ಬೀಜಿಂಗ್: ಪೆಸಿಫಿಕ್ ರಾಷ್ಟ್ರಗಳೊಂದಿಗೆ ಭದ್ರತಾ ಒಪ್ಪಂದ ಮಾಡಿಕೊಳ್ಳುವ ಚೀನದ ಆಸೆಗೆ ಕೊನೆಗೂ ತಣ್ಣೀರು ಬಿದ್ದಿದೆ.
ಒಪ್ಪಂದಕ್ಕೆ ಸಂಬಂಧಿಸಿದಂತೆ 10 ಪೆಸಿಫಿಕ್ ದ್ವೀಪರಾಷ್ಟ್ರಗಳು ಮತ್ತು ಚೀನ ವಿದೇಶಾಂಗ ಸಚಿವ ವಾಂಗ್ ಯಿ ನಡುವೆ ನಡೆದ ಮಾತುಕತೆ ವಿಫಲವಾಗಿದ್ದು, “ಬೀಜಿಂಗ್‌ನ ಬಲೆ’ಗೆ ಬೀಳುವುದರಿಂದ ಪೆಸಿಫಿಕ್‌ನ ಈ ದೇಶಗಳು ಸ್ವಲ್ಪದರಲ್ಲೇ ತಪ್ಪಿಸಿಕೊಂಡಂತಾಗಿದೆ.
ದಕ್ಷಿಣ ಪೆಸಿಫಿಕ್ ಪ್ರದೇಶದಲ್ಲಿನ ಭದ್ರತೆ, ಆರ್ಥಿಕತೆ ಮತ್ತು ರಾಜಕೀಯದಲ್ಲಿ ಚೀನದ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದು ಈ ಒಪ್ಪಂದದ ಉದ್ದೇಶವಾಗಿತ್ತು. ಈ ಪ್ರಸ್ತಾಪವನ್ನು ಮುಂದಿಟ್ಟುಕೊಂಡು ವಾಂಗ್ ಯಿ ಅವರು ದ್ವೀಪರಾಷ್ಟ್ರಗಳ ನಾಯಕರೊಂದಿಗೆ ವರ್ಚುವಲ್ ಶೃಂಗ ನಡೆಸಿದ್ದರು.
ಆದರೆ, ಪೆಸಿಫಿಕ್ ದೇಶಗಳ ಕೆಲವು ನಾಯಕರು ಈ ಒಪ್ಪಂದದಿಂದ ಆಗಬಹುದಾದ ಅನಾಹುತಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಕಾರಣ ಒಪ್ಪಂದ ಮಾತುಕತೆ ಮುರಿದು ಬಿದ್ದಿದೆ.
ಪೆಸಿಫಿಕ್ ದ್ವೀಪರಾಷ್ಟ್ರಗಳ ಪೊಲೀಸರಿಗೆ ನಾವು ತರಬೇತಿ ನೀಡುತ್ತೇವೆ, ಆ ಪ್ರದೇಶದ ಸೈಬರ್ ಭದ್ರತೆಯಲ್ಲಿ ಸಕ್ರಿಯ ಪಾತ್ರ ವಹಿಸುತ್ತೇವೆ, ರಾಜಕೀಯ ಮೈತ್ರಿ ವಿಸ್ತರಣೆ, ನೌಕಾ ಮ್ಯಾಪಿಂಗ್ ಕಾರ್ಯವನ್ನೂ ನಡೆಸುತ್ತೇವೆ. ಅಲ್ಲಿನ ಭೂಮಿ ಮತ್ತು ಜಲದ ನೈಸರ್ಗಿಕ ಸಂಪನ್ಮೂಲಗಳಲ್ಲಿ ನಮಗೆ ಹೆಚ್ಚಿನ ಅವಕಾಶ ಸಿಗಬೇಕು ಎಂದು ಚೀನ ಪ್ರಸ್ತಾಪಿಸಿತ್ತು.
ಜತೆಗೆ ಕೋಟ್ಯಂತರ ಡಾಲರ್ ಹಣಕಾಸು ನೆರವು, ಚೀನಾ-ಪೆಸಿಫಿಕ್ ದ್ವೀಪಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಮತ್ತು ಚೀನದ ವ್ಯಾಪಕ ಮಾರುಕಟ್ಟೆಗೆ ಮುಕ್ತ ಅವಕಾಶ ಮುಂತಾದ ಆಮಿಷಗಳನ್ನೂ ಪೆಸಿಫಿಕ್ ರಾಷ್ಟ್ರಗಳಿಗೆ ಚೀನ ಒಡ್ಡಿತ್ತು. ಆದರೆ, ಡ್ರ್ಯಾಗನ್‌ನ ಎಲ್ಲ ಪ್ರಯತ್ನಗಳೂ ಈಗ ನೀರಿನಲ್ಲಿ ಹೋಮ ಮಾಡಿದಂತಾಗಿದೆ.