ಬೀಜಿಂಗ್:ನೂತನ ಮಾರಣಾಂತಿಕ ಕೋವಿಡ್ 19 ವೈರಸ್ ತೀವ್ರವಾಗಿ ಹಬ್ಬಿದ ನಂತರ ವನ್ಯಜೀವಿ ಮಾರಾಟವನ್ನು ಚೀನಾ ನಿಷೇಧಿಸಿತ್ತು. ಇದೀಗ ಚೀನಾದ ಪ್ರಮುಖ ನಗರಗಳಲ್ಲಿ ಒಂದಾದ ಶೆನ್ ಝೆನ್ ನಾಯಿ ಮತ್ತು ಬೆಕ್ಕಿನ ಮಾಂಸ ತಿನ್ನುವುದಕ್ಕೆ ನಿಷೇಧ ಹೇರಿದೆ. ಡೆಡ್ಲಿ ಕೋವಿಡ್ 19 ವೈರಸ್ ಪ್ರಾಣಿಗಳಿಂದ ಮನುಷ್ಯನ ದೇಹ ಸೇರಬಹುದು ಎಂದು ವಿಜ್ಞಾನಿಗಳು ಶಂಕಿಸಿದ್ದರು.
ಆರಂಭದಲ್ಲಿ ಸೋಂಕಿಗೆ ಬಾವಲಿ, ಹಾವು, ಪುಣುಗು ಬೆಕ್ಕು ಹಾಗೂ ಇತರ ಪ್ರಾಣಿಗಳಿಂದ ಮನುಷ್ಯನಿಗೆ ಹರಡುತ್ತಿರುವುದಾಗಿ ಪತ್ತೆಯಾದ ಹಿನ್ನೆಲೆಯಲ್ಲಿ ವುಹಾನ್ ಕೇಂದ್ರ ನಗರದಲ್ಲಿನ ಪ್ರಾಣಿ ಮಾಂಸ ಮಾರಾಟ ಮಾರ್ಕೆಟ್ ಅನ್ನು ಬಂದ್ ಮಾಡಲಾಗಿತ್ತು ಎಂದು ವರದಿ ತಿಳಿಸಿದೆ.
ಮಾರಕ ಕೋವಿಡ್ 19 ವೈರಸ್ ನಿಂದಾಗಿ ಜಾಗತಿಕವಾಗಿ 9,35,000ಕ್ಕೂ ಅಧಿಕ ಜನರಿಗೆ ಸೋಂಕು ತಗುಲಿದ್ದು, 47 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ತಂತ್ರಜ್ಞಾನ ಕೇಂದ್ರವಾದ ದಕ್ಷಿಣ ಚೀನಾ ಅಧಿಕಾರಿಗಳು, ನಾಯಿ ಮತ್ತು ಬೆಕ್ಕಿನ ಮಾಂಸ ತಿನ್ನುವುದನ್ನು ನಿಷೇಧಿಸಿದ್ದು, ಮೇ 1ರಿಂದ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ನಾಯಿ ಮತ್ತು ಬೆಕ್ಕುಗಳು ಮನುಷ್ಯನಿಗೆ ತುಂಬಾ ನಿಕಟ ಸಂಪರ್ಕದಲ್ಲಿ ಇರುತ್ತವೆ. ಅಷ್ಟೇ ಅಲ್ಲ ನಾಯಿ, ಬೆಕ್ಕು ಹಾಗೂ ಇತರ ಪ್ರಾಣಿಗಳ ಮಾಂಸವನ್ನು ತಿನ್ನುವುದಕ್ಕೆ ಹಾಂಗ್ ಕಾಂಗ್, ತೈವಾನ್ ಕೂಡಾ ನಿಷೇಧ ಹೇರಿದೆ ಎಂದು ಆದೇಶದಲ್ಲಿ ತಿಳಿಸಿದೆ.
ದೇಶದಲ್ಲಿ ಕಾಡು(ವನ್ಯಜೀವಿ) ಪ್ರಾಣಿಗಳ ಮಾಂಸ ಸೇವನೆ ಹಾಗೂ ಮಾರಾಟವನ್ನು ನಿಷೇಧಿಸುವುದಾಗಿ ಫೆಬ್ರುವರಿ ತಿಂಗಳಿನಲ್ಲಿ ಚೀನಾ ಸರ್ಕಾರ ತಿಳಿಸಿತ್ತು. ದೇಶಾದ್ಯಂತ ಆದೇಶವನ್ನು ಜಾರಿಗೊಳಿಸಲು ಪ್ರಾಂತೀಯ ಮತ್ತು ನಗರ ಆಡಳಿತ ವರ್ಗ ಒತ್ತಡ ಹೇರುತ್ತಿದ್ದು, ಶೆನ್ ಝೆನ್ ನಗರ ನಾಯಿ ಮತ್ತು ಬೆಕ್ಕಿನ ಮಾಂಸ ಸೇವನೆ ನಿಷೇಧಿಸಿ ಆದೇಶ ಜಾರಿಗೊಳಿಸಿದೆ ಎಂದು ವರದಿ ವಿವರಿಸಿದೆ.
ನಾಯಿ ಮಾಂಸವನ್ನು ಮುಖ್ಯವಾಗಿ ಏಷ್ಯಾದ ಹಲವು ಪ್ರದೇಶಗಳಲ್ಲಿ ತಿನ್ನುತ್ತಾರೆ, ಜನರಿಗೆ ಬೇಕಾಗುವಷ್ಟು ಕೋಳಿ ಮಾಂಸ, ದನದ ಮಾಂಸ ಹಾಗೂ ಮೀನುಗಳು ಗ್ರಾಹಕರಿಗೆ ಲಭ್ಯವಿದೆ ಎಂದು ಶೆನ್ ಝೆನ್ ನ ರೋಗ ನಿಗ್ರಹ ಮತ್ತು ನಿಯಂತ್ರಣ ಕೇಂದ್ರದ ಅಧಿಕಾರಿ ಲಿಯೂ ಜಿಯಾನ್ ಪಿಂಗ್ ತಿಳಿಸಿದ್ದಾರೆ.
ಕೋಳಿ ಮತ್ತು ಜಾನುವಾರು ಮಾಂಸ ವನ್ಯಜೀವಿ ಮಾಂಸಕ್ಕಿಂತ ಅಪಾಯಕಾರಿ ಎಂಬುದಕ್ಕೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ ಎಂದು ಲಿಯೂ ತಿಳಿಸಿರುವುದಾಗಿ ಚೀನಾದ ಶೆನ್ ಝೆನ್ ಡೈಲಿ ವರದಿ ಮಾಡಿದೆ.
ಆರಂಭದಲ್ಲಿ ಶೆನ್ ಝೆನ್ ನಲ್ಲಿ ಆಮೆ ಮತ್ತು ಕಪ್ಪೆ ಮಾಂಸ ಸೇವನೆಯನ್ನು ನಿಷೇಧಿಸಿತ್ತು. ದಕ್ಷಿಣ ಚೀನಾದಲ್ಲಿ ಆಮೆ ಮತ್ತು ಕಪ್ಪೆ ಮಾಂಸ ತುಂಬಾ ಸಾಮಾನ್ಯವಾದ ಆಹಾರವಾಗಿತ್ತು.