Advertisement

ಚೀನದ ವಿಸ್ತರಣವಾದದ ಸೋಂಕಿಗೆ ಮದ್ದು ಅರೆಯಲೇ ಬೇಕು

08:35 PM Apr 04, 2023 | Team Udayavani |

ಭಾರತದ ಪಾಲಿಗೆ ಬಲುದೊಡ್ಡ ಹೊರೆಯಾಗಿಯೇ ಪರಿಣಮಿಸಿರುವ ನೆರೆಯ ಚೀನ ಈಗ ಮತ್ತೆ ಬಾಲಬಿಚ್ಚಿದೆ. ಉಭಯ ದೇಶಗಳ ನಡುವಣ ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ಒಂದಲ್ಲ ಒಂದು ತಗಾದೆ ತೆಗೆದು ಭಾರತದೊಂದಿಗೆ ಸಂಘರ್ಷದ ವಾತಾವರಣ ಸೃಷ್ಟಿಸುವ ಮೂಲಕ ಕಿರುಕುಳ ನೀಡುತ್ತಲೇ ಬಂದಿದೆ. ಭಾರತದ ಅವಿಭಾಜ್ಯ ಭಾಗವಾಗಿರುವ ಅರುಣಾಚಲ ಪ್ರದೇಶದ ಭೂಭಾಗಗಳ ಮೇಲೆ ಹಕ್ಕು ಸ್ಥಾಪಿಸಲು ಇನ್ನಿಲ್ಲದ ಕುತಂತ್ರಗಳನ್ನು ನಡೆಸುತ್ತ ಬಂದಿರುವ ಚೀನ ಈಗ ಮತ್ತೆ ಕ್ಯಾತೆ ತೆಗೆದಿದೆ.

Advertisement

ಈ ಹಿಂದೆ ಹಲವಾರು ಬಾರಿ ಎಲ್‌ಎಸಿ ಮತ್ತು ಅರುಣಾಚಲ ಪ್ರದೇಶದ ಭೂ ಭಾಗಗಳನ್ನು ಅತಿಕ್ರಮಣ ಮಾಡಲೆತ್ನಿಸಿದಾಗಲೆಲ್ಲ ಭಾರತ ಸೂಕ್ತ ಪ್ರತ್ಯುತ್ತರವನ್ನು ನೀಡಿ ಚೀನೀ ಸೇನೆಯನ್ನು ಹಿಮ್ಮೆಟ್ಟಿಸಿದೆ. ಆ ಮೂಲಕ ಚೀನಾದ ವಿಸ್ತರಣವಾದದ ಹಪಾಹಪಿಕೆಯನ್ನು ಜಗಜ್ಜಾಹೀರುಗೊಳಿಸಿದೆ. ಇವೆಲ್ಲದರ ಹೊರತಾಗಿಯೂ ಚೀನ ಗಡಿಯಲ್ಲಿ ನಿರಂತರವಾಗಿ ಪ್ರಚೋದನಕಾರಿ ಹಾಗೂ ಭಾರತ ಮತ್ತು ಚೀನಾ ನಡುವಣ ದ್ವಿಪಕ್ಷೀಯ ಒಪ್ಪಂದ ಮತ್ತು ಅಂತಾರಾಷ್ಟ್ರೀಯ ನಿಯಮಾವಳಿಗಳನ್ನು ಉಲ್ಲಂ ಸುವ ಮೂಲಕ ಉಭಯ ದೇಶಗಳ ನಡುವೆ ಗಡಿ ವಿವಾದ ಜೀವಂತವಾಗಿರಿಸುವ ಪ್ರಯತ್ನ ನಡೆಸುತ್ತಿರುವುದು ಖಂಡನೀಯ.

ಚೀನ ಈಗ ಏಕಾಏಕಿಯಾಗಿ ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಮರುನಾಮಕರಣ ಮಾಡಿದ್ದೇ ಅಲ್ಲದೆ ಈ ಪ್ರದೇಶಗಳು ತನಗೇ ಸೇರಿದೆ ಎಂದು ಪ್ರತಿಪಾದಿಸಿದೆ. ಈ ಪ್ರದೇಶಗಳಿಗೆ ಚೀನಿ ಭಾಷೆಯಲ್ಲಿರುವ ಹೆಸರುಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಹೊಸ ವರಾತ ಶುರುವಿಟ್ಟುಕೊಂಡಿದೆ. ಆದರೆ ಭಾರತ ಸರ್ಕಾರ ನೆರೆ ರಾಷ್ಟ್ರದ ಈ ಕಿಡಿಗೇಡಿತನಕ್ಕೆ ಕಿಮ್ಮತ್ತಿಲ್ಲವಾಗಿದ್ದು, ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಭಾಗವಾಗಿದೆ ಎಂದು ಸಾರಿದೆ.

ಈ ಹಿಂದೆಯೂ ಚೀನ ಸರ್ಕಾರ ಇಂತಹುದೇ ಷಡ್ಯಂತ್ರವನ್ನು ಅನುಸರಿಸಿತ್ತು. 2017ರ ಏ.21ರಂದು ಅರುಣಾಚಲ ಪ್ರದೇಶದ 6 ಸ್ಥಳಗಳು ಮತ್ತು 2021ರ ಡಿ. 30ರಂದು 15 ಸ್ಥಳಗಳಿಗೆ ಮರುನಾಮಕರಣ ಮಾಡಿ ಇವು ತನಗೆ ಸೇರಿದ್ದು ಎಂದು ಮೊಂಡುತನ ಪ್ರದರ್ಶಿಸಿತ್ತು. ಈ ವೇಳೆ ಭಾರತ ಸರ್ಕಾರ ಸರಾಸಗಟಾಗಿ ಚೀನದ ವಾದವನ್ನು ತಳ್ಳಿ ಹಾಕಿತ್ತು. ಅಷ್ಟು ಮಾತ್ರವಲ್ಲದೆ 2019-20ರ ಅವಧಿಯಲ್ಲಿ ಅರುಣಾಚಲ ಪ್ರದೇಶಕ್ಕೆ ಟಿಬೆಟಿಯನ್‌ ಧರ್ಮಗುರು ದಲೈ ಲಾಮಾ, ಪ್ರಧಾನಿ ನರೇಂದ್ರ ಮೋದಿ, ರಕ್ಷಣ ಸಚಿವ ರಾಜನಾಥ್‌ ಸಿಂಗ್‌, ಗೃಹ ಸಚಿವ ಅಮಿತ್‌ ಶಾ ಭೇಟಿ ನೀಡಿದ ಸಂದರ್ಭದಲ್ಲೂ ವಿರೋಧ ವ್ಯಕ್ತಪಡಿಸಿತ್ತಾದರೂ ಭಾರತ ಇದಕ್ಕೆ ಸೊಪ್ಪು ಹಾಕಿರಲಿಲ್ಲ.

ಭಾರತದಿಂದ ಪದೇ ಪದೆ ಮುಖಭಂಗಕ್ಕೀಡಾಗುತ್ತಿದ್ದರೂ ಚೀನ ಮಾತ್ರ ತನ್ನ ಹೊಣೆಗೇಡಿ ವರ್ತನೆಯಿಂದ ಹೊರಬರುತ್ತಿಲ್ಲ. ಹಳೆಯ ಕುತಂತ್ರಗಳ ಜತೆಜತೆಯಲ್ಲಿ ಹೊಸ ಜಾಲಗಳನ್ನು ಹೆಣೆಯುವ ಮೂಲಕ ಭಾರತವನ್ನು ವಿನಾ ಕಾರಣ ಕೆಣಕುತ್ತಿದೆ. ಗಾಲ್ವಾನ್‌ ಸಂಘರ್ಷ ಮತ್ತು ಆ ಬಳಿಕ ಉಭಯ ದೇಶಗಳ ಸೇನೆಗಳ ನಡುವೆ ನಡೆದ ಘರ್ಷಣೆಯ ಸಂದರ್ಭದಲ್ಲೆಲ್ಲ ಭಾರತೀಯ ಯೋಧರು ಚೀನಿ ಸೇನೆಗೆ ತಕ್ಕ ಪ್ರತ್ಯುತ್ತರ ನೀಡಿದ ಬಳಿಕವೂ ಚೀನಾ ಗಡಿಯಲ್ಲಿ ಸವಾರಿ ನಡೆಸಲೆತ್ನಿಸುತ್ತಿರುವುದು ದಾಷ್ಟ್ಯತನದ ಪರಮಾವಧಿಯೇ ಸರಿ.

Advertisement

ಚೀನದ ವಿಸ್ತರಣವಾದದ ವಿರುದ್ಧ ಇಡೀ ಜಾಗತಿಕ ಸಮುದಾಯವೇ ತಿರುಗಿ ಬಿದ್ದಿದ್ದು ಯಾವೊಂದೂ ರಾಷ್ಟ್ರಗಳೂ ಅದನ್ನು ನಂಬುವ ಸ್ಥಿತಿಯಲ್ಲಿಲ್ಲ. ವಿಶ್ವದ ದೊಡ್ಡಣ್ಣನಾಗುವ ಗುಂಗಿನಲ್ಲಿರುವ ಚೀನ ಇದನ್ನು ಸಾಕಾರಗೊಳಿಸುವ ಪ್ರಯತ್ನವಾಗಿ ಬಲಾಡ್ಯ ರಾಷ್ಟ್ರಗಳನ್ನು ಎದುರು ಹಾಕಿಕೊಳ್ಳುವ ಪ್ರಯತ್ನಗಳನ್ನು ನಡೆಸುತ್ತಲೇ ಬಂದಿವೆ. ಆದರೆ ಈ ಎಲ್ಲ ಕುತಂತ್ರಗಳಲ್ಲೂ ಚೀನ ಮುಖಭಂಗಕ್ಕೀಡಾದರೂ ಪಾಠ ಕಲಿತಂತೆ ಕಾಣುತ್ತಿಲ್ಲ. ಸದ್ಯ ಚೀನ ಕೇವಲ ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಒಂದು ಸವಾಲಾಗಿ ಪರಿಣಮಿಸಿದ್ದು ಅದರ ವಿರುದ್ಧ ಮುಗಿಬೀಳಲು ಕಾಯುತ್ತಿವೆ. ವಾಸ್ತವವನ್ನು ಅರಿತುಕೊಳ್ಳದೇ ಚೀನ ತನ್ನ ಮೊಂಡಾಟವನ್ನು ಮುಂದುವರಿಸಿದ್ದೇ ಆದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆತ್ತಲಾಗುವುದು ನಿಸ್ಸಂಶಯ.

Advertisement

Udayavani is now on Telegram. Click here to join our channel and stay updated with the latest news.

Next