Advertisement

ಕೆಮಿಕಲ್ ಕುಡಿದು ಪ್ರಾಣಿ-ಪಕ್ಷಿ ಸಾವು

02:59 PM Jun 08, 2019 | Naveen |

ಚಿಂಚೋಳಿ: ತಾಲೂಕಿನ ಕುಂಚಾವರಂ ವನ್ಯಜೀವಿಧಾಮ ಅರಣ್ಯಪ್ರದೇಶದಲ್ಲಿ ಬರುವ ಕೊಳ್ಳುರ ಗ್ರಾಮದ ಸಣ್ಣ ನೀರಾವರಿ ಕೆರೆ ಬಳಿ ಕಿಡಿಗೇಡಿಗಳು ದುರ್ನಾತದಿಂದ ಕೂಡಿದ ವಿಷಪೂರಿತ ಕೆಮಿಕಲ್ ತಂದು ಚೆಲ್ಲಿದ್ದರಿಂದ ಪ್ರಾಣಿ, ಪಕ್ಷಿಗಳು ಕುಡಿದು ಸಾವನ್ನಪ್ಪುತ್ತಿವೆ ಎಂದು ಕೊಳ್ಳುರ ಗ್ರಾಮದ ಮುಖಂಡ ಗೋಪಾಲರೆಡ್ಡಿ ತಿಳಿಸಿದ್ದಾರೆ.

Advertisement

ಕೊಳ್ಳುರ-ಕುಸರಂಪಳ್ಳಿ ಗ್ರಾಮಗಳ ಮಧ್ಯೆ ಇರುವ ಸಣ್ಣ ನೀರಾವರಿ ಕೆರೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರು ಇರುವುದರಿಂದ ವನ್ಯಜೀವಿಧಾಮದಲ್ಲಿ ಇರುವ ನವಿಲು, ಮೊಲ, ಜಿಂಕೆ ಹಾಗೂ ಇನ್ನಿತರ ಪ್ರಾಣಿ, ಪಕ್ಷಿಗಳು ಇಲ್ಲಿಗೆ ನೀರು ಕುಡಿಯಲು ಆಗಮಿಸುತ್ತವೆ. ಆದರೆ ಇದರ ಬಳಿಯೇ ಕಾರ್ಖಾನೆಯೊಂದಕ್ಕೆ ಬಳಸುವ ವಿಷಪೂರಿತ ಕೆಮಿಕಲ್ ಚೆಲ್ಲಿದ್ದರಿಂದ ಅದನ್ನೇ ನೀರೆಂದು ಕುಡಿದ ಪ್ರಾಣಿ, ಪಕ್ಷಿಗಳು ಸಾವನ್ನಪ್ಪುತ್ತಿವೆ. ಬೆಳ್ಳಕ್ಕಿ, ನವಿಲು, ಮೊಲ ಈ ಕೆಮಿಕಲ್ ಸೇವಿಸಿ ಒದ್ದಾಡುತ್ತಿದ್ದಾಗ ದನ ಕಾಯುವ ಹುಡುಗರು ಅವುಗಳ ರಕ್ಷಣೆಗಾಗಿ ನೀರು ತಂದು ಬಾಯಲ್ಲಿ ಹಾಕಿದರೂ ಅವುಗಳು ಮೃತಪಟ್ಟಿವೆ. ಕೆಲವನ್ನು ನಾಯಿ, ನರಿಗಳು ತಿಂದುಹಾಕಿವೆ.

ಚಿಂಚೋಳಿ ತಾಲೂಕಿನ ಚೆಟ್ಟಿನಾಡ ಮತ್ತು ಕಲಬುರಗಿ ಸಿಮೆಂಟ್ ಕಂಪನಿಗಳಿಗೆ ಕೆಮಿಕಲ್ ತುಂಬಿದ ಲಾರಿಗಳು ಜಹೀರಾಬಾದ, ಮೊಗಡಂಪಳ್ಳಿ, ಗೌಸಾಬಾದ, ಕುಸರಂಪಳ್ಳಿ, ಕೊಳ್ಳುರ, ಚಿಂಚೋಳಿ ಮುಖಾಂತರ ಹಗಲು ರಾತ್ರಿ ಸಂಚರಿಸುತ್ತವೆ. ಈ ಲಾರಿಗಳಿಂದಲೇ ಈ ಕೆಮಿಕಲ್ನ್ನು ತಂದು ಹಾಕಿರಬಹುದು ಎಂದು ಗೋಪಾಲರೆಡ್ಡಿ ಶಂಕೆ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ವರ್ಷಗಳ ಹಿಂದೆ ಇದೇ ರಸ್ತೆ ಮಾರ್ಗದಲ್ಲಿ ಎಲುಬು ಮತ್ತು ಮಾಂಸ ತುಂಬಿದ ಮೂಟೆಗಳನ್ನು ಕೆರೆಯ ಹತ್ತಿರ ಬಿಸಾಕಿ ಹೋಗಿದ್ದರು. ಆಗ ಕೊಳೆತ ಮಾಂಸ ತಿಂದ ರಣಹದ್ದು, ಕಾಗೆ, ಗುಬ್ಬಿಗಳು ಮತ್ತು ಇತರ ಕಾಡು ಪ್ರಾಣಿಗಳು ಮೃತಪಟ್ಟಿದ್ದವು. ಕೊಳ್ಳುರ ಕೆರೆಯ ಹತ್ತಿರ ತಂದು ಬಿಸಾಕಿರುವ ವಿಷಪೂರಿತ ಕೆಮಿಕಲ್ದಿಂದ ಕೊಳ್ಳುರ, ಕುಸರಂಪಳ್ಳಿ, ನಾಗಾಇದಲಾಯಿ ಗ್ರಾಮಗಳಲ್ಲಿ ಗಬ್ಬು ವಾಸನೆ ಹರಡಿದೆ. ಇದರಿಂದ ಗ್ರಾಮಸ್ಥರಲ್ಲಿ ಕೆಲವರಿಗೆ ತಲೆಸುತ್ತು ಬರುತ್ತಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು, ವನ್ಯಜೀವಿಧಾಮದ ಅರಣ್ಯಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಿಷಪೂರಿತ ಕೆಮಿಕಲ್ನ್ನು ಮಣ್ಣಿನಿಂದ ಮುಚ್ಚಿಸಿ, ಜನರ ಮತ್ತು ಕಾಡು ಪ್ರಾಣಿ, ಪಕ್ಷಿಗಳ ಜೀವ ರಕ್ಷಣೆ ಮಾಡಬೇಕೆಂದು ಗೋಪಾಲರೆಡ್ಡಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next