Advertisement
ತೈವಾನ್‌ನ ಇತಿಹಾಸತೈವಾನ್ ಸುಮಾರು 25 ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸವನ್ನು ಹೊಂದಿದೆ. 1895ರಲ್ಲಿ ಮೊದಲ ಸಿನೋ-ಜಪಾನ್ ಯುದ್ಧದಲ್ಲಿ ತೈವಾನ್, ಜಪಾನ್‌ನ ವಶವಾಯಿತು. ಆದರೆ ಎರಡನೇ ಮಹಾಯುದ್ಧದ ಬಳಿಕ ಚೀನ ತೈವಾನ್ ದ್ವೀಪವನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತು. ತೈವಾನ್ ಮೇಲೆ ರಿಪಬ್ಲಿಕ್ ಆಫ್ ಚೀನ ಅಧಿಕಾರ ಹೊಂದಿತ್ತು. ಆದರೆ ಅನಂತರದಲ್ಲಿ ನಡೆದ ಯುದ್ಧದಲ್ಲಿ ಕಮ್ಯುನಿಸ್ಟ್ ಬಳಗದವರು ತೈವಾನ್‌ಗೆ ಓಡಿಹೋದರು. ಮೈನ್ ಲ್ಯಾಂಡ್ ಚೀನಿಗಳು ಎಂದು ಗುರುತಿಸಿಕೊಳ್ಳುವ ಇವರು ತೈವಾನ್ ಆಡಳಿತದ ಮೇಲೆ ಹಿಡಿತ ಸಾಧಿಸಿದರು. ಇದೀಗ ತೈವಾನ್ ತನ್ನದೇ ಆದ ಸಂವಿಧಾನ, ಆಡಳಿತ, ರಕ್ಷಣ ಪಡೆಗಳನ್ನು ಹೊಂದಿದ್ದು ಪ್ರತ್ಯೇಕ ಮತ್ತು ಸ್ವತಂತ್ರ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಆದರೆ ಚೀನ ಮಾತ್ರ ತೈವಾನ್‌ನ ಮೇಲೆ ಹಕ್ಕು ಸ್ಥಾಪಿಸಲು ನಿರಂತರವಾಗಿ ಪ್ರಯತ್ನಿಸುತ್ತಲೇ ಬಂದಿದೆ. ಉಭಯ ರಾಷ್ಟ್ರಗಳ ನಡುವಣ ಮುಸುಕಿನ ಕಾಳಗ ನಡೆಯುತ್ತಲೇ ಇದೆ.
1990ರ ದಶಕ ದಲ್ಲಿ ತೈವಾನ್ ಜತೆಗೆ ಯಾವುದೇ ಯುದ್ಧವಿಲ್ಲ ಎಂದು ಚೀನ ಹೇಳಿದ್ದರೂ ಪರಿಸ್ಥಿತಿ ಹೇಳಿಕೊಳ್ಳು ವಷ್ಟೇನು ಸರಿಯಿಲ್ಲ. ಈ ಮಧ್ಯೆ ಚೀನ, ಒಂದುವೇಳೆ ತೈವಾನ್, ಬೀಜಿಂಗ್‌ಗೆ ಸೇರ್ಪಡೆಯಾದರೆ “ಒಂದು ರಾಷ್ಟ್ರ, ಎರಡು ಆಡಳಿತ’ ವ್ಯವಸ್ಥೆಗೆ ಅವಕಾಶ ಕೊಡಲಾಗುವುದು ಎಂದು ಹೇಳಿತ್ತು. ಆದರೆ ತೈವಾನ್ ಇದನ್ನು ತಿರಸ್ಕರಿಸಿತ್ತು. 2000ನೇ ಇಸವಿಯಲ್ಲಿ ತೈವಾನ್‌ನಲ್ಲಿ ಚುನಾವಣೆ ನಡೆದು, ಡೆಮೊಕ್ರೆಟಿಕ್ ಪ್ರೋಗ್ರೆಸಿವ್ ಪಾರ್ಟಿ ಅಧಿಕಾರಕ್ಕೆ ಬಂದಿತ್ತು. 2004ರಲ್ಲಿ ಚೀನ, ತೈವಾನ್ ವಿರುದ್ಧ ಪ್ರತ್ಯೇಕತಾ ವಿರೋಧಿ ಕಾನೂನನ್ನು ಜಾರಿಗೆ ತಂದಿತು. ಒಂದು ವೇಳೆ ತೈವಾನ್ ಚೀನದಿಂದ ಬೇರ್ಪಡಲು ಮುಂದಾದರೆ ಅದರ ವಿರುದ್ಧ ಯುದ್ಧದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿತ್ತು. ಇವತ್ತಿಗೂ ಚೀನ, ತೈವಾನ್ ಅನ್ನು ತನ್ನ ವ್ಯಾಪ್ತಿಗೆ ಸೇರಿದ ಪ್ರದೇಶವೆಂದೆ ಪರಿಗಣಿಸಿದ್ದು, ತೈವಾನ್ ಸ್ವತಂತ್ರ ರಾಷ್ಟ್ರ ಎಂಬುದನ್ನು ಒಪ್ಪಿಕೊಂಡಿಲ್ಲ. ಅಮೆರಿಕ ಕಾವಲು
ತೈವಾನ್ ಆರ್ಥಿಕವಾಗಿ ಇಂದಿಗೂ ಚೀನದ ಮೇಲೆ ಅವಲಂಬಿತವಾಗಿದೆ. ಆದರೆ ಕಳೆದ ದಶಕ ದಿಂದೀಚೆಗೆ ಪ್ರಗತಿಯ ಹಾದಿಯಲ್ಲಿರುವ ತೈವಾನ್ ಬಲಿಷ್ಠ, ಸ್ವಾವ ಲಂಬಿ ರಾಷ್ಟ್ರವಾಗುವತ್ತ ಹೆಜ್ಜೆ ಇರಿಸಿದೆ. ಇದಕ್ಕೆ ಅಮೆರಿಕ ಸಾಥ್ ನೀಡಿದೆ. ತೈವಾನ್‌ಗೆ ಅಮೆರಿಕ ರಕ್ಷಣ ಸಹಾಯವನ್ನು ನೀಡುತ್ತಿದೆ. ತೈವಾನ್ ಹಾಗೂ ಅಮೆರಿಕ ನಡುವಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿ ಗೊಳಿಸಲು ತೈವಾನ್ ಅಧ್ಯಕ್ಷೆ ಸಯ್ – ಇಂಗ್ ವೆನ್ ಅಮೆರಿಕದ ಸಂಸತ್ ಸ್ಪೀಕರ್ ಕೆವಿನ್ ಮೆಕಾರ್ಥಿಯನ್ನು ಭೇಟಿ ಮಾಡಿದ್ದಾರೆ.
Related Articles
ತೈವಾನ್ ಅಧ್ಯಕ್ಷೆಯನ್ನು ಭೇಟಿಯಾಗದಂತೆ ಅಮೆರಿಕಕ್ಕೆ ಚೀನ ಎಚ್ಚರಿಕೆ ಯನ್ನು ನೀಡಿತ್ತು. ಇದೀಗ ಈ ಭೇಟಿಯಿಂದ ಸಿಟ್ಟಾಗಿರುವ ಚೀನ ತೈವಾನ್‌ನ ಸುತ್ತಮುತ್ತ ತನ್ನ ಯುದ್ಧ ಹಡಗುಗಳು ಹಾಗೂ ಯುದ್ಧ ವಿಮಾನಗಳನ್ನು ನಿಯೋಜಿಸಿದೆ. ಕಳೆದ ಅಗಸ್ಟ್ ನಲ್ಲಿಯೂ ತೈವಾನ್ ಅಧ್ಯಕ್ಷೆ ತೈಪೆಗೆ ಭೇಟಿ ನೀಡಿದಾಗಲೂ ಚೀನ ತೈವಾನ್ ಮೇಲೆ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು. ಚೀನದಿಂದ ತೈವಾನ್‌ನನ್ನು ರಕ್ಷಿಸಲು ಸಹಾಯಹಸ್ತ ಚಾಚಿರುವ ಅಮೆರಿಕಕ್ಕೂ ಚೀನ ಬೆದರಿಕೆ ಹಾಕಿದೆ. ತೈವಾನ್ ಸ್ವಾವಲಂಬಿಯಾಗುವುದನ್ನು ಇಷ್ಟ ಪಡದ ಚೀನ, ತೈವಾನ್‌ಗೆ ಸಹಕರಿಸುವ ಎಲ್ಲ ದೇಶಗಳನ್ನು ಹಾಗೂ ಅದರೊಂದಿಗಿನ ಉದ್ಯಮದ ವ್ಯವಹಾರದ ಮೇಲೂ ನಿರ್ಬಂಧ ಹೇರಿದೆ.
Advertisement
ತೈವಾನ್‌ನ ನಿಲುವು ತನ್ನ ಭವಿಷ್ಯವನ್ನು ದೇಶದ ಜನರು ನಿರ್ಧರಿಸಬಹುದೇ ಹೊರತು ಬೇರೆ ಯಾರೂ ಅಲ್ಲ ಎಂದು ತೈವಾನ್ ಪ್ರತಿಪಾದಿಸುತ್ತಲೇ ಬಂದಿದೆ. ಪೀಪಲ್ಸ್ ರಿಪಬ್ಲಿಕ್ ಆಫ್ ಚೀನ ಯಾವತ್ತೂ ತೈವಾನ್‌ನಲ್ಲಿ ಅಧಿಕಾರ ನಡೆಸಿಲ್ಲ, ಮುಂದೆ ನಡೆಸಲೂ ಸಾಧ್ಯವಿಲ್ಲ. ತೈವಾನ್ ಮೇಲೆ ಸಾರ್ವಭೌಮತ್ವ ಸಾಧಿಸಲು ಚೀನಕ್ಕೆ ಅವಕಾಶ ನೀಡಲಾಗದು ಎಂದು ಸ್ಪಷ್ಟ ಮಾತುಗಳಲ್ಲಿ ಹೇಳುತ್ತಲೇ ಬಂದಿದೆ. ತೈವಾನ್ ಶಾಂತಿಯನ್ನು ಬಯ ಸುತ್ತದೆ. ಒಂದು ವೇಳೆ ದೇಶದ ಸ್ವಾತಂತ್ರ್ಯಕ್ಕೆ ಧಕ್ಕೆಯಾದರೆ ಅದನ್ನು ಎದುರಿಸಲು ಸದಾ ಸಿದ್ಧ ಎಂದು ಸಾರಿದೆ. ಅಲ್ಲದೆ ತೈವಾನ್ ಜಾಗತಿಕ ಸಮುದಾಯದಿಂದ ನೆರವನ್ನು ಪಡೆದುಕೊಂಡು ಸ್ವತಂತ್ರ ಮತ್ತು ಅಭಿವೃದ್ಧಿಶೀಲ ರಾಷ್ಟ್ರವಾಗಿ ಹೊರಹೊಮ್ಮಲು ಪ್ರಯತ್ನಶೀಲವಾಗಿದೆ. ತೈವಾನ್‌ನ ಈ ನಿಲುವು ಚೀನದ ನಿದ್ದೆಯನ್ನು ಕೆಡಿಸುವಂತೆ ಮಾಡಿದ್ದು ಈ ಕಾರಣದಿಂದಾಗಿಯೇ ಪದೇಪದೆ ತೈವಾನ್‌ಗೆ ಯುದ್ಧದ ಬೆದರಿಕೆ ಒಡ್ಡುತ್ತಿದೆ. ಆದರೆ ತೈವಾನ್ ಅಂತಾರಾಷ್ಟ್ರೀಯ ಸಮುದಾಯದ ಬೆಂಬಲದೊಂದಿಗೆ ಧೈರ್ಯದಿಂದ ಮುನ್ನಡೆಯುತ್ತಿದೆ.