ವಾಷಿಂಗ್ಟನ್: ಕೋವಿಡ್-19ನ ಸೃಷ್ಟಿಕರ್ತ ಚೀನದಿಂದ ಇಡೀ ವಿಶ್ವವೇ ಇಂದು ಪರಮ ಸಂಕಟದಲ್ಲಿ ಮುಳುಗಿದೆ.
ಹಸಿವು, ಬಡತನ, ಆರ್ಥಿಕ ಹಿಂಜರಿತ, ಸಾಮಾಜಿಕ ಭದ್ರತೆ ಸೇರಿದಂತೆ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದೆ.
ಇಷ್ಟಾದರೂ ಬುದ್ಧಿ ಕಲಿಯದ ಡ್ರ್ಯಾಗನ್ ರಾಷ್ಟ್ರ ತನ್ನ ನೆರಹೊರೆಯ ರಾಷ್ಟ್ರಗಳೊಂದಿಗೆ ಖ್ಯಾತೆ ತೆಗಿಯುತ್ತಲೇ ಇದ್ದು, ಇದೀಗ ವಿಶ್ವದ ದೊಡ್ಡಣ್ಣ ಅಮೆರಿಕದ ಕೆಲ ಕಂಪನಿಗಳಿಗೆ ಚೀನ ದುಸ್ವಪ್ನವಾಗಿ ಕಾಡುತ್ತಿದೆ.
ಹೌದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಅಮೆರಿಕದ ಕೆಲವು ರಕ್ಷಣಾ ಕಂಪನಿಗಳಲ್ಲಿ ಪಾಲು ಪಡೆಯಲು ಚೀನ ಪ್ರಯತ್ನಿಸುತ್ತಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಕಳವಳ ವ್ಯಕ್ತಪಡಿಸಿದೆ.
ಸದ್ಯದ ಪರಿಸ್ಥಿತಿಯನ್ನು ನಿಭಾಹಿಸುವುದರೊಂದಿಗೆ ರಕ್ಷಣಾ ಇಲಾಖೆಯು ರಾಷ್ಟ್ರೀಯ ಭದ್ರತೆ ಮೇಲೆ ನಿಗಾ ಇಡುವುದು ಮತ್ತು ಸಣ್ಣ ಕಂಪನಿಗಳನ್ನು ರಕ್ಷಿಸಲು ಸಹಾಯ ಮಾಡುವುದು ಕಷ್ಟಕರ ಸಂಗತಿಯಾಗಿದ್ದು, ರಕ್ಷಣಾ ಕಂಪನಿಗಳಿಗೆ ಎಂದಿಗಿಂತಲೂ ಹೆಚ್ಚು ಬಂಡವಾಳದ ಅಗತ್ಯವಿರುವ ಈ ಸನ್ನಿವೇಶದ ಲಾಭ ಪಡೆಯಲು ಚೀನ ಪ್ರಯತ್ನಿಸುತ್ತಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ.
ಇನ್ನು ಈ ಎಲ್ಲಾ ವಿಷಯಗಳ ಬಗ್ಗೆ ನಾವು ಹೆಚ್ಚು ಗಮನ ಹರಿಸುತ್ತಿದ್ದೇವೆ ಎಂದು ಅಮೆರಿಕ ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದು, ಅಮೆರಿಕದ ಜತೆ ಆರ್ಥಿಕ ಯುದ್ಧಕ್ಕೆ ಸಜ್ಜಾಗುವ ವಿರೋಧಿಗಳ ಮೇಲೆ ಹೆಚ್ಚು ನಿಗಾ ಇಡಲಾಗಿದೆ. ನಮ್ಮ ವಿರೋಧಿಗಳು ನಮ್ಮೊಂದಿಗೆ ಒಂದು ರೀತಿಯ ಆರ್ಥಿಕ ಯುದ್ಧಕ್ಕೆ ಪ್ರಯತ್ನ ಪಡುತ್ತಿದ್ದು, ಈ ಬಗ್ಗೆ ನಾವು ಜಾಗರೂಕರಾಗಿರಬೇಕು ಎಂದು ರಕ್ಷಣಾ ಉಪ ಕಾರ್ಯದರ್ಶಿ ಎಲ್ಲೆನ್ ಲಾರ್ಡ್ ತಿಳಿಸಿದ್ದಾರೆ.