ಬೀಜಿಂಗ್: ಗಡಿಯಲ್ಲಿ ಒಂದಲ್ಲ ಒಂದು ಕೀಟಲೆ ಮಾಡುತ್ತಲೇ ಇರುವ ಚೀನಾ ಈ ಬಾರಿ ಬ್ರಹ್ಮಪುತ್ರ ನದಿಯ ನೀರಿನ ಮೇಲೆ
ಕಣ್ಣುಹಾಕಿದೆ. ಅರುಣಾಚಲ ಪ್ರದೇಶಕ್ಕೆ ಸಮೀಪದಲ್ಲಿ ಟಿಬೆಟ್‌ನಿಂದ ಬ್ರಹ್ಮಪುತ್ರ ನದಿಯ ನೀರನ್ನು ಕ್ಸಿನ್‌ಜಿಯಾಂಗ್ ಪ್ರಾಂತ್ಯಕ್ಕೆ ಹರಿಸಲು 1 ಸಾವಿರ ಕಿ.ಮೀ ಉದ್ದದ ಬೃಹತ್ ಸುರಂಗ ನಿರ್ಮಿಸಲು ಚೀನಾ ವಿಜ್ಞಾನಿಗಳು ಯೋಜನೆ ರೂಪಿಸಿದ್ದಾರೆ. ಅದು ವಿಶ್ವದಲ್ಲೇ ಅತಿ ಉದ್ದನೆಯದಾಗಿರಲಿದೆ.
ಈ ಯೋಜನೆ ಭಾರತ ಮತ್ತು ಚೀನಾ ನಡುವೆ ಡೋಕ್ಲಾಂ ಬಳಿಕ ಮತ್ತೂಂದು ಸುತ್ತಿನ ಬೃಹತ್ ರಾಜತಾಂತ್ರಿಕ ಸಮರಕ್ಕೆ ಕಾರಣವಾಗಲಿದೆ ಎಂದು ಹೇಳಲಾಗುತ್ತಿದೆ. ಜತೆಗೆ ಈ ಯೋಜನೆ ಬಾಂಗ್ಲಾದೇಶಕ್ಕೂ ಮಾರಕವಾಗಿದೆ. ಭಾರತ ಈಗಾಗಲೇ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.
ಕಳೆದ ಮಾರ್ಚ್‌ನಲ್ಲೇ ಈ ಬಗ್ಗೆ ಕರಡು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಮೂಲಗಳ ಪ್ರಕಾರ ವರದಿಯಲ್ಲಿ ಟಿಬೆಟ್ ಬಳಿ ಬ್ರಹ್ಮಪುತ್ರ ನದಿಯನ್ನು ಒಣಗಿಸುವ ಶಿಫಾರಸು ಮಾಡಲಾಗಿದೆ. ಅಲ್ಲದೆ ಸಂಗ್ರಿ ಪ್ರದೇಶದಲ್ಲಿ ಬೃಹತ್ ಆಣೆಕಟ್ಟು ನಿರ್ಮಾಣ ಮಾಡಿ,ಇದರಲ್ಲಿ ಒಂದು ಕೃತಕ ದ್ವೀಪವನ್ನೂ ನಿರ್ಮಿಸಲಾಗುತ್ತದೆ. ಈಗಾಗಲೇ ಯುನ್ನಾನ್ ಪ್ರಾಂತ್ಯದಲ್ಲಿ 600 ಕಿ.ಮೀ ಉದ್ದದ ಅಣೆಕಟ್ಟು ನಿರ್ಮಾಣ ಮಾಡಲು ಚೀನಾ ಆರಂಭಿಸಿದೆ.
ಭಾರತಕ್ಕೆ ಆತಂಕ: ಅರುಣಾಚಲ ಪ್ರದೇಶ, ಅಸ್ಸಾಂ ಸೇರಿದಂತೆ ಹಲವು ರಾಜ್ಯಗಳ ಭೂಭಾಗಗಳು ಬ್ರಹ್ಮಪುತ್ರ ನದಿಯ ನೀರನ್ನು ಅವಲಂಬಿಸಿದೆ. ಒಂದು ವೇಳೆ ಚೀನಾ ತನ್ನ ಭಾಗದಲ್ಲಿ ಬ್ರಹ್ಮಪುತ್ರ ನೀರನ್ನು ಸಂಪೂರ್ಣ ಬಳಸಿಕೊಂಡರೆ ಈ ಭಾಗದ ಕೃಷಿ ಭೂಮಿ ಬರಡಾಗುತ್ತದೆ. ಅಷ್ಟೇ ಅಲ್ಲ, ಸಂಗ್ರಿ ಪ್ರಾಂತ್ಯದಲ್ಲಿನ ಅಣೆಕಟ್ಟು ಅಸ್ಸಾಂ ಮತ್ತು ಅರುಣಾಚಲ ಪ್ರದೇಶಕ್ಕೆ ಅಪಾಯ ಒಡ್ಡಬಹುದಾಗಿದೆ.