Advertisement
ಹೋಳಿ ಹಬ್ಬವನ್ನು ವಿಶಿಷ್ಟ ಹಾಗೂ ಸಂಭ್ರಮದಿಂದ ಆಚರಣೆಗೆಂದೇ ನಗರದಲ್ಲಿ ಹೋಳಿ ಹಬ್ಬದ ಬಾಬುದಾರರೂ ಒಳಗೊಂಡ ಸಮಿತಿ ಇದೆ. ಈ ಸಮಿತಿ, ಪ್ರತಿವರ್ಷವೂ ಹೋಳಿ ಹಬ್ಬ ಆಚರಣೆಗೆ ಮುಂದಾಳತ್ವ ವಹಿಸುತ್ತಿದ್ದು, ಇಡೀ ನಗರದ ಮಹಿಳೆಯರು, ಮಕ್ಕಳು, ಹಿರಿಯರು ಹೋಳಿ ಆಚರಣೆಯಲ್ಲಿ ತೊಡಗುತ್ತಾರೆ. ಯಾವ ಯಾವ ದಿನ ಹೋಳಿ ಆಚರಣೆ: ಮಾ. 9ರಂದು ಬೆಳಗ್ಗೆ 5ಕ್ಕೆ ಕಿಲ್ಲಾದಲ್ಲಿ ಕಾಮ ದಹನದೊಂದಿಗೆ ಹೋಳಿ ಆಚರಣೆಗೆ ಅಧಿಕೃತ ಚಾಲನೆ ದೊರೆಯಲಿದೆ. ಮಾ. 10, 11 ಹಾಗೂ 12ರಂದು ರಂಗು ರಂಗಿನ ಬಣ್ಣದಾಟ ಆರಂಭಗೊಳ್ಳಲಿದೆ.
Related Articles
Advertisement
ಮಾ. 4ರಂದು ಹೊಳೆ ಆಂಜನೆಯ ದೇವಸ್ಥಾನದ ಎದುರು ಮಾಧವ ಸೇವಾ ಕೇಂದ್ರದಿಂದ ಹಲಗೆ ಮಜಲು ಸ್ಪರ್ಧೆ ಹಮ್ಮಿಕೊಂಡಿದ್ದು, ಪ್ರಥಮ ಸ್ಥಾನ ಪಡೆದ ತಂಡಕ್ಕೆ 11,001, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 8,001 ರೂ. ಹಾಗೂ ತೃತೀಯ ತಂಡಕ್ಕೆ 5,001 ರೂ. ನಗದು ಬಹುಮಾನವಿದ್ದು, 5 ತಂಡಗಳಿಗೆ ಸಮಾಧಾನಕರ ಬಹುಮಾನ ಕೂಡ ನೀಡಲಾಗುತ್ತಿದೆ ಎಂದು ಮಾಧವ ಸೇವಾ ಕೇಂದ್ರದ ಅಧ್ಯಕ್ಷ ನಾಗರಾಜ ಹದ್ಲಿ ತಿಳಿಸಿದ್ದಾರೆ.
ಚೀನಾ ಸಾಮಗ್ರಿ ನಿಷೇಧ: ಹೋಳಿಯ ಬಣ್ಣದಾಟಕ್ಕೆ ಬಹುತೇಕ ಸಾಮಗ್ರಿಗಳು ಚೀನಾ ದೇಶದ ಉತ್ಪಾದಿತ ವಸ್ತುಗಳಾಗಿವೆ. ಚೀನಾದಲ್ಲಿ ಕೊರೊನಾ ರೋಗ ಹರಡಿದ ಹಿನ್ನೆಲೆಯಲ್ಲಿ ಈ ಬಾರಿ, ಚೀನಾದಿಂದ ಬಣ್ಣ, ಬಣ್ಣ ಹೊಡೆಯಲು ವಿವಿಧ ಸಾಮಗ್ರಿಗಳನ್ನು ನಗರದ ಯಾವುದೇ ವ್ಯಾಪಾರಸ್ಥರು ತರಿಸಬಾರದು. ಜನರೂ ಅಂತಹ ವಸ್ತುಗಳ ಬಳಕೆ ಮಾಡಬಾರದು ಎಂದು ಸಮಿತಿ ಮನವಿ ಮಾಡಿದೆ. ಜನರು, ಚೀನಾ ಉತ್ಪಾದಿತ ವಸ್ತುಗಳನ್ನು ಯಾವುದೇ ಕಾರಣಕ್ಕೂ ಬಳಸದೇ, ದೇಶೀಯ ವಸ್ತುಗಳನ್ನು ಖರೀದಿಸಿ, ಬಣ್ಣದಾಟದಲ್ಲಿ ತೊಡಗಬೇಕು ಎಂಬುದು ಪ್ರಜ್ಞಾವಂತರ ಒತ್ತಾಸೆ ಕೂಡ.
ಈ ಬಾರಿಯ ಹೋಳಿಯ ಬಣ್ಣದಾಟಕ್ಕೆ ಚೀನಾ ದೇಶದ ಉತ್ಪಾದಿತ ಬಣ್ಣ ಸಹಿತ ಯಾವುದೇ ಸಾಮಗ್ರಿ ಮಾರಾಟ-ಬಳಕೆ ಮಾಡದಂತೆ ಮನವಿ ಮಾಡಿದ್ದೇವೆ. ಕೊರೊನಾ ರೋಗ ಹಬ್ಬಿದ್ದರಿಂದ ಅಲ್ಲಿಂದ ಬರುವ ವಸ್ತುಗಳ ಬಳಕೆ ಮಾಡಬಾರದು. ಅಲ್ಲದೇ ನಗರದ ಜನರು ಪರ ಊರಿಗೆ ಹೋಗದೇ ಇಲ್ಲಿನ ಸಂಸ್ಕೃತಿ, ಪರಂಪರೆಯ ಪ್ರತೀಕವಾದ ಹಬ್ಬದಲ್ಲಿ ಪಾಲ್ಗೊಳ್ಳಬೇಕು. –ಮಹಾಬಲೇಶ್ವರ ಗುಡಗುಂಟಿ, ಪ್ರಧಾನ ಕಾರ್ಯದರ್ಶಿ, ಹೋಳಿ ಆಚರಣೆ ಸಮಿತಿ
ಹಳೆಯ ಬಾಗಲಕೋಟೆಯಿಂದ ಜನರು ಸ್ಥಳಾಂತರಗೊಂಡು ವಿದ್ಯಾಗಿರಿ, ನವನಗರದಲ್ಲಿ ವಾಸವಾಗಿದ್ದು, ಅವರೂ ಬಣ್ಣದಾಟವಾಡಲು ಅವಕಾಶ ಕೇಳಿದ್ದಾರೆ. ಇನ್ನೂ ಪರಿಶೀಲನೆಯಲ್ಲಿದೆ.– ಲೋಕೇಶ ಜಗಲಾಸರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
-ಎಸ್.ಕೆ. ಬಿರಾದಾರ