Advertisement

ಭಾರತದ ವಿರುದ್ಧ ಕ್ಯಾತೆ ತೆಗೆಯುವ ಚೀನಾ ವಸ್ತು ಬಹಿಷ್ಕರಿಸಿ

01:36 PM Aug 07, 2017 | |

ಮೈಸೂರು: ದೇಶದ ಮೇಲೆ ಆಕ್ರಮಣ ನಡೆಸುತ್ತಿರುವ ಚೀನಾ ದೇಶವನ್ನು ಆರ್ಥಿಕವಾಗಿ ದುರ್ಬಲಗೊಳಿಸುವ ನಿಟ್ಟಿನಲ್ಲಿ ದೇಶದಲ್ಲಿ ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕಿದೆ ಎಂದು ಸ್ವದೇಶಿ ಜಾಗರಣ ಮಂಚ್‌ನ ರಾಷ್ಟ್ರೀಯ ಸಹ ಸಂಯೋಜಕ ಪೊ›.ಬಿ.ಎಂ. ಕುಮಾರಸ್ವಾಮಿ ಹೇಳಿದರು.

Advertisement

ನಗರದ ಎಸ್‌ಎಂಪಿ ಫೌಂಡೇಷನ್‌ ಹಾಗೂ ಸ್ವದೇಶಿ ಜಾಗರಣ ಮಂಚ್‌ ವತಿಯಿಂದ ವಿದ್ಯಾರಣ್ಯಪುರಂನ ಭೂತಾಳೆ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಸ್ವದೇಶಿ-ಸುರಕ್ಷಾ ಅಭಿಯಾನದ ಅಂಗವಾಗಿ ಚೀನಿ ವಸ್ತುಗಳನ್ನು ಬಹಿಷ್ಕರಿಸುವ ಎಂಬ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಏಷ್ಯಾದ ಇತರೆ ರಾಷ್ಟ್ರಗಳಿಗೆ ಹೊಲಿಸಿದರೆ ಭಾರತ ಮಾತ್ರವೇ ಚೀನಾವನ್ನು ಎದುರಿಸಬಲ್ಲ ಬಲಿಷ್ಠ ರಾಷ್ಟ್ರವಾಗಿದೆ. ಹೀಗಾಗಿಯೇ ಭಾರತದ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿರುವ ಚೀನಾ, ಈ ಹಿಂದಿನಿಂದಲೂ ಭಾರತದ ಮೇಲೆ ದಾಳಿ ನಡೆಸುತ್ತಿದೆ ಎಂದರು.

ಒಂದಡೆ ಭಾರತದ ಮೇಲೆ ನಿರಂತರ ದಾಳಿ ನಡೆಸುವ ಚೀನಾ, ಮತ್ತೂಂದೆಡೆ ಭಾರತದಲ್ಲೇ ವ್ಯಾಪಾರ-ವಹಿವಾಟು ನಡೆಸುವ ಮೂಲಕ ಆರ್ಥಿಕವಾಗಿ ಬಲಿಷ್ಠಗೊಳ್ಳುತ್ತಿದೆ. ಒಂದೆಡೆ ಚೀನಾ ಹಾಗೂ ಭಾರತದ ಸೇನೆ ಯುದ್ಧದ ವಾತಾವರಣ ಮೂಡಿಸುತ್ತಿದ್ದರೆ, ಮತ್ತೂಂದೆಡೆ ಚೀನಾ ಉತ್ಪನ್ನಗಳ ಮಾರಾಟದ ಮೂಲಕ ಆರ್ಥಿಕವಾಗಿಯೂ ದಾಳಿ ನಡೆಸಲು ಚೀನಾ ಮುಂದಾಗಿದೆ.

ಹೀಗಾಗಿ ಭಾರತದಲ್ಲಿ ಚೀನಿ ವಸ್ತುಗಳ ವಹಿವಾಟನ್ನು ದುರ್ಬಲಗೊಳಿಸುವ ಅಗತ್ಯವಿದ್ದು, ಇದಕ್ಕಾಗಿ ದೇಶದೆಲ್ಲೆಡೆ ಚೀನಾ ಉತ್ಪನ್ನಗಳನ್ನು ವಿರೋಧಿಸಬೇಕಿದೆ ಎಂದು ತಿಳಿಸಿದರು. ಪ್ರಮುಖವಾಗಿ ಅರುಣಾಚಲ ಪ್ರದೇಶವನ್ನು ಗುರಿಯಾಗಿಟ್ಟುಕೊಂಡಿರುವ ಚೀನಾ, ಈ ಹಿಂದೆ ರಾಜೀವ್‌ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಮಾಡಿಕೊಂಡ ಒಪ್ಪಂದ ಬಳಿಕ ದೇಶದಲ್ಲಿ ವ್ಯಾಪಾರ ಆರಂಭಿಸಿತು.

Advertisement

ಅಲ್ಲಿಂದ ನಿರಂತರವಾಗಿ ವ್ಯಾಪಾರ ನಡೆಸುತ್ತಿದ್ದು, ಪ್ರಸ್ತುತ 75 ಬಿಲಿಯನ್‌ ಡಾಲರ್‌ ವ್ಯಾಪಾರ ವಹಿವಾಟು ನಡೆಸುತ್ತಿದೆ. ಇದರೊಂದಿಗೆ ನಮ್ಮ ದೇಶದ ಆದಾಯವನ್ನೇ ಗುಂಡಾಗಿ ಮಾಡಿಕೊಂಡಿರುವ ಚೀನಾ ಭಾರತೀಯ ಸೈನಿಕರ ಮೇಲೆ ದಾಳಿ ನಡೆಸುತ್ತಿದೆ. ಹೀಗಿದ್ದರೂ ಚೀನಿಯರಿಗೆ ವ್ಯಾಪಾರ ನಡೆಸಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಎಸ್‌ಎಂಪಿ ಫೌಂಡೇಷನ್‌ ಹಾಗೂ ಸ್ವದೇಶಿ ಜಾಗರಣ ಮಂಚ್‌ನ ಸದಸ್ಯರು ಪ್ರಸ್ತುತ ಸಂದರ್ಭದಲ್ಲಿ ಬಳಕೆಯಲ್ಲಿರುವ ಚೀನಾದಲ್ಲಿ ತಯಾರಾಗಿರುವ ವಿದ್ಯುತ್‌ ಉಪಕರಣಗಳು ಸೇರಿದಂತೆ ಇನ್ನಿತರ ವಸ್ತುಗಳಿಗೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಎಸ್‌ಎಂಪಿ ಫೌಂಡೇಷನ್‌ನ ಎಸ್‌.ಎಂ.ಶಿವಪ್ರಕಾಶ್‌, ಸ್ವದೇಶಿ ಜಾಗರಣ ಮಂಚ್‌ನ ಎಸ್‌.ಆರ್‌.ಮಂಜುನಾಥ್‌, ಶಿವಶಂಕರ್‌ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next