ನವದೆಹಲಿ/ಬೀಜಿಂಗ್: ಲಡಾಖ್ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ತನ್ನ ಪಟ್ಟನ್ನು ಸಡಿಲಿಕೆ ಮಾಡದೇ ಮಾತುಕತೆಯನ್ನು ಮುಂದುವರಿಸಿದೆ. ಏತನ್ಮಧ್ಯೆ ಕಳೆದ 58 ವರ್ಷಗಳಿಂದಲೂ ಚೀನಾ ತನ್ನ ಪ್ರಚಾರ ವ್ಯೂಹದಲ್ಲಿ ಮತ್ತು ಯುದ್ಧದ ವಿಚಾರಕ್ಕೆ ಸಂಬಂಧಿಸಿದಂತೆ ಭಾರತದ ಸೇನೆಯ ವಿರುದ್ಧ 1962ರ ಗಡಿ ವಿವಾದ ಮತ್ತು ಯುದ್ಧವನ್ನೇ ಪುನರುಚ್ಚರಿಸುತ್ತಿದೆ. ಆದರೆ ನಿಜಕ್ಕೂ ಅದು ಯಶಸ್ವಿಯಾಗುವುದಿಲ್ಲ ಎಂಬ ವಿಶ್ಲೇಷಣೆ ಇಲ್ಲಿದೆ…
ಈಗಲೂ 1962ರ ಮನಸ್ಥಿತಿಯಲ್ಲಿರುವ ಚೀನಾ ಸೇನಾಪಡೆ ಇದೀಗ ಪ್ಯಾಂಗಾಂಗ್ ತ್ಸೋ ಸರೋವರದ ಉತ್ತರ ಭಾಗದ ಗಾಲ್ವಾನ್ ನಲ್ಲಿ ವಾಸ್ತವ ಗಡಿ ರೇಖೆಯನ್ನು ಉಲ್ಲಂಘಿಸಿ ಫಿಂಗರ್ 4ರ ಪರ್ವತ ಪ್ರದೇಶದಲ್ಲಿ ಅತಿಕ್ರಮಣಕ್ಕೆ ಮುಂದಾಗಿದೆ. ಈ ವೇಳೆ ಎರಡೂ ಕಡೆ ಸಂಘರ್ಷಗಳು ನಡೆದಿದೆ. ಅಲ್ಲದೇ ಭಾರತೀಯ ಸೇನಾಪಡೆ ಪ್ರಮುಖ ಪ್ರದೇಶವನ್ನು ತನ್ನ ವಶಕ್ಕೆ ತೆಗೆದುಕೊಂಡು ಪಿಎಲ್ ಎಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿರುವುದಾಗಿ ವರದಿ ಹೇಳಿದೆ.
ಆಗಸ್ಟ್ 29-30ರಂದು ರಾತ್ರಿ ಕೂಡಾ ಪಿಎಲ್ ಎ ಪ್ಯಾಂಗಾಂಗ್ ತ್ಸೋ ದಕ್ಷಿಣ ಭಾಗದ ಬ್ಲ್ಯಾಕ್ ಟಾಪ್ ನಲ್ಲಿ ಯುದ್ಧ ವಿಮಾನವನ್ನು ಪರ್ವತ ಪ್ರದೇಶದಲ್ಲಿ ಇಳಿಸಲು ನಿರ್ಧರಿಸಿತ್ತು. ಪ್ರಮುಖ ಯುದ್ಧ ಟ್ಯಾಂಕ್ ಅನ್ನು ನಿಯೋಜಿಸುವ ಮೂಲಕ ಭಾರತೀಯರನ್ನು ಹೆದರಿಸುವ ತಂತ್ರಗಾರಿಕೆಯ ಮೊರೆ ಹೋಗಿತ್ತು. ಪೀಪಲ್ಸ್ ಲಿಬರೇಷನ್ ಆರ್ಮಿ ಪ್ರಚಾರಾರ್ಥವಾಗಿ ಭಾರತದ ಜತೆ ಯುದ್ಧಕ್ಕೆ ಸಿದ್ಧ ಎಂಬಂತೆ ಬಿಂಬಿಸಿಕೊಳ್ಳುತ್ತಿದೆ. ಆದರೆ ಇಂದಿನ ಯುದ್ಧ ಸ್ಥಿತಿ ಎರಡನೇ ಜಾಗತಿಕ ಯುದ್ಧದಲ್ಲಿ ಬಳಸಿದ ಶಸ್ತ್ರಾಸ್ತ್ರ ಅಥವಾ ಯುದ್ಧ ಟ್ಯಾಂಕ್ ಗಳು ಈಗಿಲ್ಲ ಎಂಬ ವಾಸ್ತವ ಚೀನಾಕ್ಕೆ ತಿಳಿದಂತಿಲ್ಲ ಎಂದು ಹೇಳಿದೆ.
ಇದನ್ನೂ ಓದಿ: ಭೂತದ ಬಾಯಲ್ಲಿ ಭಗವದ್ಗೀತೆ…ಬೇರೆ ದೇಶದ ಒಂದಿಂಚೂ ಜಾಗ ಕಬಳಿಸಿಲ್ಲ ಎಂದ ಚೀನಾ!
ಭಾರತ ಮತ್ತು ಚೀನಾ ನಡುವೆ ವಿದೇಶಾಂಗ ಸಚಿವರ ಮಟ್ಟದ ಮಾತುಕತೆಯಲ್ಲಿ ಲಡಾಖ್ ನಲ್ಲಿ ಸೇನೆಯನ್ನು ಹಿಂಪಡೆಯಲು ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಇದೊಂದು ತುಂಬಾ ಸೂಕ್ಷ್ಮ ವಿಚಾರವಾಗಿದ್ದರಿಂದ ಕಮಾಂಡರ್ ಮಟ್ಟದಲ್ಲಿ ಮಾತುಕತೆ ನಡೆದು ಇತ್ಯರ್ಥಗೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳಲಿದೆ. ಪರಸ್ಪರ ಭದ್ರತೆಯೊಂದಿಗೆ ಗಡಿಯಲ್ಲಿ ಸೇನೆಯನ್ನು ಹಿಂಪಡೆಯಬೇಕಾಗಿದೆಯೇ ವಿನಃ, ಭಾರತೀಯ ಸೇನೆ ಹಿಂದಕ್ಕೆ ಹೋದ ಕೂಡಲೇ ಚೀನಾ ಸೇನಾಪಡೆ ಖಾಲಿಯಾದ ಸ್ಥಳವನ್ನು ಆಕ್ರಮಿಸಿಕೊಳ್ಳಲು ಅವಕಾಶ ನೀಡುವುದಲ್ಲ. ಈ ನಿಟ್ಟಿನಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳುವುದು ಉತ್ತಮವಾದ ಆಯ್ಕೆಯಾಗಿದೆ.
1962ರ ಯುದ್ಧದ ಜಪ!
ಚೀನಾ ಇತ್ತೀಚೆಗೆ ಪದೇ, ಪದೇ 1962ರ ಯುದ್ಧದ ಬಗ್ಗೆಯೇ ಹೇಳುತ್ತಿದೆ. 1962ರಲ್ಲಿ ಭಾರತ ಚೀನಾ ವಿರುದ್ಧ ಸೋತಿತ್ತು ಹೌದು. ಆದರೆ ಪ್ರಸ್ತುತ ಭಾರತೀಯ ಸೇನೆ .303 ಲೀ ಎನ್ ಫೀಲ್ಡ್ ಬೋಲ್ಟ್ ಆ್ಯಕ್ಷನ್ ರೈಫಲ್ಸ್, ಲೈಟ್ ಮೆಶಿನ್ ಗನ್ಸ್, ಮೂರು ಇಂಚಿನ ಮೋರ್ಟಾರ್ಸ್, ಲಘು ಯುದ್ಧ ಟ್ಯಾಂಕ್ ಇಟ್ಟುಕೊಂಡು ಹೋರಾಡುವುದಿಲ್ಲ. ಆ ಕಾರಣಕ್ಕಾಗಿಯೇ ಇದು 1962ರ ಯುದ್ಧವಲ್ಲ ಎಂಬುದನ್ನು ತೋರಿಸಲು ಲಡಾಖ್ ಯುದ್ಧಭೂಮಿ ಪಾರದರ್ಶಕವಾಗಿಸಿ ಪ್ಯಾಂಗಾಂಗ್ ತ್ಸೋನ ದಕ್ಷಿಣ ಮತ್ತು ಉತ್ತರ ಸ್ಥಳಕ್ಕೆ ಭಾರೀ ಪ್ರಮಾಣದಲ್ಲಿ ಭಾರತೀಯ ಸೇನಾ ಪಡೆಯನ್ನು ನಿಯೋಜಿಸುವ ಮೂಲಕ ಬೀಜಿಂಗ್ ಗೆ ಸಂದೇಶ ರವಾನಿಸಲಾಗಿತ್ತು ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: 1962ರಲ್ಲಿ ಚೀನಾ ಭಾರತದ ಎಷ್ಟು ಜಾಗ ವಶಪಡಿಸಿಕೊಂಡಿತ್ತು ಗೊತ್ತಾ? ರಾಹುಲ್ ಗೆ ಖಡಕ್ ತಿರುಗೇಟು
ಪ್ರಸಕ್ತ ಯುದ್ಧದ ವಿಚಾರದಲ್ಲಿ ಭಾರತೀಯ ರಾಯಭಾರಿಗಳು ಮತ್ತು ಮಿಲಿಟರಿ ಕಮಾಂಡರ್ಸ್ ಗಳು ಸ್ಪಷ್ಟವಾದ ನಿಲುವು ಹೊಂದಿದ್ದಾರೆ. ಒಂದು ವೇಳೆ ಚೀನಾ ಸೇನಾಪಡೆ ಬಲವಂತವಾಗಿ ಮುನ್ನುಗ್ಗಿ ಯುದ್ಧಕ್ಕೆ ಕೈಹಾಕಿದರೆ…ಮೊದಲ 15 ನಿಮಿಷದಲ್ಲಿಯೇ ಉಭಯ ಕಡೆಯಲ್ಲಿಯೂ ಅಪಾರ ಪ್ರಾಣದ ಸಾವು-ನೋವು ಸಂಭವಿಸಲಿದೆ. ಇದು 1962ರ ಯುದ್ಧಕ್ಕಿಂತ ಭೀಕರವಾಗಲಿದೆ ಯಾಕೆಂದರೆ ಅತ್ಯಾಧುನಿಕ ಶಸ್ತ್ರಾಸ್ತ್ರ, ಲೇಸರ್ ಗೈಡೆಡ್ ಬಾಂಬ್ಸ್ ಮತ್ತು ಮಿಶುವಲ್ ರೇಂಜ್ ಮಿಸೈಲ್ಸ್ ಎರಡೂ ದೇಶಗಳ ಸೇನೆಯ ಬತ್ತಳಿಕೆಯಲ್ಲಿ ಸಿದ್ದವಾಗಿಯೇ ಇದೆ ಎಂದು ವಿವರಿಸಿದೆ.
ಜಗತ್ತಿಗೆ ಹೊಸ ಶಕ್ತಿಯ ಆಗಮನವಾಗಲಿದೆ ಎಂಬುದನ್ನು ತೋರಿಸಲು ಚೀನಾ ಆಡಳಿತ ಕುರುಡಾಗಿ ಮುನ್ನುಗ್ಗಿ ತನ್ನ ಗುರಿ ಸಾಧಿಸಲಿದ್ದೇವೆ ಎಂಬ ಭ್ರಮೆಯಲ್ಲಿದ್ದರೆ…ಭಾರತ ಕೂಡಾ ಚೀನಾ ಸೇನೆಯಲ್ಲಿ ಸಮರ್ಥವಾಗಿ ಎದುರಿಸಲಿದೆ ಎಂಬುದನ್ನು ಯುದ್ಧಭೂಮಿಯಲ್ಲಿ ಸಾಬೀತುಪಡಿಸಲಿದ್ದೇವೆ ಎಂದು ಹೇಳಿದೆ.