ಬೀಜಿಂಗ್ / ತೈಪೆ / ಟೋಕಿಯೋ: ಅಮೆರಿಕದ ಪ್ರಜಾಪ್ರತಿನಿಧಿಗಳ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ತೈವಾನ್ ಭೇಟಿ ಮುಗಿಸಿ ಮರಳಿದ ಬಳಿಕ ಆ ದೇಶ ಅಕ್ಷರಶಃ ಚೀನದ ಚಕ್ರವ್ಯೂಹದೊಳಗೆ ಸಿಲುಕಿದೆ!
ಬುಧವಾರ ಮಧ್ಯಾಹ್ನದಿಂದಲೂ ದ್ವೀಪ ರಾಷ್ಟ್ರ ತೈವಾನ್ ಮತ್ತು ಅದರ ಸುತ್ತಲೂ ತನ್ನ ಸೇನೆಯ ಶಕ್ತಿ ಪ್ರದರ್ಶಿಸುತ್ತಿರುವ ಚೀನ, ಗುರು ವಾರ 11 ಕ್ಷಿಪಣಿಗಳನ್ನು ಪ್ರಯೋಗಿಸಿದೆ. ಇವು ತೈವಾನ್‌ನ ಉತ್ತರ, ದಕ್ಷಿಣ ಮತ್ತು ಪೂರ್ವದಿಕ್ಕಿಗೆ ಹೋಗಿ ಅಪ್ಪಳಿಸಿವೆ. ತೈವಾನ್‌ನ ಸ್ಥಳೀಯ ಸಮಯದ ಪ್ರಕಾರ ಗುರುವಾರ ಮಧ್ಯಾಹ್ನ 1.56 ಮತ್ತು 4 ಗಂಟೆ ಸುಮಾರಿಗೆ ಕ್ಷಿಪಣಿಗಳ ಪ್ರಯೋಗ ನಡೆದಿದೆ.
ಚೀನದ ಈ ಪ್ರಚೋದನಾತ್ಮಕ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದ್ದು, ತೈವಾನ್ ಅನ್ನು ಯುದ್ಧಕ್ಕೆ ಪ್ರಚೋದಿಸುವ ತಂತ್ರವಿದು ಎನ್ನಲಾಗುತ್ತಿದೆ. ಹಿಂದಿನಿಂದಲೂ ಚೀನ ಮತ್ತು ತೈವಾನ್ ಮಧ್ಯೆ ಸಂಘರ್ಷ ನಡೆಯುತ್ತಿದ್ದರೂ ಇದುವರೆಗೂ ಡ್ರ್ಯಾಗನ್ ದೇಶ ತೈವಾನ್ ವಾಯುಪ್ರದೇಶದಲ್ಲಿ ಕ್ಷಿಪಣಿ ಗಳನ್ನು ಪ್ರಯೋಗಿಸಿರಲಿಲ್ಲ.
ಇದೇ ಮೊದಲ ಬಾರಿಗೆ ಇಂಥ ನಡೆ ಅನುಸರಿಸಿರು ವುದು ಆತಂಕಕ್ಕೂ ಕಾರಣವಾಗಿದೆ. ತೈವಾನ್ ಹೇಳಿರುವ ಪ್ರಕಾರ, ಚೀನ ಈ ಕ್ಷಿಪಣಿಗಳನ್ನು ಮಾಸ್ತು, ಡಾಂಗ್‌ಯಿನ್, ವುಕ್ಯೂ ಎಂಬ ದ್ವೀಪಗಳ ಬಳಿಗೆ ಕಳುಹಿಸಿದೆ. ಆದರೆ ಈ ದ್ವೀಪಗಳನ್ನು ನಾವು ರಕ್ಷಿಸಿಕೊಳ್ಳುತ್ತೇವೆ ಎಂದು ಅಲ್ಲಿನ ರಕ್ಷಣ ಇಲಾಖೆ ಹೇಳಿದೆ.
ಚೀನದ ನಡೆಗೆ ಪ್ರತಿಯಾಗಿ ತೈವಾನ್ ಕೂಡ ತನ್ನ ಸೇನೆಯನ್ನು ಸನ್ನದ್ಧಗೊಳಿ ಸುತ್ತಿದೆ. ಚೀನ ಸೇನೆಯು ಸಮರಾಭ್ಯಾಸ ನಡೆಸುತ್ತಿರುವ ಪ್ರದೇಶದ ಹತ್ತಿರಕ್ಕೇ ತನ್ನ ಪಡೆಯನ್ನು ಕಳುಹಿಸುತ್ತಿದೆ. ತನ್ನ ಬತ್ತಳಿಕೆಯಲ್ಲಿರುವ 155ಎಂಎಂ ಎಂ114 ಹೋವಿಟ್ಜರ್, 120ಎಂಎಂ ಮಾರ್ಟರ್ಸ್‌ಗಳನ್ನು ಕಳುಹಿಸಿದೆ. ಇದರ ಜತೆಯಲ್ಲೇ ಅತ್ತ ಅಮೆರಿಕ ಕೂಡ ತೈವಾನ್‌ನ ಪೂರ್ವದಲ್ಲಿ ತನ್ನ ಎರಡು ಸಮರ ನೌಕೆಗಳನ್ನು ಸನ್ನದ್ಧವಾಗಿರಿಸಿದೆ. ಇದರಲ್ಲಿ ಮರೈನ್ ಎಫ್-35ಬಿ ಯುದ್ಧ ವಿಮಾನಗಳಿವೆ.
ಜಪಾನ್ ಆಕ್ರೋಶ :
ಚೀನ ಸಮರಾಭ್ಯಾಸದ 4 ಕ್ಷಿಪಣಿಗಳು ಜಪಾನ್‌ನ ಎಕಾನಾಮಿಕ್ ಝೋನ್(ಇಇ ಝೆಡ್) ಮೇಲೆ ಬಿದ್ದಿದ್ದು, ಇದಕ್ಕೆ ಜಪಾನ್ ಆಕ್ರೋಶ ವ್ಯಕ್ತಪಡಿಸಿದೆ. ಆದರೆ ಇದಕ್ಕೆ ಚೀನ, ನಮ್ಮ ಮತ್ತು ಜಪಾನ್ ಮಧ್ಯೆ ಸಮುದ್ರದಲ್ಲಿ ಗಡಿಯನ್ನೇ ಗುರುತಿಸಿಲ್ಲ ಎಂದಿದೆ.
ರಷ್ಯಾ ಸಮರ್ಥನೆ :
ಅತ್ತ ಉಕ್ರೇನ್ ಮೇಲೆ ಯುದ್ಧ ನಡೆಸುತ್ತಲೇ ಇರುವ ರಷ್ಯಾ, ಈಗ ತೈವಾನ್ ಬಳಿ ಚೀನ ನಡೆಸುತ್ತಿರುವ ಸಮರಾಭ್ಯಾಸವನ್ನು ಸಮರ್ಥಿಸಿಕೊಂಡಿದೆ. ತೈವಾನ್ ಸುತ್ತಲೂ ಯುದ್ಧಾಭ್ಯಾಸ ನಡೆಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂಬ ಮಾತುಗಳನ್ನಾಡಿದೆ.