ಬೀಜಿಂಗ್, ನ. 8: ವ್ಯಕ್ತಿಯ ದೇಹದ ಭಂಗಿಯಿಂದಲೇ ಗುರುತು ಪತ್ತೆ ಮಾಡುವ ವಿಶಿಷ್ಟ ಗೇಯ್ಟ್ ರೆಕಗ್ನಿಷನ್ ಸಾಫ್ಟ್ವೇರ್ ಅನ್ನು ಚೀನದ ಅಧಿಕಾರಿಗಳು ಅಳವಡಿಸಿಕೊಳ್ಳಲು ನಿರ್ಧರಿಸಿದ್ದಾರೆ. ಇದರಿಂದಾಗಿ ಕ್ಯಾಮೆರಾಗಳಲ್ಲಿ ಜನರ ಮುಖ ಕಾಣದೇ ಇದ್ದರೂ, ಅವರು ನಡೆಯುವ ಹಾಗೂ ನಿಲ್ಲುವ ಭಂಗಿ ದೇಹದ ಆಕಾರದಿಂದಲೇ ಗುರುತು ಪತ್ತೆ ಮಾಡಬಹುದಾಗಿದೆ. ಈಗಾಗಲೇ ಈ ತಂತ್ರಜ್ಞಾನವನ್ನು ಬೀಜಿಂಗ್ ಮತ್ತು ಶಾಂಘೈ ಪೊಲೀಸರು ಬಳಸುತ್ತಿದ್ದಾರೆ.
ಚೀನದಲ್ಲಿ ದತ್ತಾಂಶ ಆಧರಿತ ಮತ್ತು ಕೃತಕ ಬುದ್ಧಿ ಮತ್ತೆಯನ್ನು ಆಧರಿಸಿ ಜನರ ಮೇಲೆ ವಿಚಕ್ಷಣೆ ನಡೆಸಲಾಗುತ್ತಿದ್ದು, ಈ ಪ್ರಕ್ರಿಯೆಯಲ್ಲಿ ಗೇಯ್ಟ್ ರೆಕಗ್ನಿಶನ್ ಕೂಡ ಸೇರಿಕೊಂಡಿದೆ.
150 ಮೀಟರುಗಳಷ್ಟು ದೂರದಿಂದಲೂ ವ್ಯಕ್ತಿಯನ್ನು ಈ ವ್ಯವಸ್ಥೆ ಗುರುತು ಹಿಡಿಯಬಹುದು. ಸಾಮಾನ್ಯವಾಗಿ ಫೇಶಿಯಲ್ ರಿಕಾಗ್ನಿಶನ್‌ನಲ್ಲಿ ಅತ್ಯಂತ ಹತ್ತಿರದ ಹಾಗೂ ಅಧಿಕ ರೆಸಾಲ್ಯುಶನ್ ಚಿತ್ರಗಳು ಅಗತ್ಯವಿರುತ್ತದೆ. ಇಲ್ಲವಾದಲ್ಲಿ ಫೇಶಿಯಲ್ ರೆಕಗ್ನಿಷನ್ ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ. ಅಷ್ಟೇ ಅಲ್ಲ, ಕಾಲು ಕುಂಟುತ್ತಾ ನಡೆದರೆ ಅಥವಾ ವಿಚಿತ್ರ ಭಂಗಿಯಲ್ಲಿ ನಡೆದಾಡಿದರೂ ಗೇಯ್ಟ್ ರೆಕಗ್ನಿಷನ್ ಸಾಫ್ಟ್ವೇರ್ ವ್ಯಕ್ತಿಯ ಗುರುತು ಹಿಡಿಯಬಲ್ಲದು ಎಂದು ಈ ಸಾಫ್ಟ್ವೇರ್ ಅಭಿವೃದ್ಧಿಪಡಿಸಿದ ವ್ಯಾಟ್ರಿಕ್ಸ್ ಕಂಪೆನಿಯ ಸಿಇಒ ಹುವಾಂಗ್ ಯಾಂಗ್‌ಝೆನ್
ಹೇಳಿದ್ದಾರೆ. ಸದ್ಯ ಫೇಶಿಯಲ್ ರೆಕಗ್ನಿಷನ್ ಅನ್ನು ಪೊಲೀಸರು ವ್ಯಾಪಕವಾಗಿ ಬಳಸುತ್ತಿದ್ದು,
ಮುಸ್ಲಿಂ ಬಾಹುಳ್ಯವಿರುವ ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ಈ ತಂತ್ರಜ್ಞಾನದ ಅಗತ್ಯ ಹೆಚ್ಚಿದೆ ಎಂದು ಪೊಲೀಸ್ ಇಲಾಖೆ ಹೇಳಿದೆ. ಜನರ ಮೇಲೆ ನಿಗಾ ವಹಿಸುವ ನಿಟ್ಟಿನಲ್ಲಿ ಈ ತಂತ್ರಜ್ಞಾನ ಬಳಕೆಯ ಬಗ್ಗೆ ಜನರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.