Advertisement

ಚೀನಾ ಓಪನ್‌ ಬ್ಯಾಡ್ಮಿಂಟನ್‌: ಸಿಂಧು ಮೇಲೆ ನಿರೀಕ್ಷೆ

10:03 AM Sep 17, 2019 | Team Udayavani |

ಚಾಂಗ್‌ಜೂ (ಚೀನ): ಕಳೆದ ತಿಂಗಳಷ್ಟೇ ಸ್ವಿಜರ್ಲೆಂಡ್‌ನ‌ಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ ಚಿನ್ನ ಗೆದ್ದ ಬಳಿಕ ನೂತನ ಎತ್ತರ ತಲುಪಿರುವ ಪಿ.ವಿ. ಸಿಂಧು, ಮಂಗಳವಾರದಿಂದ ಆರಂಭವಾಗಲಿರುವ (1,000,000 ಡಾಲರ್‌ ಬಹುಮಾನ) ಚೀನಾ ಓಪನ್‌ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಪ್ರಮುಖ ಭರವಸೆಯಾಗಿ ಗೋಚರಿಸಿದ್ದಾರೆ.

Advertisement

ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ ಪ್ರವೇಶಿಸಿದ 3ನೇ ಪ್ರಯತ್ನದಲ್ಲಿ ಸಿಂಧು ಇತಿಹಾಸ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದರು. ತಾಂತ್ರಿಕವಾಗಿ ತಮ್ಮ ಆಟದಲ್ಲಿ ಬಹಳಷ್ಟು ಸುಧಾರಣೆ ತಂದುಕೊಂಡ ಸಿಂಧು, ಚೀನ ಓಪನ್‌ನಲ್ಲೂ ಇದೇ ನಿರ್ವಹಣೆಯನ್ನು ಮುಂದುವರಿಸುವ ನಿರೀಕ್ಷೆ ಇಡಲಾಗಿದೆ. 2016ರಲ್ಲಿ ಚೀನ ಓಪನ್‌ ಪ್ರಶಸ್ತಿ ಗೆದ್ದ ಹಿರಿಮೆಯೂ ಭಾರತೀಯಳ ಪಾಲಿಗಿದೆ.

ಕಠಿಣ ಎದುರಾಳಿ :
ಆದರೆ ವಿಶ್ವ ರ್‍ಯಾಂಕಿಂಗ್‌ನಲ್ಲಿ 5ನೇ ಸ್ಥಾನದಲ್ಲಿರುವ ಪಿ.ವಿ. ಸಿಂಧು ಪ್ರಥಮ ಸುತ್ತಿನಲ್ಲೇ ಕಠಿಣ ಎದುರಾಳಿ ವಿರುದ್ಧ ಆಡಬೇಕಿದೆ. ಇಲ್ಲಿ ಆತಿಥೇಯ ದೇಶದ, ಮಾಜಿ ನಂಬರ್‌ ವನ್‌ ಹಾಗೂ ಮಾಜಿ ಒಲಿಂಪಿಕ್‌ ಸ್ವರ್ಣ ವಿಜೇತೆ ಲೀ ಕ್ಸುರುಯಿ ಎದುರಾಗಲಿದ್ದಾರೆ. ಸ್ವಾರಸ್ಯವೆಂದರೆ, ಸಿಂಧು ಜಾಗತಿಕ ಬ್ಯಾಡ್ಮಿಂಟನ್‌ನಲ್ಲಿ ಸುದ್ದಿಯಾದದ್ದೇ ಕ್ಸುರುಯಿ ಅವರನ್ನು ಮಣಿಸುವ ಮೂಲಕ. ಅದು 2012ರ ಚೀನ ಮಾಸ್ಟರ್ ಕೂಟವಾಗಿತ್ತು. ಆಗ ಕ್ಸುರುಯಿ ಒಲಿಂಪಿಕ್‌ ಚಾಂಪಿಯನ್‌ ಆಗಿದ್ದರು!

ಅನಂತರ ಸಿಂಧು ಮೇಲೇರುತ್ತ ಹೋದರೆ, ಕ್ಸುರುಯಿ ಗಾಯದ ಹೊಡೆತಕ್ಕೆ ತತ್ತರಿಸಿದರು. ಸದ್ಯ ಇವರಿಬ್ಬರ ಮಧ್ಯೆ 3-3 ಸಮಬಲದ ದಾಖಲೆ ಇದೆ. ವರ್ಷಾರಂಭದ ಇಂಡೋನೇಶ್ಯ ಮಾಸ್ಟರ್ ಕೂಟದಲ್ಲಿ ಕ್ಸುರುಯಿ ವಿರುದ್ಧ ಸಿಂಧು ಜಯ ಸಾಧಿಸಿದ್ದರು. ಮೊದಲ ಸುತ್ತು ದಾಟಿದರೆ ಸಿಂಧು ಕೆನಡಾದ ಮೈಕಲ್‌ ಲೀ ವಿರುದ್ಧ ಆಡುವ ಸಾಧ್ಯತೆ ಇದೆ. ಕ್ವಾರ್ಟರ್‌ ಫೈನಲ್‌ನಲ್ಲಿ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌, ಚೀನದ ಚೆನ್‌ ಯುಫಿ ಎದುರಾಗಬಹುದು.

ಸೈನಾಗೆ ಸವಾಲು
ಸೈನಾ ನೆಹ್ವಾಲ್‌ ಕೂಡ ರೇಸ್‌ನಲ್ಲಿದ್ದು, ಮೊದಲ ಸುತ್ತಿನಲ್ಲಿ ಥಾಯ್ಲೆಂಡ್‌ನ‌ ಬುಸನಾನ್‌ ಒಂಗ್ಬಾಮ್ರುಂಗಫಾನ್‌ ವಿರುದ್ಧ ಆಡಲಿದ್ದಾರೆ. ಕ್ವಾರ್ಟರ್‌ ಫೈನಲ್‌ ತಲುಪಿದರೆ ಚೈನೀಸ್‌ ತೈಪೆಯ ತೈ ಜು ಯಿಂಗ್‌ ಸವಾಲಿಗೆ ಉತ್ತರಿಸಬೇಕಾಗಬಹುದು.

Advertisement

ಆದರೆ ಕೆ. ಶ್ರೀಕಾಂತ್‌, ಎಚ್‌.ಎಸ್‌. ಪ್ರಣಯ್‌ ಅನುಪಸ್ಥಿತಿ ಭಾರತದ ಪುರುಷರ ವಿಭಾಗದ ಸ್ಪರ್ಧೆಯನ್ನು ತುಸು ಕಳೆಗುಂದುವಂತೆ ಮಾಡಿದೆ. ಹೀಗಾಗಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕದ ಬರ ನೀಗಿಸಿದ ಬಿ. ಸಾಯಿ ಪ್ರಣೀತ್‌, ಪಿ. ಕಶ್ಯಪ್‌, ಚಿರಾಗ್‌ ಶೆಟ್ಟಿ-ಸಾತ್ವಿಕ್‌ರಾಜ್‌ ರಾಂಕಿರೆಡ್ಡಿ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next