ಹೊಸದಿಲ್ಲಿ : ಚೀನ ತನ್ನ ಜನಪ್ರಿಯ ಮೊಬೈಲ್ ಫೋನ್ ಆ್ಯಪ್ ಗಳು ಮತ್ತು ಉಪಕರಣಗಳ ಮೂಲಕ ಭಾರತೀಯ ಭದ್ರತಾ ಘಟಕಗಳು, ಸೇನಾ ತಾಣಗಳ ಬಗ್ಗೆ ಬಹು ಮುಖ್ಯ ಮಾಹಿತಿಗಳನ್ನು ಸಂಗ್ರಹಿಸುತ್ತಿರುವ ಸಾಧ್ಯತೆಗಳು ಇರುವುದರಿಂದ ಅಂತಹ ಆ್ಯಪ್ ಗಳನ್ನು ಅಂತಾರಾಷ್ಟ್ರೀಯ ಗಡಿಯಲ್ಲಿ ಕರ್ತವ್ಯ ನಿಯುಕ್ತರಾಗಿರುವ ಭಾರತೀಯ ಸೈನಿಕರು ಈ ಕೂಡಲೇ ತಮ್ಮ ಮೊಬೈಲ್ ಫೋನ್‌ಗಳಿಂದ ಡಿಲೀಟ್ ಮಾಡಬೇಕು ಎಂಬ ಗುಪ್ತಚರ ಎಚ್ಚರಿಕೆಯನ್ನು ನೀಡಲಾಗಿದೆ.
ವರದಿಗಳ ಪ್ರಕಾರ ಈ ಸಲಹೆಯನ್ನು ಗುಪ್ತಚರ ದಳದ ಡಿಐಜಿ ನೀಡಿದ್ದಾರೆ.
ಗಡಿ ನಿಯಂತ್ರಣ ರೇಖೆಯಲ್ಲಿ ಕರ್ತವ್ಯ ನಿರತರಾಗಿರುವ ಭಾರತೀಯ ಯೋಧರು ತಮ್ಮ ಮೊಬೈಲ್ ಫೋನ್‌ಗಳಲ್ಲಿನ ಚೀನದ ಸುಮಾರು 42 ಜನಪ್ರಿಯ ಆ್ಯಪ್ ಗಳನ್ನು ಕೂಡಲೇ ಡಿಲೀಟ್ ಮಾಡಬೇಕು ಇಲ್ಲವೇ ತಮ್ಮ ಫೋನ್‌ಗಳನ್ನು ಆಮೂಲಾಗ್ರವಾಗಿ ರೀಫಾರ್ಮಾಟ್ ಮಾಡಿಕೊಳ್ಳಬೇಕು ಎಂದು ಸೈನಿಕರಿಗೆ ತಿಳಿಸಲಾಗಿದೆ. ಆ ಮೂಲಕ ಗಡಿಯಾಚೆಯ ಆನ್‌ಲೈನ್ ಬೇಹು ಯತ್ನದ ವಿರುದ್ಧ ಜಾಗ್ರತೆ ವಹಿಸಬೇಕು ಎಂದು ತಿಳಿಸಲಾಗಿದೆ.
ಚೀನದ ಬೇಹು ಉದ್ದೇಶದ ಸುಮಾರು 42 ಜನಪ್ರಿಯ ಆ್ಯಪ್ ಗಳಲ್ಲಿ ವಿ-ಚ್ಯಾಟ್, ಟ್ರೂ ಕಾಲರ್, ವೈಬೋ, ಯುಸಿ ಬ್ರೌಸರ್ ಮತ್ತು ಯುಸಿ ನ್ಯೂಸ್ ಸೇರಿವೆ. ಈ ಆ್ಯಪ್ ಗಳು ಭಾರತದ ಭದ್ರತೆಗೆ ಅತ್ಯಂತ ಅಪಾಯಕಾರಿಯಾಗಿವೆ ಎಂದು ಗುಪ್ತಚರ ದಳ ಎಚ್ಚರಿಕೆ ನೀಡಿದೆ.
ಈ ಅಪಾಯಕಾರಿ ಆ್ಯಪ್ ಗಳಿರುವ ಮೊಬೈಲ್ ಫೋನ್‌ಗಳು ಅತ್ಯಂತ ಸೂಕ್ಷ್ಮ ಖಾಸಗಿ ಡಾಟಾಗಳನ್ನು ಚೀನದ ಅಧಿಕಾರಿಗಳಿಗೆ ರಹಸ್ಯವಾಗಿ ರವಾನಿಸುತ್ತವೆ; ಆದುದರಿಂದ ಇವುಗಳು ದೇಶದ ಭದ್ರತೆಗೆ ವಿನಾಶಕಾರಿಯಾಗಿವೆ ಎಂದು ಎಚ್ಚರಿಕೆ ರೂಪದ ಸಲಹೆಯಲ್ಲಿ ತಿಳಿಸಲಾಗಿದೆ.
ಚೀನ ನಿರ್ಮಿತ ಮೊಬೈಲ್ ಆ್ಯಪ್ ಗಳನ್ನು ಬಳಸುವುದೇ ದೇಶದ ಭದ್ರತೆಗೆ ಅಪಾಯಕಾರಿಯಾಗಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ಲಡ್ಡಾಕ್‌ನಿಂದ ಅರುಣಾಚಲ ಪ್ರದೇಶದ ವರೆಗೆ ಭಾರತವು ಚೀನದೊಂದಿಗೆ ಹೊಂದಿರುವ 4,057 ಕಿ.ಮೀ. ನೈಜ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತದ ಇಂಡೋ ಟಿಬೆಟಾನ್ ಬಾರ್ಡರ್ ಪೊಲೀಸ್ ಮುಂತಾದ ಕೇಂದ್ರೀಯ ಸಶಸ್ತ್ರ ಪಡೆಗಳನ್ನು ಕಾವಲಿಗೆ ನಿಯೋಜಿಸಲಾಗಿದೆ.