ಕಲಬುರಗಿ: ರಾಜ್ಯದ ಮೈತ್ರಿ ಸರ್ಕಾರಕ್ಕೆ ಅಗ್ನಿ ಪರೀಕ್ಷೆಯಾಗಿರುವ ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭೆ ಉಪ ಚುನಾವಣೆ ಕಾವು ಏರತೊಡಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಕೆಲ ನಾಯಕರು ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರು ಕುಂದಗೋಳ ಕ್ಷೇತ್ರಕ್ಕೆ ನೀಡಿದ ಪ್ರಾಧಾನ್ಯತೆ ಚಿಂಚೋಳಿ ಕ್ಷೇತ್ರಕ್ಕೆ ನೀಡುತ್ತಿಲ್ಲ. ಇದರ ಹಿಂದಿನ ಮರ್ಮ ರೋಚಕವಾಗಿದೆ.
ಲೋಕಸಭೆ ಚುನಾವಣೆ ಮರುದಿನದಿಂದ ಹಾಗೂ ನಾಮಪತ್ರ ಸಲ್ಲಿಕೆ ದಿನದಿಂದ ಬಿಜೆಪಿ ನಾಯಕರು ಕ್ಷೇತ್ರದಲ್ಲೇ ಠಿಕಾಣಿ ಹೂಡಿದ್ದರೆ, ಕಾಂಗ್ರೆಸ್ ನಾಯಕರ್ಯಾರು ಇತ್ತ ಮುಖ ಮಾಡಿಲ್ಲ. ಕುಂದಗೋಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಸೇರಿ ಇತರ ನಾಯಕರು ಪಾಲ್ಗೊಂಡಿದ್ದರು. ಆದರೆ ಚಿಂಚೋಳಿ ಕ್ಷೇತ್ರದ ನಾಮಪತ್ರ ಸಲ್ಲಿಕೆ ವೇಳೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಉಸ್ತುವಾರಿ ವಹಿಸಲಾದ ಡಿಸಿಎಂ ಡಾ| ಜಿ. ಪರಮೇಶ್ವರ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಸಚಿವ ಎಂ.ಬಿ. ಪಾಟೀಲ ಸೇರಿ ಇತರರು ದೂರವೇ ಉಳಿದಿದ್ದರು. ಜಿಲ್ಲೆಯವರಾಗಿರುವ ಸಚಿವ ಪ್ರಿಯಾಂಕ್ ಖರ್ಗೆ ನಾಮಪತ್ರ ಸಲ್ಲಿಕೆ ದಿನದಂದು ಪಾಲ್ಗೊಂಡು ಹೋದವರು ಮತ್ತೆ ಮೇ 2ರವರೆಗೂ ಕ್ಷೇತ್ರಕ್ಕೆ ಬಂದಿಲ್ಲ.
ಇನ್ನು ಬಿಜೆಪಿ ಉಸ್ತುವಾರಿ ವಿ.ಸೋಮಣ್ಣ ನಾಮಪತ್ರ ಸಲ್ಲಿಕೆ ದಿನದಂದು ಹಾಜರಿದ್ದು, ಚುನಾವಣಾ ಪ್ರಚಾರಸಭೆಗೆ ಚಾಲನೆ ನೀಡಿದ್ದರೆ, ಇನ್ನುಳಿದ ಉಸ್ತುವಾರಿಗಳಾದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ, ಮಾಜಿ ಸಚಿವರಾದ ಬಾಬುರಾವ ಚಿಂಚನಸೂರ್, ಮಾಲೀಕಯ್ಯ ಗುತ್ತೇದಾರ್ ಹಾಗೂ ಇತರ ನಾಯಕರು ಚಿಂಚೋಳಿ ಕ್ಷೇತ್ರದಲ್ಲೇ ಬಿಡಾರ ಹೂಡಿದ್ದಾರೆ. ಬಿಜೆಪಿಯವರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದರೆ, ಕಾಂಗ್ರೆಸ್ ಬಿಜೆಪಿಯಷ್ಟು ಬಿರುಸಿನ ಪ್ರಚಾರ ನಡೆಸುತ್ತಿಲ್ಲ ಎಂದು ಸ್ವತಃ ಕಾಂಗ್ರೆಸ್ ಕಾರ್ಯಕರ್ತರೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೆಲ್ಲ ನೋಡಿದರೆ ಕಾಂಗ್ರೆಸ್ ಕುಂದಗೋಳ ಕ್ಷೇತ್ರದಷ್ಟು ಚಿಂಚೋಳಿ ಮೀಸಲು ಕ್ಷೇತ್ರವನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡಿಲ್ಲವೇ ಎಂಬ ಪ್ರಶ್ನೆ ಮೂಡಿದೆ.
6ರಂದು ಚಿಂಚೋಳಿಗೆ ಬಿಎಸ್‌ವೈ: ರಾಜ್ಯವಲ್ಲದೇ ರಾಷ್ಟ್ರ ನಾಯಕರನ್ನು ಚಿಂಚೋಳಿಗೆ ಕರೆಸಲು ಬಿಜೆಪಿ ಮುಂದಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮೇ 6ರಂದು ಚಿಂಚೋಳಿಗೆ ಆಗಮಿಸುತ್ತಿದ್ದಾರೆ. ಈ ವೇಳೆ ಕಾರ್ಯಕರ್ತರ ಸಭೆಯಲ್ಲದೇ ಚುನಾವಣಾ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳುವರು.ಪಕ್ಷದ ಕ್ಷೇತ್ರದ ಉಸ್ತುವಾರಿ ವಿ.ಸೋಮಣ್ಣ ಮೇ 5ರಂದೇ ಕ್ಷೇತ್ರಕ್ಕೆ ಆಗಮಿಸಿ ಠಿಕಾಣಿ ಹೂಡಲಿದ್ದಾರೆ.
10ರಿಂದ ಸಿದ್ದು ಠಿಕಾಣಿ: ಮಾಜಿ ಸಿಎಂ ಸಿದ್ದರಾಮಯ್ಯ ಮೇ 10ರಿಂದ ಮೂರು ದಿನ ಚಿಂಚೋಳಿ ಕ್ಷೇತ್ರದಲ್ಲಿ ಠಿಕಾಣಿ ಹೂಡಿ ಪ್ರಚಾರ ನಡೆಸುವರು. ಅದೇ ರೀತಿ ಮೇ 14ರಿಂದ ನಾಲ್ಕು ದಿನ ಕುಂದಗೋಳ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ.
ಕಾರಣ ಏನು?
ಚಿಂಚೋಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದರೂ, ಸೋತರೂ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕ್ರೆಡಿಟ್ ಹೋಗುತ್ತದೆ ಎಂಬುದಾಗಿ ತಿಳಿದು ಕಾಂಗ್ರೆಸ್ ನಾಯಕರು ಚಿಂಚೋಳಿ ಮೀಸಲು ಕ್ಷೇತ್ರದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇದೇ ಕಾರಣಕ್ಕೆ ನಾಮಪತ್ರ ಸಲ್ಲಿಸುವ ವೇಳೆಯಿಂದ ಹಿಡಿದು ಇಂದಿನವರೆಗೂ ಕ್ಷೇತ್ರದತ್ತ ಕಾಂಗ್ರೆಸ್ ಉಸ್ತುವಾರಿ ನಾಯಕರು ಮುಖ ಮಾಡಿಲ್ಲ ಎನ್ನಲಾಗುತ್ತಿದೆ.