ಬೀಜಿಂಗ್: ಜಗತ್ತಿನ ಅತ್ಯಾಧುನಿಕ ತಂತ್ರಜ್ಞಾನವಾದ 5ಜಿ ಚೀನದ ಮೂಲದ ಏಷ್ಯಾಕ್ಕೆ ಪಾದಾರ್ಪಣೆ ಮಾಡಿದೆ. ಚೀನದ 3 ಪ್ರಮುಖ ಟೆಲಿಕಾಂ ಸಂಸ್ಥೆಗಳು ಈ ತಂತ್ರಜ್ಞಾನವನ್ನು ಪರಿಚಯಿಸಿದ್ದು, ಗುರುವಾರ ಬಿಡುಗಡೆಗೊಂಡಿದೆ. ಅಮೆರಿಕ ಜತೆಗಿನ ವ್ಯಾಪಾರ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಶೀತಲ ಸಮರವನ್ನು ಮುಂದುವರಿಸಿರುವ ಚೀನ ಅದಕ್ಕೆ ಸಡ್ಡು ಹೊಡೆಯಲು ಭರ್ಜರಿಯಾಗಿಯೇ 5ಜಿ ಅನ್ನು ಜಾರಿಗೆ ತಂದಿದೆ.
ಸರಕಾರದ ಚೀನ ಮೊಬೈಲ್ಸ್, ಚೀನ ಯುನಿಕಾಂ, ಚೀನ ಟೆಲಿಕಾಂ ಎಂಬ 3 ಸಂಸ್ಥೆಗಳು 5ಜಿ ಸೇವೆಯನ್ನು ತೆರೆದಿವೆ. ಇದಕ್ಕೆ ಪೂರಕವಾಗಿ 5ಜಿ ಯೋಜನೆಗಳನ್ನೂ ಜಾರಿಗೊಳಿಸಲಾಗಿದ್ದು ಒಂದು ತಿಂಗಳ ಯೋಜನೆ 1289 ರೂ. ನಿಂದ 6,030 ರೂ. ಗಳ ವರೆಗೆ ಎಂದು ನಿಗದಿಪಡಿಸಲಾಗಿದೆ. 4ಜಿಗೆ ಹೋಲಿಸಿದರೆ 5ಜಿ 100 ಪಟ್ಟು ವೇಗವನ್ನು ಹೊಂದಿದೆ.
ಚೀನದ 50 ನಗರಗಳಲ್ಲಿ ಈಗ 4ಜಿ ಸೇವೆ ಲಭ್ಯವಿದ್ದು, ಪ್ರಮುಖ ನಗರಗಳಾದ ಬೀಜಿಂಗ್, ಶಾಂಘೈ ನಗರಗಳು ಸೇರಿವೆ. 5ಜಿ ಬಿಡುಗಡೆಯಾಗುವ ಮೊದಲೇ 1 ಕೋಟಿ ಬಳಕೆದಾರರು 5ಜಿ ತಮ್ಮದಾಗಿಸಿಕೊಳ್ಳಲು ಈಗಾಗಲೇ ತುದಿಗಾಲಲ್ಲಿ ನಿಂತಿದ್ದಾರೆ. ಮುಂಬರುವ ದಿನಗಳಲ್ಲಿ ಸುಮಾರು 17 ಕೋಟಿ 5ಜಿ ಗ್ರಾಹಕರನ್ನು ಹೊಂದುವ ಗುರಿಯನ್ನು ಚೀನ ಹೊಂದಿದೆ. 2025ರ ಸುಮಾರಿಗೆ 60 ಕೋಟಿ ಬಳಕೆದಾರರತ್ತ ಚೀನ ಕಣ್ಣಿಟ್ಟಿದೆ.
ಚೀನ ಪ್ರಥಮ
ಗುರುವಾರವಷ್ಟೇ 5ಜಿ ಸೇವೆಗೆ ತೆರೆದುಕೊಂಡ ಚೀನ ಜಗತ್ತಿನ ಅತೀ ದೊಡ್ಡ 5ಜಿ ರಾಷ್ಟ್ರವಾಗಿದೆ. ಸುಮಾರು 1 ಕೋಟಿ 5ಜಿ ಬಳಕೆದಾರರು ಇರುವ ರಾಷ್ಟ್ರ ಇದಾಗಿದೆ. ದಕ್ಷಿಣ ಕೊರಿಯಾ 75 ಸಾವಿರ 5ಜಿ ಬಳಕೆದಾರರನ್ನು ಹೊಂದುವ ಮೂಲಕ ದ್ವಿತೀಯ ಸ್ಥಾನದಲ್ಲಿದೆ. ಅಮೆರಿಕ 10 ಸಾವಿರ 5ಜಿ ಸಂಪರ್ಕ ಹೊಂದಿದ್ದು, 3ನೇ ಸ್ಥಾನದಲ್ಲಿದೆ. ಈಗಾಗಲೇ 5ಜಿ ಬೆಂಬಲಿಸುವ ಸುಮಾರು 18 ಸಂಸ್ಥೆಗಳು ಮೊಬೈಲ್ ತಯಾರಿಕೆಯಲ್ಲಿ ನಿರತವಾಗಿದೆ. ಚೀನದ ಬಹುತೇಕ ಮೊಬೈಲ್ ತಯಾರಕ ಸಂಸ್ಥೆಗಳು 5ಜಿ ಮೊಬೈಲ್ ತಯಾರಿಕೆಯತ್ತ ಮುಖಮಾಡುತ್ತಿವೆ.
ಅಮೆರಿಕ ಮತ್ತು ಚೀನ ಅತೀ ವೇಗವಾಗಿ ತಾಂತ್ರಿಕ ಸೆಕ್ಟರ್ ಅನ್ನು ಅಭಿವೃದ್ಧಿಪಡಿಸಿ ಅದರಲ್ಲಿ ಯಶಸ್ವಿಯಾಗಲು ಪೈಪೋಟಿ ನಡೆಸುತ್ತಿದೆ. ಈ ಒಂದು ಕಾರಣಕ್ಕೆ ಚೀನದ ಹುವಾಯಿ ಸಂಸ್ಥೆಯನ್ನು ಅಮೆರಿಕ ತನ್ನ ನೆಲದಲ್ಲಿ ನಿಷೇಧಿಸಿದೆ. ಮಾತ್ರವಲ್ಲದೇ ಇತರ ಕೆಲವು ಟೆಕ್ನಾಲಜಿ ಸಂಸ್ಥೆಗಳನ್ನು ಕಪ್ಪು ಪಟ್ಟಿಗೆ ಸೇರಿಸಿದೆ.