ಬೀಜಿಂಗ್:ಪೂರ್ವ ಲಡಾಖ್ ನಲ್ಲಿ ಭಾರತ ಮತ್ತು ಚೀನಾ ಸಂಘರ್ಷ ಮುಂದುವರಿದ ಪರಿಣಾಮ ಓರ್ವ ಕರ್ನಲ್ ಸೇರಿದಂತೆ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಈ ವೇಳೆ ಭಾರತೀಯ ಯೋಧರ ಪ್ರತಿದಾಳಿಗೆ ಚೀನಾದ 40ಕ್ಕೂ ಅಧಿಕ ಸೈನಿಕರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಆದರೆ ಭಾರತ, ಚೀನಾ ಘರ್ಷಣೆ ಬಗ್ಗೆ ಚೀನಾ ಮಾಧ್ಯಮ ಸತ್ಯವನ್ನು ಮುಚ್ಚಿಟ್ಟಿದೆ ಎಂಬುದು ತಿಳಿದು ಬಂದಿದೆ.
ಚೀನಾ ಸ್ವಾಯತ್ತೆ ಮಾಧ್ಯಮದಲ್ಲಿ ಚೀನಾ ಸೈನಿಕರ ಸಾವಿನ ಬಗ್ಗೆ ಯಾವ ಅಂಕಿ ಅಂಶವನ್ನು ಉಲ್ಲೇಖಿಸಿಲ್ಲ. ಅಲ್ಲದೇ ಭಾರತದ ವಿರುದ್ಧ ಪ್ರತೀಕಾರ ತೆಗೆದುಕೊಳ್ಳಬೇಕೆಂದು ಸಾಮಾಜಿಕ ಜಾಲತಾಣ ಬಳಕೆದಾರರು ಆಗ್ರಹಿಸಿರುವುದಾಗಿ ವರದಿ ತಿಳಿಸಿದೆ.
ಸೋಮವಾರ ರಾತ್ರಿ ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್ ಬಳಿ ಚೀನಾ ಮತ್ತು ಭಾರತೀಯ ಸೈನಿಕರ ಮುಖಾಮುಖಿ, ಹಿಂಸಾಚಾರದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿರುವುದಾಗಿ ಇಂಡಿಯನ್ ಆರ್ಮಿ ಮಂಗಳವಾರ ತಿಳಿಸಿತ್ತು.
ಚೀನಾ ರಕ್ಷಣಾ ಸಚಿವಾಲಯ ಕೂಡಾ ಘರ್ಷಣೆಯಲ್ಲಿ ಚೀನಾ ಸೈನಿಕರು ಸಾವನ್ನಪ್ಪಿರುವುದನ್ನು ಖಚಿತಪಡಿಸಿದ್ದರು. ಆದರೆ ಎಷ್ಟು ಸೈನಿಕರು ಎಂಬ ಅಂಕಿ ಅಂಶ ನೀಡಿಲ್ಲವಾಗಿತ್ತು. ಜಗತ್ತಿನಲ್ಲಿಯೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಉಭಯ ದೇಶಗಳ ನಡುವೆ ಪದೇ, ಪದೇ ಸಂಘರ್ಷ ನಡೆಯುತ್ತಲೇ ಇದೆ.
ಚೀನಾದ ರಾಷ್ಟ್ರೀಯ ಟ್ಯಾಬ್ಲಾಯ್ಡ್ ಗ್ಲೋಬಲ್ ಟೈಮ್ಸ್ ವರದಿ ಪ್ರಕಾರ, ಹಲವಾರು ಮಂದಿ ಭಾರತೀಯ ಸೈನಿಕರು ಸಾವನ್ನಪ್ಪಿದ್ದಾರೆ. ಆದರೆ ಸಾವಿನ ಅಂಕಿ ಅಂಶದ ಬಗ್ಗೆ ಚೀನಾ ಯಾವುದೇ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ ಎಂದು ತಿಳಿಸಿದೆ.