ನವದೆಹಲಿ: ಭಾರತದೊಂದಿಗಿನ ಗಡಿ ತಂಟೆಯನ್ನೇ ಕೇಂದ್ರೀಕರಿಸಿ ಲಗುಬಗೆಯಲ್ಲಿ ಚೀನಾ ಸರ್ಕಾರ ಜಾರಿಗೊಳಿಸಿದ ಗಡಿ ಕಾಯ್ದೆಗೆ ಕೇಂದ್ರ ಸರ್ಕಾರ ಆಕ್ಷೇಪ ಮಾಡಿದೆ.
ನವದೆಹಲಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗಚಿ, “ಗಡಿಯನ್ನು ರಕ್ಷಿಸಿಕೊಳ್ಳುವ ನೆಪದಲ್ಲಿ ಕಾಯ್ದೆ ಜಾರಿ ಮಾಡುವುದು ಸಮಂಜಸವಲ್ಲ ಮತ್ತು ಇದೊಂದು ಭಾರತಕ್ಕೆ ಆತಂಕ ತರುವ ವಿಚಾರವಾಗಿದೆ’ ಎಂದು ಹೇಳಿದ್ದಾರೆ.
ಹೀಗಾಗಿ, ಭಾರತದ ಜತೆಗೆ ಲಡಾಖ್‌ನ ಪೂರ್ವ ಭಾಗ ಮತ್ತು ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಚೀನಾ ತೆಗೆದಿರುವ ತಕರಾರು ಬಗೆಹರಿಸಲು ಅನಾನುಕೂಲವಾಗಲಿದೆ ಎಂದು ಬಗಚಿ ಹೇಳಿದ್ದಾರೆ. ಜತೆಗೆ ಎರಡೂ ದೇಶಗಳ ನಡುವೆ ಹಾಲಿ ಇರುವ ರಾಜತಾಂತ್ರಿಕ ಬಾಂಧವ್ಯಕ್ಕೂ ಧಕ್ಕೆಯಾಗಲಿದೆ ಎಂದರು. ಕಳೆದ ಶನಿವಾರ ಚೀನಾ ಸರ್ಕಾರ ಹೊಸ ರೀತಿಯ ಗಡಿ ಕಾಯ್ದೆಯನ್ನು ಅಂಗೀಕರಿಸಿದ್ದು ಸರ್ಕಾರದ ಗಮನಕ್ಕೆ ಬಂದಿದೆ ಎಂದಿದ್ದಾರೆ.
ಇದನ್ನೂ ಓದಿ:ಭಿಕ್ಷಾಟನೆ ಜೊತೆಗೆ ದುಷ್ಟಟಗಳಿಗೆ ಒಳಗಾಗಿದ್ದ 15 ಮಂದಿಯನ್ನು ರಕ್ಷಿಸಿದ ನ್ಯಾಯಾಧೀಶರು
ಪೂರ್ವ ಲಡಾಖ್‌ನಲ್ಲಿ 17 ತಿಂಗಳಿಂದ ಭಾರತ ಮತ್ತು ಚೀನಾ ನಡುವೆ ಗಡಿ ತಂಟೆ ಇನ್ನೂ ಪರಿಹಾರವಾಗದೇ ಉಳಿದಿದೆ. ಈ ಬಗ್ಗೆ 20 ಸುತ್ತುಗಳ ಸೇನಾಧಿಕಾರಿಗಳ ಮಾತುಕತೆ ನಡೆದರೂ, ಯಾವುದೇ ರೀತಿಯಲ್ಲಿ ಸುಸೂತ್ರ ಫಲಿತಾಂಶ ಲಭ್ಯವಾಗಿಲ್ಲ. ಅದಕ್ಕೆ ಪೂರಕವಾಗಿ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರರು, ಚೀನಾ ಸರ್ಕಾರ ಮುಂದಿನ ವರ್ಷದ ಜನವರಿ 1ರಿಂದ ಜಾರಿಗೆ ತರಲು ಉದ್ದೇಶಿಸಿರುವ ಹೊಸ ಗಡಿ ಕಾಯ್ದೆ ಸಮರ್ಥನೀಯವಲ್ಲ ಎಂದಿದ್ದಾರೆ. 1963ರಲ್ಲಿ ಚೀನಾ ಮತ್ತು ಪಾಕಿಸ್ತಾನ ಮಾಡಿಕೊಂಡ ಗಡಿ ಒಪ್ಪಂದವನ್ನು ಕೇಂದ್ರ ಸರ್ಕಾರ ಇದುವರೆಗೆ ಪರಿಗಣಿಸಿಲ್ಲ. ಎರಡೂ ದೇಶಗಳು ಭಾರತದ ನೆಲವನ್ನು ಅತಿಕ್ರಮಿಸಿವೆ ಎಂಬ ನಿಲುವಿಗೆ ಈಗಲೂ ಬದ್ಧವಾಗಿದೆ ಎಂದು ವಕ್ತಾರರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಎರಡೂ ದೇಶಗಳ ನಡುವೆ ಅ.10ರಂದು ಮಾತುಕತೆ ನಡೆದಿತ್ತು. ಅದರಲ್ಲಿ ಯಾವುದೇ ಧನಾತ್ಮಕ ಫಲಿತಾಂಶ ವ್ಯಕ್ತವಾಗಿಲ್ಲ. ಭಾರತ ಮತ್ತು ಚೀನಾ 50ರಿಂದ 60 ಸಾವಿರ ಯೋಧರನ್ನು ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ನಿಯೋಜಿಸಿವೆ.
ಹೊಸ ಗಡಿ ನೀತಿಯಲ್ಲಿ ಏನಿದೆ?
ಚೀನಾ ಅ.23ರಂದು ಅಂಗೀಕರಿಸಿದ ಗಡಿ ಕಾಯ್ದೆಯಲ್ಲಿ ಯುದ್ಧ ಸಹಿತ ಯಾವುದೇ ರೀತಿಯ ಬೆಲೆ ತೆತ್ತಾದರೂ, ದೇಶದ ಸಾರ್ವಭೌಮತೆ, ಏಕತೆ, ಗಡಿಯ ರಕ್ಷಣೆ ಮಾಡುವ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವ ತೀರ್ಮಾನ ಕೈಗೊಳ್ಳಲಾಗಿದೆ.