ಬೀಜಿಂಗ್: ಚೀನಾದಲ್ಲಿ ಭಾರೀ ಮರಣಮೃದಂಗ ಬಾರಿಸಿದ್ದ ಕೋವಿಡ್ 19 ಈಗ ಕಡಿಮೆಯಾಗಿದೆ ಎನ್ನಲಾಗುತ್ತಿದೆ. ಇದಕ್ಕೆ ಪುಷ್ಠಿ ಎನ್ನುವಂತೆ ಹಲವು ಅಂತಾರಾಷ್ಟ್ರೀಯ ಮಾಧ್ಯಮಗಳೂ ಇದನ್ನು ವರದಿ ಮಾಡಿವೆ. ಕೋವಿಡ್ 19 ಕೇಂದ್ರವಾಗಿದ್ದ ವುಹಾಬ್ ಪ್ರಾಂತ್ಯ ಜತೆಗೆ ಕೆಲವು ಪ್ರದೇಶಗಳು ಮಾತ್ರ ಸದ್ಯದ ಮಟ್ಟಿಗೆ ನಿರ್ಬಂಧದಲ್ಲಿದೆ. ಬಿಕೋ ಎನ್ನುತ್ತಿದ್ದ ಚೀನಾದ ರಸ್ತೆಗಳಲ್ಲಿ ಜನ ಸಂಚಾರಗಳು ಮತ್ತೆ ಯಥಾಸ್ಥಿತಿಗೆ ಬರುತ್ತಿವೆ. ವಾಹನಗಳು ಬಿಡುಗಡೆ ಮಾಡುವ ಶಬ್ದಗಳು ಇಲ್ಲದೇ ಹಲವು ದಿನಗಳು ಕಳೆದಿದ್ದು ಮತ್ತೆ ವಾಹನಗಳ ಚಕ್ರಗಳು ರಸ್ತೆಯಲ್ಲಿ ಹಚ್ಚೊತ್ತುತ್ತಿವೆ.
ಕಾರ್ಖಾನೆ, ವಾಹನ ಶಬ್ದಗಳಿಲ್ಲದೇ ಹಕ್ಕಿಗಳ ಚಿಲಿಪಿಲಿಗಳಿಗೆ ಕೆಲವು ದಿನಗಳಾದರೂ ಬೀಜಿಂಗ್‌ನಲ್ಲಿ ಕಾಣಸಿಗುತ್ತಿತ್ತು. ಆದರೆ ಅವುಗಳು ಈಗ ಯಥಾಸ್ಥಿತಿಗೆ ಬಂದಿವೆ. ಚೀನಾ ಪರೋಕ್ಷವಾಗಿ ಕೋವಿಡ್ 19 ಜತೆಗಿನ ಯುದ್ಧದಲ್ಲಿ ಜಯಭೇರಿ ಭಾರಿಸಿದೆ ಎಂದು ಘೋಷಿಸಿಕೊಂಡಿದೆ.
ಕೋವಿಡ್ 19 ಅಬ್ಬರಕ್ಕೆ ತತ್ತರಿಸಿ ಬಾಗಿಲು ಮುಚ್ಚಿದ್ದ ಅಂಗಡಿಗಳು ಒಂದೊಂದಾಗಿ ತೆರೆಯುತ್ತಿವೆ. ಅಂಗಡಿಗಳ ಮುಂದೆ ಸಾಲುಗಳು ಹೆಚ್ಚಾಗುತ್ತಿದ್ದು, ಅಗತ್ಯ ವಸ್ತುಗಳಿಗೆ ಜನ ಮುಗಿಬೀಳುತ್ತಿದ್ದಾರೆ. ಶಾಪಿಂಗ್ ಮಾರ್ಕೆಟ್‌ಗಳ ಪಾರ್ಕಿಂಗ್ ಏರಿಯಾಗಳು ತುಂಬುತ್ತಿವೆ. ಅಂಗಡಿಗಳ ಎದುರು, ಪಾರ್ಕಿಂಕ್ ಜಾಗಗಳು, ಅಪಾರ್ಟ್‌ಮೆಂಟ್, ಮನೆಗಳ ಮುಂಭಾಗ ವಾಚ್‌ಮನ್‌ಗಳು ತಮ್ಮ ಕರ್ತವ್ಯಕ್ಕೆ ಮರಳುತ್ತಿದ್ದಾರೆ. ರಾತ್ರಿಹೊತ್ತು ವಿದ್ಯುತ್ ದೀಪಗಳ ಬೆಳಕನ್ನು ಮಾತ್ರ ಕಾಣುತ್ತಿದ್ದ ರಸ್ತೆಗಳಲ್ಲೀಗ ವಾಹನ ಬೆಳಕು ಹರಿಯುತ್ತಿವೆ. ಇವುಗಳನ್ನು ಚೀನ ಬಿಡುಗಡೆ ಮಾಡಿದ ಸ್ಯಾಟಲೇಟ್ ಇಮೇಜ್‌ನಲ್ಲಿ ತೋರಿಸಲಾಗಿದೆ.
ಬೀಜಿಂಗ್‌ನ ಬಹುತೇಕ ರೆಸ್ಟೋರೆಂಟ್‌ಗಳು ಮತ್ತೆ ತೆರೆಯುತ್ತಿವೆ. ಕೋವಿಡ್ 19 ತೀವ್ರತೆ ಕಡಿಮೆಯಾಗುತ್ತಿದೆ ಎಂದು ಅಲ್ಲಿನ ಸರಕಾರ ಕೆಲವು ಪ್ರದೇಶಗಳಿಗೆ ಸೂಚಿಸಿದೆ. ಸಹಜವಾಗಿ ಇದರಿಂದ ಅಲ್ಲಿನ ಅಂಗಡಿ ಮುಂಗಟ್ಟುಗಳು ತೆರೆಯಲು ಕಾರಣವಾಗಿದೆ. ಕೆಲವೆಡೆ ಮುಂದಿನ 2 ವಾರಗಳಲ್ಲಿ ಶಾಲಾ ಕಾಲೇಜುಗಳು ತೆರೆಯಲಿದ್ದು ಅದಕ್ಕೆ ಸಂಬಂಧಪಟ್ಟ ತಯಾರಿಯನ್ನು ಮಾಡಲಾಗಿದೆ. ಶಾಂಘೈನಲ್ಲಿ ಸಿನೆಮಾ ಥಿಯೇಟರ್‌ಗಳು ತೆರೆಯಲಿದ್ದು, ಆದರೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.