ಭಾರತದ ಮುಂದೆ ಚೀನಾ ಮತ್ತೂಂದು ಚಾಲಾಕಿ ದಾಳ ಉದುರಿಸಿದೆ. ಆದರೆ ಭಾರತ ಬಹಳ ದಿಟ್ಟ ತಂತ್ರವನ್ನು ಅನುಸರಿಸಿ ನಿಮ್ಮ ಆಟ ಇಲ್ಲಿ ನಡೆಯುವುದಿಲ್ಲ ಎಂದು ನೇರವಾಗಿಯೇ ಚೀನಾಕ್ಕೆ ಹೇಳಿದೆ. ಶಾಂಘಾಯ್ ಸಹಯೋಗ ಸಂಘಟನೆ(ಎಸ್‌ಸಿಒ) ಅಡಿಯಲ್ಲಿ ಚೀನಾ, ಭಾರತ ಮತ್ತು ಪಾಕಿಸ್ತಾನ ತ್ರಿಪಕ್ಷೀಯ ಸಹಭಾಗಿತ್ವಕ್ಕೆ ಮುಂದಾಗಬೇಕು ಎಂಬ ಚೀನಾದ ಸಲಹೆಯನ್ನು ಭಾರತ “ಅದೆಲ್ಲ ಸಾಧ್ಯವಿಲ್ಲ’ ಎಂದು ತಳ್ಳಿಹಾಕಿದೆ. ಆದಾಗ್ಯೂ ಈ ಸಲಹೆ ಚೀನಿ ಸರ್ಕಾರದಿಂದ ನೇರವಾಗಿ ಬಂದಿಲ್ಲ, ಬದಲಾಗಿ, ಭಾರತ-ಚೀನಾ ಸಂಬಂಧ ವೃದ್ಧಿಯ ಕುರಿತು ದೆಹಲಿಯಲ್ಲಿ ಆಯೋಜಿತವಾಗಿದ್ದ ಒಂದು ಸೆಮಿನಾರ್‌ನಲ್ಲಿ ಭಾರತದಲ್ಲಿರುವ ಚೀನೀ ರಾಜತಾಂತ್ರಿಕ ಲುವೋ ಝಾವೋಹುಯ್ ಎದುರಿಟ್ಟ ಪ್ರಸ್ತಾಪವಿದು. ಆದರೆ ಒಂದು ಸರ್ಕಾರದ ನಿರ್ದೇಶನವಿಲ್ಲದೆ ಅದರ ಪ್ರತಿನಿಧಿಯೊಬ್ಬ ಇಂಥ ಸಲಹೆ ನೀಡಲು ಸಾಧ್ಯವಿಲ್ಲ ಎನ್ನುವುದು ಸತ್ಯ. ಹಾಗಾಗಿ ಈ “ತ್ರಿಪಕ್ಷೀಯ’ ಪ್ರಸ್ತಾಪದ ಹಿಂದೆ ಚೀನಿ ಸರ್ಕಾರದ ಅಧಿಕೃತ ಮೊಹರು ಇದೆ ಎಂದೇ ಭಾವಿಸಬೇಕು. ಇದೆಲ್ಲ ತನ್ನ ಸ್ವಹಿತಾಸಕ್ತಿಗಾಗಿ ಭಾರತವನ್ನು ಯಾವ ಹಂತದವರೆಗೂ ತಳ್ಳಬಹುದು ಎಂದು ಪರೀಕ್ಷಿಸಿ ನೋಡುವ ಚೀನಾದ ಎಂದಿನ ಗುಣವೂ ಇರಬಹುದು. ಹೀಗಾಗಿ ರಾಜಕೀಯ ಪಂಡಿತರೂ ಕೂಡ ಈ “ಸಲಹೆ’ಯನ್ನು ಚೀನಾದ ಸ್ವಹಿತಾಸಕ್ತಿಯ ತಂತ್ರ ಎಂದೇ ನೋಡುತ್ತಿದ್ದಾರೆ.
ಇದನ್ನೆಲ್ಲ ಗಮನಿಸಿದಾಗ ಭಾರತ ಮತ್ತು ಪಾಕಿಸ್ತಾನದಿಂದ ಹೇಗಾದರೂ ಮಾಡಿ ತನ್ನ ವ್ಯಾವಹಾರಿಕ ಮತ್ತು ವ್ಯೂಹಾತ್ಮಕ ಲಾಭ ಹೆಚ್ಚಿಸಿಕೊಳ್ಳುವ ದಾರಿಯನ್ನು ಚೀನಾ ಹುಡುಕುತ್ತಿದೆ ಎನ್ನುವುದು ಸ್ಪಷ್ಟವಾಗುತ್ತಿದೆ. ವ್ಯಾಪಾರ ವಿಸ್ತಾರ ಮತ್ತು ಅರ್ಧ ಜಗತ್ತಿನವರೆಗೆ ತನ್ನ ವ್ಯಾವಹಾರಿಕ ನಿಲುಕನ್ನು ಸ್ಥಾಪಿಸಲು ಚೀನಾ ಆರಂಭಿಸಿರುವ ಬೆಲ್ಟ್ ಅಂಡ್ ರೋಡ್ ಪ್ರಾಜೆಕ್ಟ್(ಹಿಂದೆ ಒನ್ ಬೆಲ್ಟ್ ಒನ್ ರೋಡ್) ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಹರಿದುಹೋಗುತ್ತದೆ. ಈ ದಾರಿಯ ಬಗ್ಗೆ ಭಾರತ ಆರಂಭದಿಂದಲೂ ಕಳವಳ-ವಿರೋಧ ವ್ಯಕ್ತಪಡಿಸುತ್ತಾ ಬರುತ್ತಿದೆ. ಭಾರತದ ಈ ವಿರೋಧವು ಚೀನಾಕ್ಕೆ ತಲೆನೋವಾಗಿ ಪರಿಣಮಿಸಿದೆ. ಆದರೆ ಚೀನಾಕ್ಕೆ ಈ ಯೋಜನೆ ಏಷ್ಯಾದಲ್ಲಿ ಏಕಮೇವಾದ್ವಿತೀಯನಾಗಲು ಇರುವ ಪ್ರಮುಖ ದಾರಿ. “ಭಾರತ ಮತ್ತು ಚೀನಾ ಈಗ ಡೋಕ್ಲಾಂನಂಥ ವಿವಾದಗಳಲ್ಲಿ ಸಿಕ್ಕಿಕೊಳ್ಳುವಂಥ ಪರಿಸ್ಥಿತಿಯಲ್ಲಿ ಇಲ್ಲ’ ಎಂದು ಚೀನಾ ರಾಜತಾಂತ್ರಿಕ ಹೇಳುತ್ತಾರೆ. ಹಾಗಿದ್ದರೆ ಈ ವಿವಾದಕ್ಕೆ ಕಾರಣವಾಗಿದ್ದು ಯಾರು? ಖುದ್ದು ಚೀನಾ ಅಲ್ಲವೇ?
ಚೀನಾ-ರಷ್ಯಾ ಮತ್ತು ಮಂಗೋಲಿಯಾ ತ್ರಿಪಕ್ಷೀಯ ಸಂಬಂಧ ಮಾಡಿಕೊಳ್ಳ ಬಲ್ಲವು ಎಂದಾದರೆ ಭಾರತ-ಪಾಕ್-ಚೀನಾ ಕೂಡ ಅಂಥದ್ದೊಂದು ಸಹಭಾಗಿತ್ವಕ್ಕೆ ಮುಂದಾಗಬಹುದಲ್ಲ ಎನ್ನುವುದು ಚೀನಾದ ವಾದ. ಆದರೆ ಆ ದೇಶಗಳ ನಡುವಿರುವ ಪರಸ್ಪರ ವಿಶ್ವಾಸವು ಭಾರತ-ಪಾಕ್ ಅಥವಾ ಚೀನಾ-ಪಾಕ್ ನಡುವೆ ಇದೆಯೇ? ಪಾಕಿಸ್ತಾನದೊಂದಿಗೆ ಚೀನಾದ ಸಂಬಂಧ ಅತ್ಯುತ್ತಮವಾಗಿದೆ, ಇದರರ್ಥ ಇಂಥದ್ದೊಂದು ಸಹಭಾಗಿತ್ವದಲ್ಲಿ ಇವೆರಡೂ ರಾಷ್ಟ್ರಗಳ ಸ್ವಹಿತಾಸಕ್ತಿ ಅಡಗಿದೆಯೇ ಹೊರತು ಭಾರತಕ್ಕೇನೂ ದಕ್ಕದು. ಭಾರತ ದ್ವೇಷವನ್ನೇ ಅಧಿಕೃತ ನೀತಿಯಾಗಿಸಿಕೊಂಡಿರುವ ಪಾಕಿಸ್ತಾನದೊಂದಿಗೆ ಸದ್ಯಕ್ಕಂತೂ ಶಾಂತಿ-ಸಹಭಾಗಿತ್ವದ ಯೋಚನೆಯನ್ನೂ ಮಾಡುವಂತಿಲ್ಲ.
ಶಾಂಘಾಯ್ ಸಹಯೋಗ ಸಂಘಟನೆ, ಬ್ರಿಕ್ಸ್, ಜಿ-20ಯಂಥ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತ ಮತ್ತು ಚೀನಾ ಜೊತೆಯಾಗಿರಬಹುದು, ಅಲ್ಲಿ ವ್ಯಾಪಾರದ ವಿಷಯವಾಗಿಯೇ ಪ್ರಮುಖ ಚರ್ಚೆಗಳಾಗುವುದು. ಆದರೆ ಬಹುಪಕ್ಷೀಯ ವೇದಿಕೆಗಳ ಮಾತು ಬೇರೆ. ಚೀನಾ ಮತ್ತು ಪಾಕಿಸ್ತಾನದೊಂದಿಗೆ ಭಾರತಕ್ಕೆ ಗಡಿ ಸಮಸ್ಯೆಯಿದೆ, ಅತ್ತ ಪಾಕ್ ಉಗ್ರವಾದಿಗಳಿಗೆ, ಇತ್ತ ಚೀನಾ ನಕ್ಸಲರಿಗೆ ಬೆನ್ನೆಲುಬಾಗಿ ನಿಂತಿವೆ ಎನ್ನುವುದು ರಹಸ್ಯವಾಗೇನೂ ಉಳಿದಿಲ್ಲ.
ಇನ್ನು ಕಳೆದ ನಾಲ್ಕು ವರ್ಷಗಳಲ್ಲಿ ಚೀನಿ ಅಧ್ಯಕ್ಷ ಮತ್ತು ನಮ್ಮ ಪ್ರಧಾನಿಗಳ ನಡುವೆ ಅನೇಕ ಭೇಟಿಗಳಾಗಿವೆ. ಆದರೂ ಚೀನಾ ಡೋಕ್ಲಾಂನಂಥ ಬಿಕ್ಕಟ್ಟು ಸೃಷ್ಟಿಸಲು ಹಿಂದೆ ಮುಂದೆ ನೋಡಲಿಲ್ಲ. ಹೀಗಾಗಿ ಯಾವ ಮಾತುಕತೆಯಿಂದಲೂ ಚೀನಾ ತನ್ನ ಬುದ್ಧಿ ಬಿಡದು ಎನ್ನುವುದು ಭಾರತಕ್ಕೆ ಅರಿವಾಗಿದೆ.
ಇದೇ ಕಾರಣಕ್ಕಾಗಿಯೇ ಭಾರತ ಈಗ ಚೀನಾಕ್ಕೆ ಅದರದ್ದೇ ಭಾಷೆಯಲ್ಲೇ ಉತ್ತರಿಸಿದೆ. ಪಾಕಿಸ್ತಾನದೊಂದಿಗೆ ಸಂಬಂಧಿಸಿದ ವಿಷಯವನ್ನು ತಾನೇ ಬಗೆಹರಿಸಿಕೊಳ್ಳುವುದಾಗಿ, ಇದರಲ್ಲಿ ಮೂರನೇ ಪಾರ್ಟಿಯ ಅಗತ್ಯವಿಲ್ಲವೆಂದು ಭಾರತ ಮತ್ತೂಮ್ಮೆ ಸ್ಪಷ್ಟಪಡಿಸಿರುವುದು ಸ್ವಾಗತಾರ್ಹ. ಮುಂದೆಯೂ ಚೀನಾದೊಂದಿಗಿನ ಭಾರತದ ಸಂವಹನ ವೈಖರಿ ಇದೇ ಧಾಟಿಯಲ್ಲೇ ಇರಬೇಕು.