ಬೀಜಿಂಗ್/ಉತ್ತರಕೊರಿಯಾ: ಉತ್ತರಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆರೋಗ್ಯ ತೀರಾ ಹದಗೆಟ್ಟಿರುವುದಾಗಿ ಈಗಾಗಲೇ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಏತನ್ಮಧ್ಯೆ ಚೀನಾ ದಿಢೀರನೆ ಉತ್ತರ ಕೊರಿಯಾಕ್ಕೆ ತಜ್ಞ ವೈದ್ಯರ ತಂಡವನ್ನು ಕಳುಹಿಸಿಕೊಟ್ಟಿದ್ದು, ಕಿಮ್ ಜಾಂಗ್ ಸಾವನ್ನಪ್ಪಿರುವುದಾಗಿ ಬಹುತೇಕ ಅಂತರ್ಜಾಲ ತಾಣಗಳು ವರದಿ ಮಾಡುತ್ತಿರುವುದಾಗಿ ಇಂಟರ್ ನ್ಯಾಷನಲ್ ಬ್ಯುಸಿನೆಸ್ ಟೈಮ್ಸ್ ವರದಿ ಮಾಡಿದೆ.
ಉತ್ತರ ಕೊರಿಯಾದ ಪರಮೋಚ್ಛ ನಾಯಕ ಕಿಮ್ ಜಾಂಗ್ ಉನ್ ಸಾವನ್ನಪ್ಪಿರುವುದಾಗಿ ಹಾಂಗ್ ಕಾಂಗ್ ಸ್ಯಾಟಲೈಟ್ ಟಿವಿ ಸುದ್ದಿಯನ್ನು ಬಿತ್ತರಿಸಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿಯೂ ಸುದ್ದಿ ಹರಿದಾಡುತ್ತಿರುವುದಾಗಿ ವರದಿ ಹೇಳಿದೆ. ಆದರೆ ಈ ಬಗ್ಗೆ ಉತ್ತರ ಕೊರಿಯಾ ಯಾವುದೇ ಅಧಿಕೃತ ಸ್ಪಷ್ಟನೆ, ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿ ಹೇಳಿದೆ.
ಇದೊಂದು ಸುಳ್ಳು ಸುದ್ದಿ ಎಂದು ಹೇಳಲು ಸಾಧ್ಯವಿಲ್ಲ ಎಂಬುದಾಗಿ ಕೊರಿಯಾ ಪ್ರದೇಶದ ತಜ್ಞರು ಹಾಗೂ ಬೋರ್ಡ್ ಆಫ್ ದ ವರ್ಲ್ಡ್ ಆ್ಯಂಡ್ ನಾರ್ಥ್ ಈಸ್ಟ್ ಪೀಸ್ ಫಾರಂನ ಅಧ್ಯಕ್ಷರು ಈ ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಆರೋಗ್ಯ ಸ್ಥಿತಿ ಹಾಗೂ ಸಾವಿನ ಸುದ್ದಿಯ ಕುರಿತು ಅಮೆರಿಕ ನಿಕಟವಾಗಿ ಪರಿಶೀಲನೆ ನಡೆಸುತ್ತಿದ್ದು, ಕಿಮ್ ಜಾಂಗ್ ನಿಧನದ ಬಗ್ಗೆ ಅಧಿಕಾರಿಗಳು ಅಧಿಕೃತವಾಗಿ ಖಚಿತಪಡಿಸಿಲ್ಲ ಎಂದು ಅಮೆರಿಕದ ಅಧಿಕಾರಿಗಳು ವಿವರಿಸಿದ್ದಾರೆ.
ಕಿಮ್ ಜಾಂಗ್ ಕುರಿತು ನಾವು ಪ್ರತಿಕ್ರಿಯೆ ನೀಡುವ ಅಧಿಕಾರ ಹೊಂದಿಲ್ಲ ಎಂದು ಪೆಂಟಾಗಾನ್ ಹಿರಿಯ ಅಧಿಕಾರಿಯೊಬ್ಬರು ನ್ಯೂಸ್ ವೀಕ್ ಗೆ ತಿಳಿಸಿದ್ದಾರೆ. ಉತ್ತರ ಕೊರಿಯಾದ ಮುಂದಿನ ಉತ್ತರಾಧಿಕಾರಿ ಯಾರು ಎಂಬ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ ಎಂದು ಹೇಳಿದರು.