Advertisement

ಬಿಡೆನ್‌ ಗೆದ್ದರೆ ಅಮೆರಿಕ ಚೀನ ಪಾಲು; ಡೊನಾಲ್ಡ್‌ ಟ್ರಂಪ್‌ ಆರೋಪ 

12:59 AM Aug 25, 2020 | mahesh |

ವಾಷಿಂಗ್ಟನ್‌: ಇದೇ ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್‌ ಪಕ್ಷದ ಜೊ ಬಿಡೆನ್‌ ಅವರು ಜಯ ಗಳಿಸಿದರೆ, ಚೀನ ದೇಶ ಅಮೆರಿಕವನ್ನು ತನ್ನದಾಗಿಸಿಕೊಳ್ಳುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

Advertisement

“ಈ ಬಾರಿಯ ಚುನಾವಣೆಯಲ್ಲಿ ಚೀನ ಹಸ್ತಕ್ಷೇಪ ಮಾಡಲಾರಂಭಿಸಿದ್ದು, ಬಿಡೆನ್‌ ಅವರನ್ನು ಗೆಲ್ಲಿಸಲು ಪ್ರಯತ್ನಿಸುತ್ತಿದೆ ಎಂದು ಅಮೆರಿಕದ ಗುಪ್ತಚರ ಇಲಾಖೆ ಹೇಳಿದೆ. ನಾನು ಸುಮಾರು ಮೂರೂವರೆ ವರ್ಷಗಳಿಂದ ಚೀನಕ್ಕೆ ನಾನು ಸೆಡ್ಡು ಹೊಡೆಯುತ್ತಾ ಬಂದಿದ್ದೇನೆ. ಅಮೆರಿಕದ ಇತಿಹಾಸದಲ್ಲೇ ಚೀನಕ್ಕೆ ಹೀಗೆ ಸೆಡ್ಡು ಹೊಡೆದ ಮೊದಲ ಅಧ್ಯಕ್ಷ ನಾನೇ ಇರಬಹುದು. ಹಾಗಾಗಿ, ಚೀನಕ್ಕೆ ನಾನು ಚುನಾವಣೆಯಲ್ಲಿ ಗೆದ್ದು ಬರುವುದು ಬೇಕಿಲ್ಲ. ಚೀನದ ಆಶಯದಂತೆ ಬಿಡೆನ್‌ ಗೆದ್ದರೆ, ಚೀನ ಅಮೆರಿಕವನ್ನು ತನ್ನ ಅಂಕೆಯಲ್ಲಿಟ್ಟುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ಟ್ರಂಪ್‌ ತಿಳಿಸಿದ್ದಾರೆ.

ಕೆಲಿಯನ್‌ ರಾಜೀನಾಮೆ
ಡೊನಾಲ್ಡ್‌ ಟ್ರಂಪ್‌ ಅವರ ಪ್ರಮುಖ ಸಲಹೆಗಾರರಲ್ಲೊಬ್ಬರಾದ ಕೆಲಿಯನ್‌ ಕಾನ್ವೆ, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ತಿಂಗಳ ಕೊನೆಯಲ್ಲಿ ತಾವು ಸೇವೆಯಿಂದ ನಿರ್ಗಮಿಸುವುದಾಗಿ ಅವರು ಪ್ರಕಟಿಸಿದ್ದಾರೆ. ತಮ್ಮ ಕುಟುಂಬದ ಕಡೆ ಗಮನ ಕೊಡುವುದಕ್ಕಾಗಿ ಉದ್ಯೋಗ ತ್ಯಜಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಹಾಗಾಗಿ, ಸೋಮವಾರದಿಂದ ಶುರುವಾಗಲಿರುವ ರಿಪಬ್ಲಿಕನ್‌ ಪಾರ್ಟಿಯ ಸಮಾವೇಶದಲ್ಲಿ ಅವರು ಟ್ರಂಪ್‌ ಪರವಾಗಿ ಪ್ರಚಾರ ಮಾಡುವುದು ಅನುಮಾನವಾಗಿದೆ.

ರಿಪಬ್ಲಿಕನ್‌ ಪಕ್ಷ ಸಮಾವೇಶದಲ್ಲಿ ಮಾತನಾಡುವವರ ಪಟ್ಟಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ನಾಲ್ಕು ದಿನಗಳ ಸಮಾವೇಶದಲ್ಲಿ ಮೂರನೇ ದಿನ ಕಾನ್ವೆ ಅವರು ಭಾಷಣ ಮಾಡಲಿದ್ದಾರೆ ಎಂದು ಪಟ್ಟಿಯಲ್ಲಿ ನಮೂದಿಸಲಾಗಿತ್ತು. ಆದರೆ, ಕಾನ್ವೆಯವರ ದಿಢೀರ್‌ ರಾಜೀನಾಮೆ ನಿರ್ಧಾರ ಆ ಸಾಧ್ಯತೆಯನ್ನು ಮಸುಕಾಗಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next