ನವದೆಹಲಿ: ಮುಂದಿನ ವಾರ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಜಿ20 ರಾಷ್ಟ್ರಗಳ ಪ್ರವಾಸೋದ್ಯಮ ಸಭೆ ಆಯೋಜನೆಗೆ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿರುವಂತೆಯೇ, ಚೀನಾ ಕ್ಯಾತೆ ತೆಗೆದಿದೆ. “ವಿವಾದಿತ ಪ್ರದೇಶ’ದಲ್ಲಿ ಯಾವುದೇ ರೀತಿಯ ಜಿ20 ಸಭೆಯನ್ನು ಆಯೋಜಿಸುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ ಮತ್ತು ಅಂಥ ಯಾವುದೇ ಸಭೆಯಲ್ಲಿ ನಾವು ಭಾಗವಹಿಸುವುದಿಲ್ಲ ಎಂದು ಹೇಳಿದೆ.
ಈ ಹಿಂದೆ ಅರುಣಾಚಲ ಪ್ರದೇಶದಲ್ಲೂ ಭಾರತವು ಜಿ20 ಸಭೆ ಆಯೋಜಿಸಿದ್ದಾಗ, ಅದಕ್ಕೂ ಚೀನಾ ಗೈರಾಗಿತ್ತು. ಮೇ 22ರಿಂದ 24ರವರೆಗೆ ಶ್ರೀನಗರದಲ್ಲಿ ನಡೆಯಲಿರುವ ಜಿ20 ಸಭೆಯಲ್ಲಿ ಪಾಲ್ಗೊಳ್ಳಲು ಟರ್ಕಿ, ಸೌದಿ ಅರೇಬಿಯಾ ಮತ್ತು ಚೀನಾ ನೋಂದಣಿ ಮಾಡಿಕೊಂಡಿಲ್ಲ ಎಂದು ಶನಿವಾರ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಘೋಷಿಸಿತು. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದಂದಿನಿಂದಲೂ ಟರ್ಕಿ ಮತ್ತು ಸೌದಿ ಅರೇಬಿಯಾವು ಭಾರತದ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿವೆ. ಕಣಿವೆ ರಾಜ್ಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದೂ ಆರೋಪಿಸುತ್ತಾ ಬಂದಿವೆ. ಈ ಎರಡು ದೇಶಗಳ ಈ ದಾಳಿಗೆ ಪಾಕ್ ಕುಮ್ಮಕ್ಕು ಕೂಡ ಕಾರಣ ಎಂದು ಹೇಳಲಾಗಿದೆ.
ಇನ್ನು, ಚೀನಾ ವಿದೇಶಾಂಗ ಸಚಿವಾಲಯವು ಶನಿವಾರ ಪ್ರಕಟಣೆ ಹೊರಡಿಸಿ, “ಶ್ರೀನಗರದಲ್ಲಿ ನಡೆಯುವ ಜಿ20 ಪ್ರವಾಸೋದ್ಯಮ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ” ಎಂದು ಸ್ಪಷ್ಟಪಡಿಸಿದೆ. ವಿವಾದಿತ ಪ್ರದೇಶದಲ್ಲಿ ಸಭೆ ನಡೆಸುವುದನ್ನು ನಾವು ವಿರೋಧಿಸುತ್ತೇವೆ. ಅಂಥ ಸಭೆಯಲ್ಲಿ ನಾವು ಭಾಗಿಯಾಗುವುದಿಲ್ಲ ಎಂದೂ ಹೇಳಿದೆ.
ಚೀನಾ ಸರ್ಕಾರಕ್ಕೆ ತನ್ನದೇ ನೆಲದಲ್ಲಿ ಸಭೆ ನಡೆಸುವ ಬಗ್ಗೆ ಯಾವ ತಡೆಯನ್ನು ನಾವು ಒಡ್ಡುವುದಿಲ್ಲ. ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿಯ ವಾತಾವರಣ ಇದ್ದರೆ ಬಾಂಧವ್ಯಗಳು ಚೆನ್ನಾಗಿರುತ್ತವೆ.