ಕಿಬಿತು (ಅರುಣಾಚಲ ಪ್ರದೇಶ): ಸಿಕ್ಕಿಂ ಸಮೀಪದ ಡೋಕ್ಲಾಂನಲ್ಲಿ ಕಳೆದ ವರ್ಷ ಕಾಲ್ಕೆರೆದುಕೊಂಡು ಬಂದಿದ್ದ ಚೀನ, ಇದೀಗ ಅರುಣಾಚಲ ಪ್ರದೇಶದಲ್ಲೂ ಕ್ಯಾತೆ ಶುರುವಿಟ್ಟುಕೊಂಡಿದೆ. ಅರುಣಾಚಲ ಪ್ರದೇಶದ ಅಸ್ಫಾಲಿಯಾ ಎಂಬಲ್ಲಿ ಭಾರತದ ಸೇನೆಯು ತನ್ನ ನೆಲಕ್ಕೆ ಅಕ್ರಮ ವಾಗಿ ಪ್ರವೇಶಿಸಿದೆ ಎಂದು ನೆರೆರಾಷ್ಟ್ರ ಆರೋಪಿಸಿದ್ದು, ಚೀನದ ಈ ಆರೋಪವನ್ನು ಭಾರತೀಯ ಸೇನೆ ತಿರಸ್ಕರಿಸಿದೆ.
ಮಾ.15ರಂದು ನಡೆದಿದ್ದ ಗಡಿ ಭಾಗದ ಸೇನಾಧಿಕಾರಿಗಳ ಸಭೆಯಲ್ಲಿ (ಬಿಪಿಎಂ) ಈ ವಿಚಾರ ಪ್ರಸ್ತಾಪವಾಗಿತ್ತು. ಆದರೆ ಭಾರತದ ಸೇನಾಧಿಕಾರಿಗಳು ಈ ಅಂಶವನ್ನು ಒಪ್ಪಿಕೊಂಡಿಲ್ಲ. ಜತೆಗೆ ಚೀನದ ಅಧಿಕಾರಿಗಳು ಅಲ್ಲಿನ ಸೇನೆ ನಿರ್ಮಿಸಿದ ರಸ್ತೆಯನ್ನು ಭಾರತದ ಸೈನಿಕರು ಹಾಳು ಮಾಡಿದ್ದಾರೆಂದು ದೂರಿದೆ ಎಂದು ಮೂಲಗಳು ತಿಳಿಸಿವೆ.
ಚೀನ ಪ್ರಸ್ತಾಪಿಸಿರುವ ಸ್ಥಳ ಅರುಣಾಚಲ ಪ್ರದೇಶದ ಸುಭಾನ್ಸಿರಿಯ ಮೇಲ್ಭಾಗದ ಪ್ರದೇಶವಾಗಿದ್ದು, ಅದು ಭಾರತದ ವ್ಯಾಪ್ತಿಗೆ ಒಳಪಟ್ಟ ಪ್ರದೇಶವೇ ಆಗಿದೆ. ಅಲ್ಲಿ ಭಾರತದ ಸೈನಿಕರು ಎಂದಿನಂತೆಯೇ ಗಸ್ತು ತಿರುಗುತ್ತಿದ್ದಾರೆ. ಚೀನ ಈ ಬಗ್ಗೆ ಆಕ್ಷೇಪ ಮಾಡಿರುವುದು ಅಚ್ಚರಿತಂದಿದೆ ಎಂದು ಭಾರತದ ಸೇನಾ ಅಧಿಕಾರಿ ಹೇಳಿದ್ದಾರೆ. ಚೀನದ ಪ್ರತಿಭಟನೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದಿಲ್ಲ. ಏಕೆಂದರೆ ಭಾರತ ಸೈನಿಕರು ಮತ್ತು ಅಧಿಕಾರಿಗಳಿಗೆ ನೆರೆಯ ರಾಷ್ಟ್ರದ ಜತೆಗೆ ಹೊಂದಿಕೊಂಡಿರುವ ಗಡಿಯ ಅರಿವು ಇದೆ ಎಂದು ಅವರು ಹೇಳಿದ್ದಾರೆ.
ಬಿಪಿಎಂ ಸಭೆಯಲ್ಲಿ ಭಾರತ ಅಥವಾ ಚೀನ ಅಧಿಕಾರಿಗಳು ನಿಯಮ ಉಲ್ಲಂಘನೆಯಾಗುತ್ತಿರುವುದರ ಬಗ್ಗೆ ಪ್ರಸ್ತಾಪ ಮಾಡಲು ಅವಕಾಶ ಉಂಟು. ಭಾರತದ ಸೇನೆ ಫಿಸೆôಲ್1 ಎಂಬ ಸ್ಥಳದ ಸಮೀಪದ ಆಸಿ#ಲಾ ಎಂಬಲ್ಲಿ ಕಳೆದ ವರ್ಷ ಡಿ.21, 22 ಮತ್ತು 23ರಂದು ಅಕ್ರಮವಾಗಿ ಪ್ರವೇಶಿಸಿತ್ತು ಎನ್ನುವುದು ಚೀನದ ಪ್ರತಿಪಾದನೆ. ಆದರೆ, ವಾಸ್ತವಿಕ ಗಡಿ ನಿಯಂತ್ರಣ ರೇಖೆಯವರೆಗೂ ಗಸ್ತು ತಿರುಗುವುದು ಸಹಜ ಪ್ರಕ್ರಿಯೆ. ಅಲ್ಲದೆ, ಗಸ್ತು ತಿರುಗುತ್ತಿರುವಂಥ ಆ ಪ್ರದೇಶ ಭಾರತಕ್ಕೇ ಸೇರಿದ್ದು ಎನ್ನುವುದು ನಮ್ಮ ಸೇನೆಯ ಸ್ಪಷ್ಟನೆ.
5 ಕೇಂದ್ರಗಳು
ಭಾರತ ಮತ್ತು ಚೀನ ನಡುವೆ ಐದು ಬಿಪಿಎಂ ಕೇಂದ್ರಗಳಿವೆ. ಅರುಣಾಚಲ ಪ್ರದೇಶದ ಬಮ್ ಲಾ ಮತ್ತು ಕಿಬಿತು ಎಂಬಲ್ಲಿ, ಲಡಾಖ್‌ನ ದೌಲತ್ ಬೇಗ್ ಓಲ್ಡಿ, ಚುಸುಲ್, ಸಿಕ್ಕಿಂನ ನಾಥುಲಾದಲ್ಲಿ ಈ ಕೇಂದ್ರಗಳಿವೆ. ಮಾ.15ರಂದು ಅರುಣಾಚಲ ಪ್ರದೇಶದ ಕಿಬಿತು ಎಂಬಲ್ಲಿ ಈ ಸಭೆ ನಡೆದಿತ್ತು.