ಕಲಬುರಗಿ: ಚಿಂಚೋಳಿಯಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ಬಿಜೆಪಿ ಬದ್ಧವಾಗಿದೆ. ಮಾಜಿ ಶಾಸಕ ಡಾ| ಉಮೇಶ ಜಾಧವ್ ಸಕ್ಕರೆ ಕಾರ್ಖಾನೆ ಪ್ರಾರಂಭಕ್ಕೆ ತುಂಬಾ ಪ್ರಯತ್ನಿಸಿದ್ದರು. ಆದರೆ ಖರ್ಗೆ ಅವರು ಬೆಂಬಲ ನೀಡಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಪ್ರತಿಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಚಿಂಚೋಳಿ ತಾಲೂಕಿನ ಚಿಮ್ಮನಚೋಡ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಅವಿನಾಶ ಜಾಧವ್ ಪರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಜೆಡಿಎಸ್ ನಾಯಕರು ಮಾತನಾಡುತ್ತಿರುವುದನ್ನು ನೋಡಿದರೆ ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಏನಿಸುತ್ತದೆ. ಸರ್ಕಾರ ಬೀಳಸಲು ಬಿಜೆಪಿ ಮುಂದಾಗುದಿಲ್ಲ. ತಾನಾಗಿಯೇ ಬಿದ್ದು ಹೋಗುತ್ತದೆ ಎಂದ ಅವರು, ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಮಾಜಿ ಸಚಿವ ಬಾಬುರಾವ ಚಿಂಚನಸೂರ ಅವರ ಕನಸು ಕೂಡ ಶೀಘ್ರವೇ ನನಸಾಗಲಿದೆ ಎಂದರು.
ಸಾಲಮನ್ನಾ ಮಾಡದಿದ್ದರೇ ಹೋರಾಟ: ಪ್ರಸ್ತುತ ಭೀಕರ ಬರಗಾಲ ಎದುರಾದರೂ ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡದೇ ದಿನಗಳನ್ನು ದೂಡುತ್ತಿರುವುದು ಇನ್ಮುಂದೆ ಸಹಿಸುವುದಿಲ್ಲ. ಎಲ್ಲ ರೈತರ ಸಾಲಮನ್ನಾ ಮಾಡದಿದ್ದರೆ ಬರುವ ವಿಧಾನಮಂಡಳ ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ಹೇಳಿದ ಬಿಎಸ್‌ವೈ, ಬರಗಾಲ ಮರೆತು ಸರ್ಕಾರ ಉಳಿಸಿಕೊಳ್ಳುವಲ್ಲಿಯೇ ಮಗ್ನರಾಗಿರುವ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಬಗ್ಗೆ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು. ಈ ಬಗ್ಗೆ ಮೇ 27ರಂದು ಬಿಜೆಪಿ ನಾಯಕರು ಮತ್ತು ಶಾಸಕರ ಸಭೆ ಸೇರಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಚಿಂಚೋಳಿಯಲ್ಲೇ ಇಡೀ ರಾಜ್ಯ ಸರ್ಕಾರ ಬೀಡು ಬಿಟ್ಟಿದೆ. ಒಬ್ಬ ಅವಿನಾಶ ಜಾಧವ್‌ನನ್ನು ಸೋಲಿಸಲು ಸರ್ಕಾರವೇ ಚಿಂಚೋಳಿಗೆ ಬಂದಿದೆ. ಎಲ್ಲ ಸಚಿವರು ಇಲ್ಲೇ ವಾಸ್ತವ್ಯ ಹೂಡಿದ್ದಾರೆ ಎಂದು ಟೀಕಿಸಿದರು.
ಕುಡಚಿ ಶಾಸಕ ಪಿ.ರಾಜೀವ್ ಮಾತನಾಡಿ, ಕಾಂಗ್ರೆಸ್ ತಿಗಣಿ ಇದ್ದಂತೆ. 50 ವರ್ಷಗಳಿಂದ ನಿರಂತರವಾಗಿ ದೇಶದ ಜನತೆ ರಕ್ತ ಹೀರುತ್ತಿದೆ. ಮನೆಯಲ್ಲಿ ಇರುವ ಒಂದೆರಡು ತಿಗಣಿಗಳ ಕಾಟ ತಾಳಲು ಆಗುವುದಿಲ್ಲ. ದೇಶದಲ್ಲಿರುವ ಲಕ್ಷಾಂತರ ಕಾಂಗ್ರೆಸ್ ತಿಗಣಿಗಳನ್ನು ನಿಯಂತ್ರಿಸಲು ಪ್ರಧಾನಿ ಮೋದಿ ದಿವ್ಯ ಔಷಧಿ, ರಾಮ ಬಾಣವಾಗಿದ್ದಾರೆ ಎಂದು ಹೇಳಿದರು.
ಮಾಜಿ ಶಾಸಕ ಡಾ| ಉಮೇಶ ಜಾಧವ್ ಮಾತನಾಡಿ, ಇದೊಂದು ವಿಶೇಷ ಚುನಾವಣೆಯಾಗಿದೆ. ಚಿಂಚೋಳಿಯಲ್ಲಿ ಗೆದ್ದ ಪಕ್ಷವೇ ಅಧಿಕಾರಕ್ಕೆ ಬರುತ್ತದೆ. ಯಡಿಯೂರಪ್ಪ ಸಿಎಂ ಆಗಲು ಇದೆಲ್ಲ ನಡೆಯುತ್ತಿದೆ ಎಂದರು.
ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಮಾತನಾಡಿ, 50 ವರ್ಷಗಳಿಂದ ರಾಜಕೀಯದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸುವ ಅದರಲ್ಲಿ ಈ ಹಿಂದೆ ಐದು ವರ್ಷಗಳ ಕೇಂದ್ರದಲ್ಲಿಯೇ ಮಂತ್ರಿಯಾಗಿದ್ದರೂ ನೆನಪಿಗೆ ಬರಲಿಲ್ಲವೇ? ಎಂದು ಖಾರವಾಗಿ ಪ್ರಶ್ನಿಸಿದರು.
ಮಾಜಿ ಸಚಿವರಾದ ವಿ. ಸೋಮಣ್ಣ, ಸುನೀಲ ವಲ್ಲಾಪುರೆ ಮಾತನಾಡಿದರು. ಶಾಸಕರಾದ ರಾಜಕುಮಾರ ಪಾಟೀಲ್ ತೇಲ್ಕೂರ, ಬಸವರಾಜ ಮತ್ತಿಮಡು, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಸೇರಿದಂತೆ ಮುಂತಾದವರಿದ್ದರು. ಇದಕ್ಕೂ ಮುಂಚೆ ಗ್ರಾಮದಲ್ಲಿ ರೋಡ್ ಶೋ ನಡೆಯಿತು.