ಬೀಜಿಂಗ್: ಕೋವಿಡ್-19 ವೈರಸ್ ಉಗಮ ಸ್ಥಳವಾದ ಚೀನಾದಲ್ಲಿ ಸೋಂಕಿನ ಎರಡನೇ ಅಲೆ ಅರಂಭವಾಗಿದೆ. ಏಪ್ರಿಲ್ ನಂತರ ಇದೇ ಮೊದಲ ಬಾರಿಗೆ 24 ಗಂಟೆಗಳ ಅವಧಿಯಲ್ಲಿ 57 ಹೊಸ ಪ್ರಕರಣಗಳು ಕಾಣಿಸಿಕೊಂಡಿದೆ.
ಬೀಜಿಂಗ್ ನಲ್ಲಿರುವ ಮೀನು ಮತ್ತು ತರಕಾರಿ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಹೊಸ ಸೋಂಕು ಪ್ರಕರಣಗಳನ್ನು ಕಂಡುಬಂದಿದ್ದು ಜಿನ್ ಫಾದಿ ಮಾರ್ಕೆಟ್ ಅನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಚೀನಾ ಆರೋಗ್ಯ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ 57 ಹೊಸ ಪ್ರಕರಣಗಳ ಪೈಕಿ 37 ಪ್ರಕರಣಗಳು ಚೀನಾದಲ್ಲೇ ವರದಿಯಾಗಿದ್ದು, 20 ಪ್ರಕರಣಗಳು ವಿದೇಶಗಳಿಂದ ಆಗಮಿಸಿದ್ದ ಚೀನೀಯರದ್ದು ಎಂದು ತಿಳಿದುಬಂದಿದೆ.
ಬೀಜಿಂಗ್ ನಲ್ಲಿರುವ ತರಕಾರಿ ಮಾರುಕಟ್ಟೆ ಮತ್ತು ಮೀನು ಮಾರುಕಟ್ಟೆಯ ಸುತ್ತಮುತ್ತಲಿನಲ್ಲಿರುವ ಶಾಲಾ-ಕಾಲೇಜು, ಸೂಪರ್ ಮಾರ್ಕೆಟ್ ಗಳನ್ನು ಮುಚ್ಚಲಾಗಿದೆ.
57 ಹೊಸ ಪ್ರಕರಣಗಳೊಂದಿಗೆ ಚೀನಾದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 83,132ಕ್ಕೆ ಏರಿಕೆಯಾಗಿದೆ. ಮಾತ್ರವಲ್ಲದೆ ಮೃತರ ಸಂಖ್ಯೆ 4,634ರಷ್ಟಿದೆ. ಕಳೆದ ಡಿಸೆಂಬರ್ ನಲ್ಲಿ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಕೋವಿಡ್-19 ವೈರಸ್ ಮೊದಲ ಬಾರಿಗೆ ಕಂಡುಬಂದಿತ್ತು. ಅದಾದ ನಂತರ ಈ ಸೋಂಕು ಜಗತ್ತಿನಾದ್ಯಂತ ಪಸರಿಸಿ, ಇನ್ನು ತನ್ನ ಕ್ರೌರ್ಯ ಮೆರೆಯುತ್ತಿದೆ. 8 ಮಿಲಿಯನ್ ಸಮೀಪ ಸೋಂಕಿತರ ಸಂಖ್ಯೆ ತಲುಪಿದ್ದು, 4,32,204 ಜನರು ಈ ಮಹಾಮಾರಿಗೆ ಬಲಿಯಾಗಿದ್ದಾರೆ.