ಹೊಸದಿಲ್ಲಿ : ನೈಋತ್ಯ ಪಾಕಿಸ್ಥಾನದ ಗ್ವಾದರ್ ಬಂದರಿನಲ್ಲಿ ಅಣು ಜಲಾಂತರ್ಗಾಮಿಗಳನ್ನು ನಿಲ್ಲಿಸಲು ಅಗತ್ಯವಿರುವ ಮೂಲ ಸೌಕರ್ಯವನ್ನು ನಿರ್ಮಿಸುವ ಕೆಲಸವನ್ನು ಚೀನ ಈಗಾಲೇ ಆರಂಭಿಸಿರುವುದಾಗಿ ತಿಳಿದುಬಂದಿದೆ.
ಇದರೊಂದಿಗೆ ಪಾಕಿಸ್ಥಾನದ ಗ್ವಾದರ್ ಬಂದರನ್ನು ವಾಣಿಜ್ಯ ವ್ಯವಹಾರಕ್ಕಿಂತಲೂ ವ್ಯೂಹಾತ್ಮಕ ಉದ್ದೇಶಗಳಿಗೆ ಚೀನವು ಬಳಸುವುದೆಂಬ ಭಾರತದ ದೀರ್ಘಕಾಲೀನ ಶಂಕೆ ಮತ್ತು ಅಸಮಾಧಾನವನ್ನು ಈ ವಿದ್ಯಮಾನವು ಸಾಬೀತು ಪಡಿಸಿದಂತಾಗಿದೆ ಎಂದು ವರದಿಗಳು ಹೇಳಿವೆ.
ಗ್ವಾದರ್ ಬಂದರನ್ನು ಚೀನ ತನ್ನ ಹಣದಿಂದ ನಿರ್ಮಿಸಿ ಅಭಿವೃದ್ಧಿಪಡಿಸಿದೆ. ಈ ಬಂದರಿನಿಂದಾಗಿ ಬೀಜಿಂಗ್‌ಗೆ ಹಿಂದೂ ಮಹಾಸಾಗರ ಪ್ರದೇಶಕ್ಕೆ ನೇರ ಪ್ರವೇಶ ಸಿಗುತ್ತದೆ. ಚೀನ ಇದನ್ನು ಬಹಳ ಕಾಲದಿಂದ ಬಯಸುತ್ತಾ ಬಂದಿದ್ದು ಪಾಕಿಸ್ಥಾನ ಚೀನದ ಬಯಕೆಯನ್ನು ಸಾಕಾರಗೊಳಿಸಿದೆ.
ಗ್ವಾದರ್ ಬಂದರಿನಲ್ಲಿ ಅಣು ಜಲಾಂತರ್ಗಾಮಿಗಳನ್ನು ನಿಯೋಜಿಸುವ ಮೂಲಕ ಚೀನಕ್ಕೆ ಹಿಂದೂ ಮಹಾ ಸಾಗರದಲ್ಲಿನ ಭಾರತೀಯ ನೌಕಾ ಪಡೆಯ ಚಲನ ವಲನಗಳು, ಕಾರ್ಯಾಚರಣೆ ಮುಂತಾಗಿ ಎಲ್ಲವುದರ ಮೇಲೆ ನಿಕಟ ನಿಗಾ ಇರಿಸುವುದು ಸಾಧ್ಯವಾಗುತ್ತದೆ ಎಂದು ವರದಿ ಹೇಳಿದೆ.
ಅಣು ಜಲಾಂತರ್ಗಾಮಿಗಳು ಅಣು ರಿಯಾಕ್ಟರ್ ಹೊಂದಿರುವುದರಿಂದ ಅವು ಅಣು ಚಾಲಿತವಾಗಿರುತ್ತವೆ. ಇವುಗಳು ಅಣ್ವಸ್ತ್ರಗಳನ್ನು ಹೊಂದಿರಲೇಬೇಕೆಂದೇನೂ ಇಲ್ಲ. ಈ ಅಣುಚಾಲಿತ ಜಲಾಂತರ್ಗಾಮಿಗಳು ದೀರ್ಘ ಕಾಲ ಸಮುದ್ರದಾಳದಲ್ಲೇ ಇರಬಲ್ಲವು; ಇಂಧನ ಮರುಪೂರಣಕ್ಕಾಗಿ ಇವು ಭೂಮಿಗೆ ಮರಳಬೇಕಾದ ಅಗತ್ಯ ಇರುವುದಿಲ್ಲ.