Advertisement
ನಮ್ಮ ದೇಶದಲ್ಲಿ ಇಷ್ಟು ಮೊಬೈಲ್‌ಗಳು ಉತ್ಪಾದನೆಯಾಗುತ್ತಿವೆ ಅಂತ ನಮ್ಮ ಸರ್ಕಾರ ಅದೆಷ್ಟೇ ಹೇಳಿಕೊಂಡರೂ ಚೀನಾ ಕಂಪನಿಗಳ ಸ್ಮಾರ್ಟ್‌ಫೋನ್‌ಗಳನ್ನೇ ನಾವು ಕೈಯಲ್ಲಿ ಹಿಡಿದು ಓಡಾಡುತ್ತಿದ್ದೇವೆ. ಕೊರಿಯಾ ಕಂಪನಿ ನೋಕಿಯಾ ಶುರು ಮಾಡಿದ ಮೊಬೈಲ್ ಹವಾದಲ್ಲಿ ಹಲವು ದೇಶಗಳ ಕಂಪನಿಗಳು ತಮ್ಮ ಜೊಳ್ಳು ತೂರಿಕೊಳ್ಳುತ್ತಿವೆಯೇ ಹೊರತು ದೇಶೀಯ ಕಂಪನಿಗಳು ಬೇರು ಬಿಡಲು, ಮೊಳಕೆಯೊಡೆಯಲು ಸಾಧ್ಯವಾಗಲೇ ಇಲ್ಲ. ಈಗಂತೂ ಚೀನಾದ ಸ್ಮಾರ್ಟ್‌ಫೋನ್‌ಗಳು ಎಲ್ಲರ ಕೈಯಲ್ಲೂ ರಿಂಗಣಿಸತೊಡಗಿವೆ. ಶಿಯೋಮಿ, ಒಪ್ಪೊ, ರಿಯಲ್‌ಮಿ, ಒನ್‌ಪ್ಲಸ್ ಸೇರಿದಂತೆ ಹಲವು ಕಂಪನಿಗಳು ಈಗ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮೊದಲ ಸ್ಥಾನದಲ್ಲಿವೆ. ತಮ್ಮ ಸ್ಥಾನವನ್ನು ಬಹುತೇಕ ಭದ್ರಪಡಿಸಿಕೊಂಡಿದ್ದಾಗಿದೆ. ಆದರೆ ಇದೀಗ ಹೊಸದೊಂದು ಟ್ರೆಂಡ್ ಕೂಡ ಶುರುವಾಗಿದೆ. ಅದೇನೆಂದರೆ, ಭಾರತದಲ್ಲಿ ಜನಪ್ರಿಯಾಗುತ್ತಿರುವ ಅಪ್ಲಿಕೇಶನ್‌ಗಳ ಪೈಕಿ ಚೀನಾದ ಅಪ್ಲಿಕೇಶನ್‌ಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು. ಅದರ ವೇಗ ನೋಡಿದರಂತೂ ಗಾಬರಿಯೇ ಆಗುತ್ತದೆ!
Related Articles
Advertisement
ಭಾಷೆ ಬಳಕೆಚೀನಾ ಅಪ್ಲಿಕೇಶನ್‌ಗಳು ಭಾರತೀಯರ ನಾಡಿಮಿಡಿತವನ್ನು ಕಂಡುಕೊಂಡಂತೆ ವರ್ತಿಸುತ್ತಿವೆ. 2012ರಲ್ಲಿ ಟೆನ್ಸೆಂಟ್ ಎಂಬ ಚೀನಾದ ಜನಪ್ರಿಯ ಕಂಪನಿಯ ವಿಚ್ಯಾಟ್ ಅಪ್ಲಿಕೇಶನ್ ಭಾರತದಲ್ಲಿ ಬಿಡುಗಡೆಯಾದಾಗ ಜೋರಾಗಿ ಸದ್ದು ಮಾಡಿತ್ತು. ಆದರೆ ಜನರ ಮನಸಿನಲ್ಲಿ ನೆಲೆಯೂರಲು ವಿಫಲವಾಯಿತು. ಬಾಲಿವುಡ್ ಸ್ಟಾರ್‌ಗಳೇ ಬಂದು ವಿಚಾಟ್ ಮಾಡಿ ಎಂದರು. ಮಾಲ್‌ಗಳಲ್ಲಿ ದೊಡ್ಡ ದೊಡ್ಡ ಬ್ಯಾನರ್‌ಗಳು ಕಂಡಿತ್ತು. ಆದರೆ 2015ರ ಹೊತ್ತಿಗೆ ವಿಚಾಟ್ ಮಾಡಲ್ಲ ಅಂದಿತ್ತು! ಭಾರತದಲ್ಲಿ ಮಾತು ಮುಗಿಸಿ ಚೀನಾದಲ್ಲಿ ಮಾತ್ರ ಈಗ ಅದು ಕೆಲಸ ಮಾಡುತ್ತಿದೆ. ಇದಕ್ಕೆ ಮೂಲ ಕಾರಣವೇ ವಿಚಾಟ್ ನಮ್ಮ ದೇಶದ ಒಂದೊಂದು ಭಾಗಕ್ಕೂ ಯಾವ ಅಗತ್ಯವಿದೆ ಎಂಬುದನ್ನು ಅರಿತುಕೊಳ್ಳಲು ವಿಫಲವಾಯಿತು ಎಂದು ಹೇಳಲಾ ಗುತ್ತದೆ. ಈ ವೈಫಲ್ಯವನ್ನು ಚೀನಾದ ಇತರ ಕಂಪನಿಗಳು ಬಳಸಿ ಕೊಂಡವು. ಬೈಟ್‌ಡಾನ್ಸ್‌ನ ಇಡೀ ಹಲೋ ತಂಡವು ದೆಹಲಿಯಲ್ಲಿ ಕುಳಿತಿದೆ. ಇನ್ನು ನ್ಯೂಸ್‌ಡಾಗ್ ಎಂಬ ಕಂಟೆಂಟ್ ಅಪ್ಲಿಕೇಶನ್ ತಂಡ ಕೂಡ ದೆಹಲಿಯಲ್ಲಿ ಬಂದು ಕುಳಿತಿದೆ. ಸುಮ್ಮನೆ ನೋಯ್ಡಾದಲ್ಲಿ ಒಂದು ಸುತ್ತು ಹಾಕಿದರೆ ಆಕಾಶಕ್ಕೆ ತಲೆ ಎತ್ತಿ ನಿಂತಂತೆ ಇರುವ ಹಲವು ಕಟ್ಟಡಗಳ ಮೇಲೆ ಚೀನಾ ಕಂಪನಿಗಳ ಹೆಸರು ಕಾಣಿಸುತ್ತವೆ. 2016ರಲ್ಲಿ ಭಾರತಕ್ಕೆ ಕಾಲಿಟ್ಟ ನ್ಯೂಸ್‌ಡಾಗ್ ಆರಂಭದಲ್ಲಿ ಇಂಗ್ಲಿಷ್‌ನಲ್ಲೇ ಕಂಟೆಂಟ್ ಪ್ರಕಟಿಸುತ್ತಿತ್ತು. ಆದರೆ ಇದರ ಸಂಸ್ಥಾಪಕ ಫಾರೆಸ್ಟ್ ಚೆನ್ ಭಾರತಕ್ಕೆ ಬಂದಾಗ, ದೊಡ್ಡ ನಗರದಲ್ಲಿರುವವರೂ ಬಹುತೇಕ ಜನರು ತಮ್ಮ ಪ್ರಾಂತೀಯ ಭಾಷೆಯಲ್ಲೇ ಕಂಟೆಂಟ್ ಅನ್ನು ನೋಡುತ್ತಾರೆ ಅಥವಾ ಓದುತ್ತಾರೆ ಎಂದು ಕಂಡುಕೊಂಡರು. ಅದಾದ ನಂತರ ನ್ಯೂಸ್‌ಡಾಗ್ ಎಲ್ಲ ಭಾಷೆಯಲ್ಲೂ ತನ್ನ ಅಪ್ಲಿಕೇಶನ್ ಹೊಂದಿದೆ. ಭಾರತದ ಪ್ರಮುಖ ಭಾಷೆಗಳಲ್ಲಿ ಕಂಟೆಂಟ್ ನೀಡುತ್ತಿದೆ. ಸದ್ಯ ನ್ಯೂಸ್‌ಡಾಗ್ ಪ್ರಾಂತೀಯ ಭಾಷೆಯಲ್ಲೂ ವೀಡಿಯೋಗಳನ್ನು ಹೊಂದಿರುವ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಇನ್ನು ಮೊದಲು ಕೇವಲ ಅಪ್ಲಿಕೇಶನ್ ಅಥವಾ ಫೈಲ್ ಹಂಚಿ ಕೊಳ್ಳುವ ಅಪ್ಲಿಕೇಶನ್ ಆಗಿ ಜನಪ್ರಿಯತೆ ಪಡೆದ ಶೇರ್‌ಇಟ್ ಈಗ ಕಂಟೆಂಟ್ ವಹಿವಾಟಿಗೂ ಇಳಿದಿದೆ. ಸುಮಾರು 300 ಜನರ ತಂಡ ಚೀನಾ, ಬೆಂಗಳೂರು ಹಾಗೂ ದೆಹಲಿಯಲ್ಲಿದೆ. ಶೀಘ್ರದಲ್ಲೇ ಬೆಂಗಳೂರಿಗೆ ಸಂಶೋಧನೆ ಮತ್ತು ಅಭಿವೃದ್ಧಿ ತಂಡವನ್ನು ರವಾನಿ ಸಲು ನಿರ್ಧರಿಸಿದೆ. ಈ ಎಲ್ಲ ಅಪ್ಲಿಕೇಶನ್‌ಗಳೂ ಭಾರತದಲ್ಲಿ ತಮ್ಮ ಕಚೇರಿಯನ್ನು ಹೊಂದುವುದರ ಜೊತೆಗೆ, ಭಾರತದ ಪ್ರಾಂತೀಯ ಭಾಷೆಗಳಲ್ಲೇ ಕಂಟೆಂಟ್ ನೀಡುತ್ತಿದೆ. ಭಾರತೀಯರನ್ನು ಸೆಳೆಯುತ್ತಿ ರುವುದಕ್ಕೆ ಮೂಲ ಕಾರಣವೇ ಈ ಅಂಶ ಎಂದು ಹೇಳಲಾಗುತ್ತಿದೆ. 100 ಮಿಲಿಯನ್ ಗುರಿ
ಒಂದೆಡೆ ಗೂಗಲ್ ಮತ್ತೂಂದು ಬಿಲಿಯನ್ ಬಳಕೆದಾರರನ್ನು ತಲುಪುವ ಗುರಿಯನ್ನ ಹೊಂದಿದ್ದರೆ, ಇತ್ತ ಚೀನಾ ಕಂಪನಿಗಳು 100 ಮಿಲಿಯನ್‌ನ ಒಂದೊಂದೇ ಹೆಜ್ಜೆ ಇಡುತ್ತಿವೆ. ನಗರದಲ್ಲಿರುವ ಜನರಿಗೆ ಚೀನಾ ಎಂಬುದು ಎರಡನೇ ದರ್ಜೆ ಉತ್ಪನ್ನದ ಭಾವ ನೀಡುತ್ತದೆ. ಅವರಿಗೆ ವಾಟ್ಸ್‌ಆ್ಯಪ್ ಹಾಗೂ ಯೂಟ್ಯೂಬ್ ಶ್ರೇಷ್ಠ. ಆದರೆ ಆಗಷ್ಟೇ ಕೈಗೆ ಸ್ಮಾರ್ಟ್‌ಫೋನ್ ಸಿಕ್ಕಿರುವ ಎರಡನೇ ಮತ್ತು ಮೂರನೇ ಹಂತದ ಜನರಿಗೆ ಕುತೂಹಲವಿರುತ್ತದೆ. ಅವರಿಗೆ ಚೀನಾ ಮೂಲದ್ದು ಎಂಬುದಕ್ಕಿಂತ ಅವರ ಕುತೂಹಲ ತಣಿಸುವುದೇ ಪ್ರಮುಖ ಅಂಶವಾಗಿರುತ್ತದೆ. ಹೀಗಾಗಿ ಇವರನ್ನೇ ಇಂತಹ ಅಪ್ಲಿಕೇಶನ್‌ಗಳು ಗುರಿಯಾಗಿಸಿಕೊಂಡಿವೆ. ಅದರಲ್ಲೂ ಹಲೋ, ಲೈವ್‌ಮಿ, ಟಿಕ್‌ಟಾಕ್‌ನಂತಹ ಅಪ್ಲಿಕೇಶನ್‌ಗಳು ಇದಕ್ಕೆ ಬೇಕಾದ ಭಾರಿ ತಯಾರಿ ನಡೆಸುತ್ತಿವೆ. ಶೀಘ್ರದಲ್ಲೇ ಟಿಕ್‌ಟಾಕ್‌ನಲ್ಲಿ ನಾವು ವಿಶೇಷ ಕಾರ್ಯಕ್ರಮಗಳನ್ನೂ ನೋಡಬಹುದು. ಅದಕ್ಕೆ ಅವರು ಬಾಲಿವುಡ್‌ನ ಹಾಗೂ ಸ್ಯಾಂಡಲ್‌ವುಡ್‌ನ ಸ್ಟಾರ್‌ಗಳನ್ನು ತಂದು ಕೂರಿಸಿಕೊಳ್ಳಬಹುದು. ಹಾಗಂತ ಈ ಅಪ್ಲಿಕೇಶನ್‌ಗಳು ಭಾರಿ ಆದಾಯ ಗಳಿಸುತ್ತಿವೆ ಎಂದೇನಲ್ಲ. ಆದರೆ ಬಹುತೇಕ ಅಪ್ಲಿಕೇಶನ್‌ಗಳು ಆ ಹಾದಿಯಲ್ಲಿವೆ ಎಂಬುದಂತೂ ನಿಜ. ಸಾಫ್ಟ್ ಪಾರ್ನ್ ಅಪಾಯ: ಈ ಪೈಕಿ ಬಹುತೇಕ ಅಪ್ಲಿಕೇಶನ್‌ಗಳು ತಮ್ಮಲ್ಲಿ ಪ್ರಕಟವಾಗುವ ಕಂಟೆಂಟ್ ಮೇಲೆ ಸರಿಯಾದ ನಿಯಂತ್ರಣ ಹೊಂದಿರುವುದಿಲ್ಲ. ಅದರಲ್ಲೂ ಕೆಲವು ವೀಡಿಯೋ ಕಂಟೆಂಟ್ ಅಪ್ಲಿಕೇಶನ್‌ಗಳಂತೂ ಡೇಟಿಂಗ್ ಹೆಸರಿನಲ್ಲಿ ಅಶ್ಲೀಲ ವೀಡಿಯೋ ಅಥವಾ ಚಾಟ್ ಮಾಡುವುದನ್ನೇ ಪ್ರಚೋದಿಸುತ್ತಿರುತ್ತವೆ. ಇಂತಹ ಅಪ್ಲಿಕೇಶನ್‌ಗಳು ಆಗಷ್ಟೇ ಕಾಲೇಜು ಮೆಟ್ಟಿಲು ಹತ್ತಿದ ಯುವಕ ಯುವತಿಯರನ್ನು ಹಾದಿ ತಪ್ಪಿಸುವುದಂತೂ ಸುಳ್ಳಲ್ಲ. ಕೆಲವು ದಿನಗಳ ಹಿಂದಷ್ಟೇ ಲೈವ್‌ಮಿ ಅಪ್ಲಿಕೇಶನ್ ಅನ್ನು ಶಿಶುಕಾಮಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿಬಂದಾಗ ಸುಮಾರು 6 ಲಕ್ಷ ಖಾತೆಗಳನ್ನು ಅಪ್ಲಿಕೇಶನ್ ಅಳಿಸಿಹಾಕಿತ್ತು. ಡೇಟಾ ಮನೆ ಹಾಳಾಯ್ತು!: ಚೀನಾದ ಯಾವ ಅಪ್ಲಿಕೇಶನ್‌ಗಳೂ ಡೇಟಾ ಸೆಕ್ಯುರಿಟಿಯ ಚಿಂತೆಯಿಲ್ಲ. ಇದನ್ನು ಬಳಸುವವರಿಗಂತೂ ಮೊದಲೇ ಇಲ್ಲ. ಇವುಗಳ ಡೇಟಾ ನೇರವಾಗಿ ಚೀನಾದಲ್ಲಿರುವ ಸರ್ವರ್‌ಗಳಲ್ಲಿ ಉಳಿಯುತ್ತವೆ. ಹೀಗಾಗಿ ಇವುಗಳ ದುರ್ಬಳಕೆಯಂತೂ ಯಾವುದೇ ಸಮಯದಲ್ಲಿ ಸಂಭವಿಸಬಹುದು. ಆದರೆ ಸರ್ಕಾರದ ಕಠಿಣ ನಿಯಮಗಳ ಕೊರತೆಯಿಂದ ಚೀನಾದ ಅಪ್ಲಿಕೇಶನ್‌ಗಳು ಚಾಲ್ತಿಯಲ್ಲಿವೆ. ಸಿಲಿಕಾನ್ ವ್ಯಾಲಿಯಿಂದ ಹಿಡಿದು ತಂತ್ರಜ್ಞಾನ ಪರಿಣಿತರೆಲ್ಲರಿಗೂ ಚೀನಾ ಅಪ್ಲಿಕೇಶನ್ ದಂಧೆ ಬೆಳೆಯುತ್ತಿರುವ ಬಗ್ಗೆ ಆತಂಕವಿದ್ದರೂ, ಅದರಲ್ಲಿರುವ ಅದ್ಭುತ ಟೆಕ್ನಾಲಜಿಯ ಬಗ್ಗೆ ಮೆಚ್ಚುಗೆಯೂ ಇದೆ. ಸದ್ಯ ನಮ್ಮಲ್ಲಿರುವ ಬಹುತೇಕ ಅಪ್ಲಿಕೇಶನ್‌ಗಳಲ್ಲಿ ಇಲ್ಲದ ಅದ್ಭುತ ಟೆಕ್ನಾಲಜಿ ಈ ಟಿಕ್‌ಟಾಕ್ ಹಾಗೂ ಇತರ ಕೆಲವು ಅಪ್ಲಿಕೇಶನ್‌ಗಳಲ್ಲಿದೆ. ಅವುಗಳ ಜಾಹೀರಾತು ಕ್ಯಾಂಪೇನ್ ಅಂತೂ ತುಂಬಾ ಅಡಿಕ್ಟಿವ್ ಆಗಿದೆ. ಒಂದು ಬಾರಿ ನೀವು ಜಾಹೀರಾತು ನೋಡಿದರೆ ಕುತೂಹಲಕ್ಕಾದರೂ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ಇದರಲ್ಲಿ ಏನಿದೆ ಎಂದು ಕುಳಿತು ನೋಡುತ್ತೀರಿ. – ಕೃಷ್ಣ ಭಟ್