Advertisement

ಭೂತಾನ್‌ ಮೇಲೆ ಹೆಚ್ಚಾದ ಚೀನಿ ಒತ್ತಡ

03:58 AM Jul 24, 2020 | Hari Prasad |

ಚೀನ ಕೆಲ ವರ್ಷಗಳಿಂದ ಭೂತಾನ್‌ನ ಮೇಲೆ ಪ್ರಭಾವ ಬೀರಲು, ಭೂತಾನಿಯರನ್ನು ಭಾರತದಿಂದ ವಿಮುಖವಾಗಿಸಲು, ತನ್ಮೂಲಕ ಜನಾಭಿಪ್ರಾಯವನ್ನು ಚೀನ ಪರ ವಾಲಿಸಲು ಪ್ರಯತ್ನಿಸಲಾರಂಭಿಸಿದೆ.

Advertisement

ಇತ್ತೀಚೆಗಷ್ಟೇ ಭಾರತ – ಚೀನ ನಡುವೆ ಗಡಿ ಭಾಗದಲ್ಲಿ ಬಿಕ್ಕಟ್ಟು ತಾರಕಕ್ಕೇರಿದ್ದ ಸಮಯದಲ್ಲೇ ಹಠಾತ್ತನೆ ಚೀನ ನೆರೆಯ ಪುಟ್ಟ ರಾಷ್ಟ್ರ ಭೂತಾನ್‌ನೊಂದಿಗೂ ಗಡಿ ತಕರಾರು ತೆಗೆದದ್ದು ವರದಿಯಾಯಿತು.

ಅರುಣಾಚಲ ಪ್ರದೇಶದ ಗಡಿಗೆ ಹೊಂದಿಕೊಂಡ ಪೂರ್ವ ಭೂತಾನ್‌ ಪ್ರದೇಶವು ತನ್ನದೆಂದು ವಾದಿಸುವ ಚೀನ, ಭೂತಾನ್‌ನ ಸಕ್ತೆಂಗ್‌ ಅಭಯಾರಣ್ಯದಲ್ಲಿನ ಚಟುವಟಿಕೆಗಳನ್ನು ನಿಲ್ಲಿಸಬೇಕೆಂದು ತಗಾದೆ ತೆಗೆಯಿತು!

ಚೀನ ಸಕ್ತೆಂಗ್‌ ಅಭಯಾರಣ್ಯದ ಮೇಲೆ ಹಕ್ಕು ಸಾಧಿಸಲು ಮೊದಲಿಂದ ಪ್ರಯತ್ನಿಸುತ್ತಿದೆಯಾದರೂ, ಈಗ ಹಠಾತ್ತನೆ ಈ ವಿಚಾರದಲ್ಲಿ ಆಕ್ರಮಣಶೀಲತೆ ತೋರಿಸಿದ್ದು ಸಹಜವಾಗಿಯೇ ಭಾರತ ಮತ್ತು ಭೂತಾನ್‌ಗೆ ಅಚ್ಚರಿ ಮೂಡಿಸಿತ್ತು. ಏಕೆಂದರೆ, ಸಕ್ತೆಂಗ್‌ ಪ್ರದೇಶವು ಚೀನಿ ಆಕ್ರಮಿತ ಟಿಬೆಟ್‌ನೊಂದಿಗೆ ಗಡಿಯನ್ನಂತೂ ಹಂಚಿಕೊಂಡಿಲ್ಲ.

ಜಾಗತಿಕ ಪರಿಸರ ಸೌಲಭ್ಯ ಮಂಡಳಿಯ 58ನೇ ಸಭೆಯಲ್ಲೂ ಚೀನ ಭೂತಾನ್‌ನ ಸಕ್ತೆಂಗ್‌ ವನ್ಯಜೀವಿ ಅಭಯಾರಣ್ಯಕ್ಕೆ ಧನಸಹಾಯ ನೀಡುವುದನ್ನು ವಿರೋಧಿಸಿತ್ತು. ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ಧ ಭೂತಾನ್‌, ಆ ಅಭಯಾರಣ್ಯವು ತನ್ನ ಅವಿಭಾಜ್ಯ ಅಂಗವೆಂದೂ, ಅದರ ಮೇಲಿನ ಸಂಪೂರ್ಣ ಹಕ್ಕು ತನ್ನದು ಎಂದು ಚೀನಕ್ಕೆ ಕಟುವಾಗಿಯೇ ಉತ್ತರಿಸಿತ್ತು.

Advertisement

ಆದರೆ ಈ ವಿಷಯ ತಣ್ಣಗಾಗುತ್ತಿದೆ ಎಂದೆನಿಸುವ ವೇಳೆಯಲ್ಲೇ ಚೀನ ಈಗ ಭೂತಾನ್‌ನ ಮುಂದೆ ಒಂದು ‘ಪ್ಯಾಕೇಜ್‌ ಪರಿಹಾರ’ವನ್ನು ಎದುರಿಟ್ಟಿದೆ. ಚೀನ, ತಾನು ಸಕ್ತೆಂಗ್‌ ವನ್ಯಜೀವಿ ಅಭಯಾರಣ್ಯದ ಮೇಲಿನ ಹಕ್ಕು ಸ್ಥಾಪನೆಯ ವಿಚಾರದಿಂದ ಹಿಂದೆ ಸರಿಯುವುದಾಗಿ ಹೇಳಿದೆ. ಆದರೆ, ‘ಭೂತಾನ್‌ “ಡೋಕ್ಲಾಂ’ ಪ್ರದೇಶವನ್ನು ಚೀನದ ಭಾಗವೆಂದು ಒಪ್ಪಿಕೊಳ್ಳಬೇಕು” ಎನ್ನುವ ಕಂಡೀಷನ್‌ ಇದರಲ್ಲಿ ಅಡಗಿದೆ! ಇದನ್ನು ಗಮನಿಸಿದಾಗ ಸ್ಪಷ್ಟವಾಗಿ ಅರಿವಾಗುವುದೇನೆಂದರೆ, ಚೀನದ ಗುರಿ ಖಂಡಿತ ಭೂತಾನ್‌ ಅಲ್ಲ. ಬದಲಾಗಿ ಭಾರತವೇ!

ಡೋಕ್ಲಾಂ ಟ್ರೈ ಜಂಕ್ಷನ್‌ ವ್ಯೂಹಾತ್ಮಕವಾಗಿ ಭಾರತ ಮತ್ತು ಚೀನಕ್ಕೆ ಬಹುಮುಖ್ಯವಾದ ಪ್ರದೇಶ. ಎರಡೂ ರಾಷ್ಟ್ರಗಳ ಸೇನೆಯ ನಡುವೆ 2017ರಲ್ಲಿ ಡೋಕ್ಲಾಂ ವಿಚಾರವಾಗಿ ತೀವ್ರ ಬಿಕ್ಕಟ್ಟು ಏರ್ಪಟ್ಟಿತ್ತು. ಚೀನಿ ಸೇನೆ ಆ ಭಾಗದಲ್ಲಿ ರಸ್ತೆ ನಿರ್ಮಿಸುತ್ತಿರುವುದನ್ನು ಭಾರತ ತಡೆದಿತ್ತು. 73 ದಿನಗಳ ಕಾಲ ಮಿಲಿಟರಿ ಬಿಕ್ಕಟ್ಟಿಗೆ ಕಾರಣವಾಗಿದ್ದ ಡೋಕ್ಲಾಂ ವಿಚಾರದಲ್ಲಿ ಭಾರತ ತೋರಿದ ದಿಟ್ಟ ಪ್ರತಿರೋಧದಿಂದ ಚೀನ ತತ್ತರಿಸಿದ್ದು ಸುಳ್ಳಲ್ಲ. ಕೊನೆಗೆ ಅಂತಾರಾಷ್ಟ್ರೀಯ ಒತ್ತಡವೂ ಹೆಚ್ಚಾಗಿ, ಚೀನದ ಸೇನೆಯು ಅಲ್ಲಿಂದ ಹಿಂದೆ ಸರಿದಿತ್ತು.

ಡೋಕ್ಲಾಂ ಎನ್ನುವುದು ಪ್ರಸ್ಥಭೂಮಿಯಾಗಿದ್ದು, ಅದರ ಉತ್ತರ ಭಾಗಕ್ಕೆ ಚೀನ ಆಕ್ರಮಿತ ಟಿಬೆಟ್‌ ಇದ್ದರೆ, ಪೂರ್ವಕ್ಕೆ ಭೂತಾನ್‌ನ ಹಾ ಕಣಿವೆ ಹಾಗೂ ಪಶ್ಚಿಮಕ್ಕೆ ಭಾರತದ ಸಿಕ್ಕಿಂ ಬರುತ್ತದೆ.

ಡೋಕ್ಲಾಂ ಪ್ರಸ್ಥಭೂಮಿಯು ನಮ್ಮ ಈಶಾನ್ಯ ರಾಜ್ಯಗಳನ್ನು ಭಾರತದ ಇತರೆ ಭಾಗಗಳೊಂದಿಗೆ ಬೆಸೆದಿರುವ ಚಿಕನ್‌ ನೆಕ್‌ ಕಾರಿಡಾರ್‌ ಸನಿಹದವರೆಗೆ ಚಾಚಿಕೊಂಡಿದೆ. ಒಂದು ವೇಳೆ ಚೀನಿ ಸೇನೆ ಏನಾದರೂ ಡೋಕ್ಲಾಂ ಮೇಲೆ ನಿಯಂತ್ರಣ ಸಾಧಿಸಿಬಿಟ್ಟರೆ, ಈಶಾನ್ಯ ರಾಜ್ಯಗಳು ಹಾಗೂ ಭಾರತದ ಉಳಿದ ಭಾಗದ ನಡುವಿನ ಸಂಪರ್ಕವನ್ನು ತುಂಡರಿಸಲು ಅದಕ್ಕೆ ಸಾಧ್ಯವಾಗುತ್ತದೆ (ಯುದ್ಧ ನಡೆದರೆ). ಈ ಕಾರಣಕ್ಕಾಗಿಯೇ, ಚೀನ ಡೋಕ್ಲಾಂ ವಿಚಾರದಲ್ಲಿ ಭೂತಾನ್‌ನ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದೆ.

ಭೂತಾನ್‌ ಯುವಕರ ಮೇಲೆ ಚೀನ ಪ್ರಭಾವ!
ಚೀನ ಕೆಲ ವರ್ಷಗಳಿಂದ ಭೂತಾನ್‌ನ ಮೇಲೆ ಪ್ರಭಾವ ಬೀರಲು, ಭೂತಾನಿಯರನ್ನು ಭಾರತದಿಂದ ವಿಮುಖವಾಗಿಸಲು, ತನ್ಮೂಲಕ ಜನಾಭಿಪ್ರಾಯವನ್ನು ಚೀನ ಪರ ವಾಲಿಸಲು ಪ್ರಯತ್ನಿಸಲಾರಂಭಿಸಿದೆ. ಇದರ ಭಾಗವಾಗಿ ಚೀನ “ಭೂತಾನ್‌ನ ಯುವಕರಿಗೆ ಚೀನದ ಪ್ರತಿಷ್ಠಿತ ವಿವಿಗಳಲ್ಲಿ ಶಿಕ್ಷಣ ಪಡೆಯಲು ಭಾರೀ ಪ್ರಮಾಣದಲ್ಲಿ ಸ್ಕಾಲರ್‌ಶಿಪ್‌ಗಳನ್ನು ನೀಡಲಾರಂಭಿಸಿದೆ.

ಇದಷ್ಟೇ ಅಲ್ಲದೇ, ಡೋಕ್ಲಾಂ ಎನ್ನುವುದು ಚಿಕ್ಕ ಭಾಗವಾಗಿದ್ದು, ಅದರಿಂದ ಭೂತಾನ್‌ಗೇನೂ ಲಾಭವಿಲ್ಲ ಎಂಬ ಭಾವನೆಯನ್ನು ಭೂತಾನಿಯರ ಮನಸ್ಸಿನಲ್ಲಿ ಬಿತ್ತಲು ಪ್ರಯತ್ನಿಸುತ್ತಿದೆ. ಇನ್ನು ಭೂತಾನ್‌ನ ವ್ಯವಹಾರಗಳಲ್ಲಿ ಪಾತ್ರವಹಿಸಲು ಭಾರತಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಭೂತಾನ್‌ ಜನರಿಗೆ ಹೇಳುತ್ತಿದೆ ಚೀನ” ಎನ್ನುತ್ತಾರೆ ಪತ್ರಕರ್ತ ಜೈದೀಪ್‌ ಮಜುಂದಾರ್‌.

ಈಗ ಭೂತಾನ್‌ನ ಒಂದು ವರ್ಗವು ಚೀನದ ವ್ಯಾಮೋಹಕ್ಕೆ ಒಳಗಾಗುತ್ತಿದ್ದು, ಡ್ರ್ಯಾಗನ್‌ ರಾಷ್ಟ್ರದ ಜತೆ ತಮ್ಮ ದೇಶ ಒಡನಾಟ ಹೆಚ್ಚಿಸಿಕೊಳ್ಳಬೇಕು ಎಂದು ಆಶಿಸಲಾರಂಭಿಸಿದ್ದಾರೆ. ಆದರೆ, ಭೂತಾನ್‌ ಪ್ರಭುತ್ವಕ್ಕೆ ಚೀನದ ದುರ್ಗುಣದ ಅರಿವಿದೆ. ಬಹುತೇಕ ಭೂತಾನಿಯರು ಬೌದ್ಧ ಧರ್ಮೀಯರಾಗಿದ್ದು, ಹೇಗೆ ಚೀನ ಟಿಬೆಟ್‌ ಅನ್ನು ವಶಪಡಿಸಿಕೊಂಡು ಅಲ್ಲಿನ ಧಾರ್ಮಿಕ, ಸಂಸ್ಕೃತಿ ಬೇರುಗಳನ್ನೇ ತುಂಡರಿಸುತ್ತಿದೆ ಎನ್ನುವುದನ್ನು ತಿಳಿದಿದ್ದಾರೆ.

ಅಲ್ಲದೇ, ಭೌದ್ಧ ಧರ್ಮಗುರು,ಪರಮ ಪೂಜ್ಯ ದಲಾೖ ಲಾಮಾ ಅವರನ್ನು ಬಹಳ ಗೌರವಿಸುವ ಭೂತಾನ್‌ಗೆ, ಚೀನ ದಲಾೖ ಲಾಮಾರ ವಿರುದ್ಧ ಹೇಗೆ ಕುತಂತ್ರ ನಡೆಸಿತು-ನಡೆಸುತ್ತಿದೆ ಎನ್ನುವುದು ತಿಳಿದಿದೆ.  ಕೆಲ ವರ್ಷಗಳಿಂದ ನೇಪಾಳದಲ್ಲಿ ಚೀನ ತನ್ನ ಬೇರುಗಳನ್ನು ಹರಡಿ, ನೇಪಾಲವನ್ನು ಆಕ್ರಮಿಸಿಕೊಳ್ಳಲು ಹೊಂಚುಹಾಕುತ್ತಿರುವುದೂ ಸಹ ಭೂತಾನ್‌ಗೆ ತಿಳಿಯದ ವಿಷಯವೇನೂ ಅಲ್ಲ. ಚೀನದ ಈ ತಂತ್ರಗಳ ಹೊರತಾಗಿಯೂ ಭೂತಾನ್‌ ಹಾಗೂ ಭಾರತದ ನಡುವಿನ ನಂಟು ಬಲವಾಗಿಯೇ ಇದೆ ಎನ್ನುವುದನ್ನು ಮರೆಯುವಂತಿಲ್ಲ.

ಭೂತಾನ್‌ಗೆ ಭಾರತವೇ ಬೆನ್ನೆಲುಬು
7.7 ಲಕ್ಷ ಜನಸಂಖ್ಯೆಯ ಈ ಪುಟ್ಟ ರಾಷ್ಟ್ರ ಭೂತಾನ್‌ಗೆ ಭಾರತವೇ ಅತಿದೊಡ್ಡ ವ್ಯಾಪಾರ ರಾಷ್ಟ್ರವಾಗಿದೆ. ಭೂತಾನ್‌ನ ಒಟ್ಟು 79 ಪ್ರತಿಶತ ಆಮದು ಭಾರತದಿಂದಲೇ ಆಗುತ್ತದೆ. ಇದಕ್ಕಿಂತಲೂ ಮುಖ್ಯವಾಗಿ ಭಾರತ ಹಾಗೂ ಭೂತಾನ್‌ ಆಧ್ಯಾತ್ಮಿಕವಾಗಿ, ಐತಿಹಾಸಿಕವಾಗಿ ಅನ್ಯೋನ್ಯ ಸಂಬಂಧವನ್ನು ಹಂಚಿಕೊಂಡಿವೆ.

ಭಾರತದ ಸಹಯೋಗದಿಂದಾಗಿ ಭೂತಾನ್‌ನಲ್ಲಿ ಬೃಹತ್‌ ಜಲವಿದ್ಯುತ್‌ ಯೋಜನೆ ಅನುಷ್ಠಾನಕ್ಕೆ ಬಂದಿದ್ದು, ಇದುವರೆಗೂ ನಮ್ಮ ದೇಶ ಭೂತಾನ್‌ನಲ್ಲಿ ಒಟ್ಟು ಮೂರು ಜಲವಿದ್ಯುತ್‌ ಯೋಜನೆಗಳನ್ನು ನಿರ್ಮಿಸಿದೆ. ಇನ್ನು ಕೆಲವು ವರ್ಷಗಳಲ್ಲಿ ಭಾರತದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಭೂತಾನ್‌ ವಿದ್ಯಾರ್ಥಿಗಳ ಸಂಖ್ಯೆಯೂ ಅಧಿಕವಾಗಿದೆ.

ಭದ್ರತೆಯ ವಿಚಾರದಲ್ಲೂ ಎರಡೂ ದೇಶಗಳ ನಡುವಿನ ಬಾಂಧವ್ಯ ಉತ್ತಮವಾಗಿದ್ದು, ಭಾರತ ಭೂತಾನ್‌ಗೆ ರಕ್ಷಾ ಕವಚವಾಗಿಯೇ ನಿಂತಿದೆ. ಇನ್ನೊಂದೆಡೆ ಚೀನಕ್ಕೆ ಭೂತಾನ್‌ನೊಂದಿಗೆ ಒಂದಿನಿತೂ ಭಾವನಾತ್ಮಕ ನಂಟು ಇಲ್ಲ. ಅದಕ್ಕಿರುವುದು ಸ್ವಹಿತಾಸಕ್ತಿಯಷ್ಟೇ. ಹೀಗಾಗಿ ಸದ್ಯಕ್ಕೆ ಭೂತಾನ್‌ ಚೀನದ “ಪ್ಯಾಕೇಜ್‌’ ಅನ್ನು ನಿರಾಕರಿಸುವುದರಲ್ಲಿ ಸಂಶಯವಿಲ್ಲ.  ಆದರೆ, ಚೀನ ಈ ವಿಚಾರದಲ್ಲಿ ಸುಮ್ಮನಾಗುವುದಿಲ್ಲ.

ಡೋಕ್ಲಾಂ ಅನ್ನು ಚೀನ ಭಾರತದ ವಿರುದ್ಧದ ಅತಿಮುಖ್ಯ ವ್ಯೂಹಾತ್ಮಕ ಪ್ರದೇಶವೆಂದು ಪರಿಗಣಿಸುತ್ತದೆ. ಇದರ ಭಾಗವಾಗಿ ಭೂತಾನ್‌ನ ಮೇಲೆ ತನ್ನ ಪ್ರಭಾವವನ್ನು ಅಥವಾ ಒತ್ತಡವನ್ನು ಅದು ಹೆಚ್ಚಿಸುವುದರಲ್ಲಿ ಸಂದೇಹವಿಲ್ಲ. ಈ ಸಮಯದಲ್ಲಿ ಭೂತಾನ್‌ಗೆ ಭಾರತದ ಅಗತ್ಯ ಹಿಂದೆಂದಿಗಿಂತಲೂ ಅಧಿಕವಿದೆ.

Advertisement

Udayavani is now on Telegram. Click here to join our channel and stay updated with the latest news.

Next