ್ರಾಮೀಣ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಮೀಸಲು (ಪ.ಜಾ) ವಿಧಾನಸಭೆ ಮತಕ್ಷೇತ್ರಕ್ಕೆ ಮೇ 19ರಂದು ನಡೆಯುವ ಉಪ ಚುನಾವಣೆ ಮಹತ್ವದ್ದಾಗಿದೆ. ಇಡೀ ರಾಜ್ಯದ ಜನತೆ ಗಮನ ಕ್ಷೇತ್ರದ ಕಡೆಗಿದೆ. ಕಾರಣ ಕಾರ್ಯಕರ್ತರು ಗೆಲುವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.
ನಮ್ಮ ತಂದೆ ಡಾ| ಉಮೇಶ ಜಾಧವ ಚಿಂಚೋಳಿ ಮತಕ್ಷೇತ್ರದಿಂದ ಎರಡು ಸಲ ಶಾಸಕರಾಗಿ ಚುನಾಯಿತರಾಗಿ, ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅನಿವಾರ್ಯ ಕಾರಣಗಳಿಂದ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ. ಹೀಗಾಗಿ ಬಿಜೆಪಿ ನನ್ನನ್ನು ಅಭ್ಯರ್ಥಿಯನ್ನಾಗಿ ಚುನಾವಣೆ ಕಣಕ್ಕಿಳಿಸಿದೆ. ಆದ್ದರಿಂದ ಎಲ್ಲರೂ ಬೂತ್‌ಮಟ್ಟದಲ್ಲಿ ಪಕ್ಷ ಸಂಘಟಿಸಿ ಎಂದು ಹೇಳಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ ಸಭೆ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಬರ ಪರಸ್ಥಿತಿ ಎದುರಾಗಿದೆ. ಮುಖ್ಯಮಂತ್ರಿ ಎಚ್.ಡಿ .ಕುಮಾರಸ್ವಾಮಿ ಬರ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸುತ್ತಿಲ್ಲ. ಅನೇಕ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಅಭಾವ ಎದುರಾಗಿದೆ. ಜನ-ಜಾನುವಾರುಗಳಿಗೆ ನೀರು, ಮೇವು ಇಲ್ಲ. ಇಂತಹ ಅಯೋಗ್ಯ ಮುಖ್ಯಮಂತ್ರಿಯನ್ನು ಎಂದಿಗೂ ನೋಡಿಲ್ಲ. ಇಂತವರನ್ನು ಬದಲಾವಣೆ ಮಾಡಬೇಕಾದರೆ ಬಿಜೆಪಿಗೆ ಬೆಂಬಲಿಸಬೇಕಿದೆ ಎಂದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತದಲ್ಲಿ ಶೇ. 10 ಪರ್ಸಂಟೇಜ್ ಇತ್ತು. ಈಗ ಶೇ. 20 ಪರ್ಸಂಟೇಜ್ ಕಮಿಶನ್ ಪಡೆಯಲಾಗುತ್ತಿದೆ. ಕಲಬುರಗಿ ಅಭಿವೃದ್ಧಿ ಕಾಮಗಾರಿಗಳಲ್ಲಿ ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಅವರು 50 ಸಾವಿರ ಕೋಟಿ ರೂ.ಗಳ ಭ್ರಷ್ಟಾಚಾರ ಎಸಗಿದ್ದಾರೆ. ಅವರಿಗೆ ಮಗನಿಗೆ ಸಚಿವ ಸ್ಥಾನ ಕೊಡಿಸುವುದೇ ದೊಡ್ಡ ಅಭಿವೃದ್ಧಿ ಎಂದು ಟೀಕಿಸಿದರು. ಮೊದಲ ಸಲ ಆಯ್ಕೆಯಾದ ಪ್ರಿಯಾಂಕ್ ಖರ್ಗೆ ಅವರಿಗೆ ಸಚಿವ ಸ್ಥಾನ ಕೊಡಿಸಲಾಯಿತು. ಮಾಲೀಕಯ್ಯ ಗುತ್ತೇದಾರ, ಬಾಬುರಾವ ಚಿಂಚನಸೂರ, ಡಾ| ಮಲಕರೆಡ್ಡಿ, ಖಮರುಲ್ ಇಸ್ಲಾಂ ಅವರಂತ ಹಿರಿಯರಿಗೆ ಸಚಿವ ಸ್ಥಾನದಿಂದ ವಂಚಿತಗೊಳಿಸಲಾಯಿತು. ಇದು ಅನ್ಯಾಯ ಅಲ್ಲವೇನು ಎಂದು ಪ್ರಶ್ನಿಸಿದರು.
ಮಾಜಿ ಸಚಿವ ಸುನೀಲ ವಲ್ಯಾಪುರೆ, ಬಾಬುರಾವ ಪಾಟೀಲ, ಅಮರನಾಥ ಪಾಟೀಲ, ಜಿಪಂ ಸದಸ್ಯ ಸಂಜೀವನ್ ಯಾಕಾಪುರ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ, ಶರಣಪ್ಪ ತಳವಾರ, ಎಂಎಲ್ಸಿ ಬಿ.ಜಿ. ಪಾಟೀಲ, ಶಿವಶರಣಪ್ಪ ನಿಡಗುಂದಾ, ದತ್ತಾತ್ರೇಯ ಪಾಟೀಲ ತೂಗಾಂವ, ಸಂಜಯ ಮಿಸ್ಕೀನ, ರಾಮಚಂದ್ರ ಜಾಧವ, ಮುಕುಂದ ದೇಶಪಾಂಡೆ, ರವಿಕಾಂತ ಹುಸೇಬಾಯಿ, ಸಂತೋಷ ಗಡಂತಿ, ಅಜೀತ ಪಾಟೀಲ, ಸೋಮನಾಥ ಪಾಟೀಲ, ವಿದ್ಯಾಸಾಗರ ಕುಲಕರ್ಣಿ, ಲಿಂಗರಾಜ ಬಿರಾದಾರ ಇನ್ನಿತರರಿದ್ದರು. ತಾಲೂಕ ಬಿಜೆಪಿ ಅಧ್ಯಕ್ಷ ಭೀಮಶೆಟ್ಟಿ ಮುರುಡಾ ಸ್ವಾಗತಿಸಿದರು, ರಾಜು ನಿಲಂಗೆ ನಿರೂಪಿಸಿದರು, ಲಕ್ಷ್ಮಣ ಆವಂಟಿ ವಂದಿಸಿದರು.