ನವದೆಹಲಿ: ಭಾರತ ಮತ್ತು ಚೀನಾ ಸೇನೆಯ ನಡುವಿನ ಸಂಘರ್ಷಕ್ಕೆ ಸಾಕ್ಷಿಯಾಗಿದ್ದ ಪೂರ್ವ ಲಡಾಖ್‌ನಲ್ಲಿ ಚೀನಾ ಸೇನೆ ಏಕಾಏಕಿ ತನ್ನ 10 ಸಾವಿರ ಸೈನಿಕರನ್ನು ವಾಪಸ್ ಪಡೆದುಕೊಂಡಿದೆ. ಗಡಿಯಲ್ಲಿ ಶಾಂತಿ ಸ್ಥಾಪಿಸುವ ಉದ್ದೇಶದಿಂದ ಸೇನೆಯನ್ನು ಹಿಂಪಡೆದುಕೊಂಡಿದೆಯೋ ಅಥವಾ ತೀವ್ರ ಚಳಿಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆಯೋ ಎಂಬುದು ಸ್ಪಷ್ಟವಾಗಿಲ್ಲ.
ಆದರೆ, ಅಲ್ಲಿರುವ ಟ್ಯಾಂಕ್‌ಗಳು, ಟ್ರಕ್‌ಗಳು, ಶಸ್ತ್ರಾಸ್ತ್ರಗಳು, ಸಮರ ವಿಮಾನಗಳ ನಿಯೋಜನೆಯಲ್ಲಿ ಮತ್ತು ಮುಂಚೂಣಿ ಸೇನಾಪಡೆಯ ನಿಯೋಜನೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈ ಪ್ರದೇಶದಲ್ಲಿ ತೀವ್ರ ಚಳಿಯಿರುವ ಕಾರಣ, ಕೆಲವು ಸೈನಿಕರನ್ನು ವಾಪಸ್ ಕರೆಸಿ, ಇನ್ನೊಂದು ತಂಡವನ್ನು ನಿಯೋಜಿಸುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.
ಸಂಘರ್ಷ ಆರಂಭವಾದ ಬಳಿಕ ಎರಡೂ ಸೇನೆಗಳು ಒಟ್ಟಾರೆ ಒಂದು ಲಕ್ಷದಷ್ಟು ಸೈನಿಕರನ್ನು ಮುಂಚೂಣಿ ನೆಲೆಗಳು ಹಾಗೂ ಇತರೆ ಪ್ರದೇಶಗಳಲ್ಲಿ ನಿಯೋಜಿಸಿವೆ. ಜತೆಗೆ, ವಿವಾದ ಬಗೆಹರಿಸುವ ನಿಟ್ಟಿನಲ್ಲಿ 8 ಸುತ್ತುಗಳ ಮಾತುಕತೆಯೂ ನಡೆದಿದೆ.
ಇದನ್ನೂ ಓದಿ: ಕೆರೆಯಲ್ಲಿ ಜಾರಿ ಬಿದ್ದ ಉರಗ ತಜ್ಞ: ಕಾಳಿಂಗ ಸರ್ಪದ ಕಡಿತದಿಂದ ಕೂದಲೆಳೆಯಲ್ಲಿ ಪಾರು
2020ರ ಮೇ 5ರಿಂದ ಉಭಯ ದೇಶಗಳ ನಡುವೆ ಗಡಿ ಸಂಘರ್ಷ ತಲೆದೋರಿದ್ದ ಹಿನ್ನೆಲೆಯಲ್ಲಿ ಭಾರತ ಮತ್ತು ಚೀನಾ ಪ್ರದೇಶದ ಗಡಿಯಲ್ಲಿ 50 ಸಾವಿರ ಯೋಧರನ್ನು ನಿಯೋಜಿಸಲಾಗಿತ್ತು.