ಬೀಜಿಂಗ್: ಟಿಬೆಟ್ ಏರ್ ಲೈನ್ಸ್ ವಿಮಾನವೊಂದು ರನ್ ವೇಯಿಂದ ಟೇಕ್ ಆಫ್ ಆಗುವ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡ ಘಟನೆ ಚೀನಾದ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ಎಲ್ಲಾ ಪ್ರಯಾಣಿಕರು ಮತ್ತು ಸಿಬಂದಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಸುಳಿವು ಸಿಗದ ಆಸಿಡ್ ದಾಳಿಕೋರ: ಹಿಂದೆಯೂ ಪ್ರೀತಿಸುವಂತೆ ಯುವತಿಯೊಬ್ಬಳ ಹಿಂದೆ ಬಿದ್ದಿದ್ದ
113ಮಂದಿ ಪ್ರಯಾಣಿಕರು ಮತ್ತು ಒಂಬತ್ತು ಸಿಬಂದಿಗಳಿದ್ದ ಟಿಬೆಟ್ ಏರ್ ಲೈನ್ಸ್ ವಿಮಾನ ಚೀನಾದ ನೈರುತ್ಯ ನಗರವಾದ ಚಾಂಗ್ ಕ್ವಿಂಗ್ ನಿಂದ ಟಿಬೆಟ್ ನ ನೈಂಗ್ ಚಿಗೆ ತೆರಳಲು ಸಿದ್ದವಾಗಿದ್ದು, ವಿಮಾನ ಟೇಕ್ ಆಫ್ ಆಗುತ್ತಿದ್ದಂತೆಯೇ ಬೆಂಕಿ ಹೊತ್ತಿಕೊಂಡಿರುವುದಾಗಿ ಏರ್ ಲೈನ್ಸ್ ಪ್ರಕಟಣೆಯಲ್ಲಿ ವಿವರಿಸಿದೆ.
ವಿಮಾನದಲ್ಲಿದ್ದ ಎಲ್ಲಾ 113 ಪ್ರಯಾಣಿಕರು, 9 ಸಿಬಂದಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಘಟನೆಯಲ್ಲಿ ಕೆಲವು ಪ್ರಯಾಣಿಕರಿಗೆ ಗಾಯಗಳಾಗಿರುವುದಾಗಿ ವರದಿ ತಿಳಿಸಿದೆ. ಕೆಲವು ವರದಿಗಳ ಪ್ರಕಾರ ಗಾಯಗೊಂಡಿರುವ 40 ಮಂದಿ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಟಿಬೆಟ್ ಏರ್ ಲೈನ್ಸ್ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಭಾರೀ ಪ್ರಮಾಣದಲ್ಲಿ ಹೊಗೆ ಉಗುಳುತ್ತಿರುವ ದೃಶ್ಯ ಸೆರೆಯಾಗಿದೆ. ಭೀತಿಗೊಳಗಾಗಿರುವ ಪ್ರಯಾಣಿಕರು ರನ್ ವೇಯಿಂದ ಹೊರಗೆ ಓಡಿ ಬರುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.