ಬೀಜಿಂಗ್: ಪ್ರತಿಯೊಂದು ಕಂಪೆನಿಯಲ್ಲಿ ಉದ್ಯೋಗಿಗಳಿಗೆ ವಾರದ ರಜೆ ಇರುತ್ತದೆ. ಕೆಲವು ಕಂಪೆನಿಗಳಲ್ಲಿ ವಾರದಲ್ಲಿ ಎರಡು ದಿನ ರಜೆಯೂ ಸಿಗುತ್ತದೆ. ಆದರೆ ಯಾವುದೇ ರಜೆ ಪಡೆಯದೆ ಸತತ ಕೆಲಸ ಮಾಡಿದರೆ ಏನಾಗುತ್ತದೆ? 104 ದಿನಗಳ ಕಾಲ ರಜೆ ಪಡೆಯದೆ ಕೆಲಸ ಮಾಡಿದ ಚೀನಾದ ವ್ಯಕ್ತಿಯೊಬ್ಬರು ಅಂಗಾಂಗ ವೈಫಲ್ಯದಿಂದ (Organ Failure) ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.
30 ವರ್ಷದ ಚೀನಾದ ವ್ಯಕ್ತಿಯೊಬ್ಬರು ಕೇವಲ ಒಂದು ದಿನದ ರಜೆ ಪಡೆದು ಸತತ 104 ದಿನ ಕೆಲಸ ಮಾಡಿ ಅಂಗಾಂಗ ವೈಫಲ್ಯದಿಂದ ಬಳಲಿ ಸಾವನ್ನಪ್ಪಿದ್ದಾರೆ. ಆತನ ಕೆಲಸದ ಮಾಲೀಕ ಆತನ ಸಾವಿಗೆ 20 ಪ್ರತಿಶತದಷ್ಟು ಹೊಣೆಗಾರ ಎಂದು ನ್ಯಾಯಾಲಯವು ತೀರ್ಪು ನೀಡಿದೆ.
ವೃತ್ತಿಯಲ್ಲಿ ಪೈಂಟರ್ ಆಗಿದ್ದ ಅಬಾವೊ ಎಂಬಾತ ಶ್ವಾಸಕೋಶದ ಸೋಂಕಿಗೆ ಒಳಗಾಗಿದ್ದ. ಅಂತಿಮವಾಗಿ ಅದು 2023 ರ ಜೂನ್ ನಲ್ಲಿ ಅವರ ಸಾವಿಗೆ ಕಾರಣವಾಯಿತು ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ವರದಿಯ ಪ್ರಕಾರ, ಅಬಾವೊ ಕಳೆದ ವರ್ಷ ಫೆಬ್ರವರಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದರು. ಝೆಜಿಯಾಂಗ್ ಪ್ರಾಂತ್ಯದ ಝೌಶಾನ್ ನಲ್ಲಿ ಕೆಲಸ ಒಪ್ಪಿಕೊಂಡಿದ್ದರು. ಫೆಬ್ರವರಿಯಿಂದ ಮೇವರೆಗೆ ಅವರು ಪ್ರತಿದಿನ ಕೆಲಸ ಮಾಡಿದ್ದಾರೆ. ಮಧ್ಯದಲ್ಲಿ ಏಪ್ರಿಲ್ 6ರಂದು ಒಂದು ದಿನ ಮಾತ್ರ ರಜೆ ಪಡೆದಿದ್ದರು. ಮೇ 25ರಂದು ಅನಾರೋಗ್ಯವೆಂದು ರಜೆ ಮಾಡಿದ್ದರು. ಆದರೆ ಅಲ್ಲಿಂದ ಅವರ ಆರೋಗ್ಯ ಪರಿಸ್ಥಿತಿ ಹದಗೆಟ್ಟಿತ್ತು. ಹೀಗಾಗಿ ಮೇ 28ರಂದು ಅವರು ಆಸ್ಪತ್ರೆಗೆ ದಾಖಲಾಗಿದ್ದರು.
ಜೂನ್ 1ರಂದು ಅಬಾವೊ ಅಸುನೀಗಿದ್ದರು. ಅವರು ನ್ಯುಮೋಕೊಕಲ್ ಸೋಂಕು ಮತ್ತು ಉಸಿರಾಟದ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.
ಅಬಾವೊ ಸಾವಿನ ಬಳಿಕ ಮಾಲಿಕನ ನಿರ್ಲಕ್ಷ್ಯದ ವಿರುದ್ದ ಅಬಾವೊ ಕುಟುಂಬ ಕಾನೂನು ಸಮರ ಆರಂಭಿಸಿತ್ತು. ಝೌಶನ್ ಇಂಟರ್ಮೀಡಿಯೇಟ್ ಪೀಪಲ್ಸ್ ಕೋರ್ಟ್ ಅಬಾವೊ ಅವರ ಸಾವಿಗೆ ಕಂಪನಿಯು ಶೇಕಡಾ 20 ರಷ್ಟು ಹೊಣೆಗಾರ ಎಂದು ತೀರ್ಪು ನೀಡಿದೆ. 104 ದಿನಗಳ ಕೆಲಸದ ವಿಸ್ತರಣೆಯು ಚೀನೀ ಕಾರ್ಮಿಕ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ತೀರ್ಪು ನೀಡಿದೆ. ನಿಯಮದ ಪ್ರಕಾರ ಗರಿಷ್ಠ ಎಂಟು ಕೆಲಸದ ಸಮಯವನ್ನು ಮತ್ತು ವಾರಕ್ಕೆ ಸರಾಸರಿ 44 ಗಂಟೆಗಳ ಕಾಲ ಕಡ್ಡಾಯವಾಗಿದೆ.
ವರದಿಯ ಪ್ರಕಾರ, ನ್ಯಾಯಾಲಯವು ಅಬಾವೊ ಅವರ ಕುಟುಂಬಕ್ಕೆ 4,00,000 ಯುವಾನ್ (ಅಂದಾಜು ರೂ 47,46,000) ಪರಿಹಾರವನ್ನು ನೀಡಲು ಸೂಚಿಸಿದೆ. ಜೊತೆಗೆ 10,000 ಯುವಾನ್ (ಅಂದಾಜು ರೂ 1,17,000) ಭಾವನಾತ್ಮಕ ಯಾತನೆಗಾಗಿ ನೀಡಿತು. ಕಂಪನಿಯ ಮೇಲ್ಮನವಿ ವಿಫಲವಾಗಿದೆ.