ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಆಂತರಿಕ ವಿಷಯದಲ್ಲಿ ಚೀನಾ ಹಾಗೂ ಇನ್ನಿತರ ವಿದೇಶಿ ಕೈಗಳು ಮೂಗು ತೂರಿಸುತ್ತಿರುವುದಾಗಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಶನಿವಾರ ಆರೋಪಿಸಿದ್ದು, ಇದರಿಂದಾಗಿ ಭಾರತ ಮತ್ತು ಚೀನಾ ಸಂಬಂಧದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದ್ದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಜಮ್ಮು ಕಾಶ್ಮೀರದಲ್ಲಿನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರ ಜತೆ ಮಾತುಕತೆ ನಡೆಸಿದ ನಂತರ ಮೆಹಬೂಬ ಈ ಹೇಳಿಕೆಯನ್ನು ನೀಡಿದ್ದಾರೆ.
ಜುಲೈ 10ರಂದು ಅಮರನಾಥ ಯಾತ್ರಾರ್ಥಿಗಳ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಏಳು ಮಂದಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಮುಫ್ತಿ ಅವರು ಸಿಂಗ್ ಅವರ ಬಳಿ ಸುಮಾರು 30 ನಿಮಿಷಗಳ ಕಾಲ ಮಾತುಕತೆ ನಡೆಸಿರುವುದಾಗಿ ವರದಿ ವಿವರಿಸಿದೆ.
ಅಮರನಾಥ ಗುಹಾಂತರ ದೇವಾಲಯಕ್ಕೆ ಭೇಟಿ ನೀಡಿ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಭಯೋತ್ಪಾದಕರು ದಾಳಿ ನಡೆಸಿದ್ದರು. ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಹಾಗೂ ಭದ್ರತೆಯ ಕುರಿತು ಇಬ್ಬರೂ ನಾಯಕರು ಚರ್ಚೆ ನಡೆಸಿದರು. ಅಲ್ಲದೇ ಭವಿಷ್ಯದಲ್ಲಿಯೂ ಇಂತಹ ಘಟನೆಗಳನ್ನು ನಡೆಯದಂತೆ ತಡೆಯುವ ಕುರಿತು ಮಾತುಕತೆ ನಡೆಸಿರುವುದಾಗಿ ವರದಿ ಹೇಳಿದೆ.