Advertisement

ವೈಮಾನಿಕ ದಾಳಿಗೆ ಸಜ್ಜಾಗಿತ್ತೇ ಚೀನ?

09:10 AM Aug 04, 2020 | mahesh |

ಲಡಾಖ್‌/ ನವದೆಹಲಿ: ಲಡಾಖ್‌ನಲ್ಲಿ ಇತ್ತೀಚೆಗೆ ಭಾರತ ಹಾಗೂ ಚೀನ ಸೈನಿಕರು ಪರಸ್ಪರ ಮುಖಾಮುಖಿಯಾಗುವುದಕ್ಕೆ ಸುಮಾರು ತಿಂಗಳುಗಳ ಮುಂಚೆಯೇ ಚೀನ ಸರಕಾರ ತನ್ನಲ್ಲಿನ ಕಶ್ಗರ್‌ ವಾಯು ನೆಲೆಯನ್ನು ಆಧುನೀಕರಣಗೊಳಿಸಿರುವ ವಿಚಾರ ಬೆಳಕಿಗೆ ಬಂದಿದೆ. ಲಡಾಖ್‌ನಲ್ಲಿನ ಮುಖಾಮುಖಿಗೂ ಮುನ್ನವೇ ಗಡಿ ಪ್ರದೇಶದಲ್ಲಿನ ಈ ವಾಯು ನೆಲೆಯನ್ನು ಆಧುನೀಕ ರಣಗೊಳಿಸಿರುವ ಚೀನದ ಕ್ರಮದ ಹಿಂದಿನ ಉದ್ದೇಶವೇನು ಎಂಬ ಪ್ರಶ್ನೆಗಳು ಭಾರತೀಯ ರಕ್ಷಣಾ ವಲಯದ ತಜ್ಞರಲ್ಲಿ ಹುಟ್ಟುಹಾಕಿವೆ.

Advertisement

ಏನೇನು ಆಧುನೀಕರಣ?: ಜೂನ್‌ ಆರಂಭದಲ್ಲೇ ಲಭ್ಯವಾದ ಉಪಗ್ರಹ ಚಿತ್ರಗಳ ಮೂಲಕ ಇದು ಗೊತ್ತಾಗಿದೆ. ವಾಯು ನೆಲೆಯನ್ನು ಆಧುನೀಕರಣ ಗೊಳಿಸುವುದರ ಜತೆಗೆ, ಅಲ್ಲಿ ದೊಡ್ಡದಾಡ ಭೂಗತ ವೈಮಾನಿಕ ನಿಲುಗಡೆ ವ್ಯವಸ್ಥೆಯನ್ನು ನಿರ್ಮಿಸ ಲಾಗಿದೆ. ಕಳೆದ ವರ್ಷಾಂತ್ಯದಲ್ಲೇ ಅದನ್ನು ಅಲ್ಲಿ ನಿರ್ಮಿಸಿರಬಹುದು ಎಂದು ಊಹಿಸಲಾಗಿದೆ. ಭೂಮಿ ಯಿಂದ 49 ಅಡಿ ಆಳದಲ್ಲಿರುವ ಆ ನಿಲುಗಡೆ ವ್ಯವಸ್ಥೆಯಲ್ಲಿ ಎರಡು ಅಂತಸ್ತುಗಳಿದ್ದು, ಅಲ್ಲಿ ಅತ್ಯಂತ ಶಕ್ತಿಶಾ ಲಿಯಾದ “ಎಚ್‌-6′ ಬಾಂಬರ್‌ ವಿಮಾ ನಗಳನ್ನು ತಂದು ನಿಲ್ಲಿಸಲಾಗಿದೆ. ಅಲ್ಲದೆ, ಈ ಎಲ್ಲಾ ಹೊಸ ವ್ಯವಸ್ಥೆಗಳು ಉಪಗ್ರಹಗಳು ಅಥವಾ ಏರಿಯರ್‌ ಅಬ್ಸರ್ವೇಟರಿಗಳಿಗೆ ತಿಳಿಯದಂತೆ ಮಾಡಲು ಹಾರ್ಡೆಂಡ್‌ ಏರ್‌ಕ್ರಾಫ್ಟ್ ಶೆಲ್ಟರ್ಸ್‌ (ಎಚ್‌ಎಎಸ್‌) ಹೊದಿಕೆಗಳನ್ನು ಅಳವಡಿಸಲಾಗಿದೆ.

ತಾಂತ್ರಿಕವಾಗಿ ಮಹತ್ವದ ನೆಲೆ
ಆ ವಾಯು ನೆಲೆ, ಭಾರತ-ಚೀನ ಗಡಿ ಬಳಿಯ ಕಾರಕೋರಂ ಪಾಸ್‌ನಿಂದ ಕೇವಲ 475 ಕಿ.ಮೀ. ದೂರದಲ್ಲಿದೆ. ಇತ್ತ, ಪಂಗ್ಯೊಂಗ್‌ ಸರೋವರದ ಫಿಂಗರ್‌ 4ನಿಂದ 690 ಕಿ.ಮೀ. ದೂರದಲ್ಲಿದೆ. ಪೂರ್ವ ಲಡಾಖ್‌ನಲ್ಲಿ ಭಾರತದ ವಾಯು ನೆಲೆ ಇರುವ ದೌಲತ್‌ ಬೆಗ್‌ ಓಲ್ಡಿಯಿಂದ 490 ಕಿ.ಮೀ. ದೂರದಲ್ಲಿದೆ. ಅಲ್ಲಿಂದ ನೇರವಾಗಿ ಭಾರತದ ಕಡೆ ದಾಳಿ ನಡೆಸಲು ಅನುಕೂಲವಿದೆ. ಹಾಗಾಗಿಯೇ, ಲಡಾಖ್‌ ಘಟನೆಗಳನ್ನು ನೆಪವಾಗಿಟ್ಟುಕೊಂಡು ಭಾರತದ ಮೇಲೆ ವೈಮಾನಿಕ ದಾಳಿ ನಡೆಸಲು ಚೀನ ಸಿದ್ಧವಾಗಿತ್ತೇ ಎಂಬ ಪ್ರಶ್ನೆಗಳೆದ್ದಿವೆ.

ಶಾಶ್ವತ ಪರಿಹಾರಕ್ಕೆ ಯತ್ನ:ಗಡಿ ಸಮೀಪದ ಕಶ್ಗರ್‌ ವಾಯು ನೆಲೆಗೆ ಚೀನ ಆಧುನಿಕ ಸ್ಪರ್ಶ ಪೂರ್ವ ಲಡಾಖ್‌ನ 1,597 ಕಿ.ಮೀ. ಉದ್ದದ ಎಲ್‌ಎಸಿಯಲ್ಲಿ ಗಾಲ್ವಾನ್‌ ಮಾದ ರಿಯ ಘರ್ಷಣೆಗಳನ್ನು ತಪ್ಪಿಸಲು ಭಾರತ- ಚೀನದ ರಾಜತಾಂತ್ರಿಕರು ಶಾಶ್ವತ ಪರಿಹಾರ ಮಾರ್ಗಗಳನ್ನು ಹುಡುಕುತ್ತಿದ್ದಾರೆ.

ಗಸ್ತು ದಾರಿ: ಉಭಯ ರಾಷ್ಟ್ರಗಳು ತಮ್ಮ ಸೇನೆಯ ಉಪಸ್ಥಿತಿ ಸೂಚಿಸುವ ನಕ್ಷೆಗಳನ್ನು ವಿನಿಮಯ ಮಾಡಿಕೊಳ್ಳಬೇಕು. ನಂತರ ಪ್ರೊಟೊಕಾಲ್‌ ಆಧರಿಸಿ, ಗಸ್ತು ಆರಂಭಿಸುವುದೇ ಬಿಕ್ಕಟ್ಟು ವಲಯಗಳಿಗೆ ಶಾಶ್ವತ ಪರಿಹಾರ ಎಂಬ ಅಭಿಪ್ರಾಯ ನವದೆಹಲಿಯ ರಾಜ ತಾಂತ್ರಿಕ ವಲಯದಲ್ಲಿ ಕೇಳಿಬಂದಿದೆ.

Advertisement

ಪಾಕ್‌ನಿಂದ ಫೇಕ್‌ನ್ಯೂಸ್‌ ಟೆರರಿಸಂ
ಲಡಾಖ್‌ ಗಡಿಯಲ್ಲಿನ ಉದ್ವಿಗ್ನತೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲ ತಾ ಣಗಳಲ್ಲಿ ಚೀನದ ಖಾತೆಗಳು ಸುಳ್ಳು ಮಾಹಿತಿಗಳನ್ನು ಹಬ್ಬಿಸುತ್ತಿದ್ದವು. ಆದರೆ, ಈ ಫೇಕ್‌ನ್ಯೂಸ್‌ ಕೃತ್ಯದ ಹಿಂದೆ ಪಾಕಿಸ್ತಾನದ ಕೈವಾಡ ವಿದೆ ಎಂಬ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ. ಗಾಲ್ವಾನ್‌ ಸಂಘರ್ಷದ ವೇಳೆ ಟ್ವಿಟರಿನಲ್ಲಿ ಭಾರತೀಯ ಸೇನೆ ವಿರುದ್ಧ ಚೀನೀ ಹೆಸರಿನ ಖಾತೆಗಳು ಫೇಕ್ ‌ವಿಡಿಯೊ, ಫೋಟೊಗಳನ್ನು ಪೋಸ್ಟ್‌ ಮಾಡುತ್ತಿದ್ದವು. ಆದರೆ, ಈ ಖಾತೆಗಳ ಮೂಲ ಹುಡುಕುತ್ತಾ ಹೋದಾಗ ಅವು ಪಾಕಿಸ್ತಾನದ ಖಾತೆಗಳೆಂಬ ಸಂಗತಿ ಬಯಲಾಗಿದೆ. ಭಾರತೀಯ ಸೇನೆ ವಿರುದ್ಧ ಅಪ ಪ್ರಚಾರ ಮಾಡುತ್ತಿದ್ದ “ಕ್ಸಿಯಿಂಗ್‌637′ ಎಂಬ ಖಾತೆ ಕೆಲವು ತಿಂಗಳ ಹಿಂದೆ “ಹಿನಾರ್ಬಿ 2′ ಎಂಬ ಉರ್ದು ಲಿಪಿಯ ಬಳಕೆದಾರ ನಿರ್ವಹಿಸುತ್ತಿದ್ದ.

Advertisement

Udayavani is now on Telegram. Click here to join our channel and stay updated with the latest news.

Next