Advertisement
ಈ ವಿಚಾರದಲ್ಲಿ ಎರಡೂ ಸರಕಾರಗಳ ನಡುವೆ, ಸೇನೆಗಳ ನಡುವೆ ಹಲವು ಸುತ್ತಿನ ಮಾತುಕತೆಗಳೂ ನಡೆದಿವೆಯಾದರೂ ಶೀಘ್ರದಲ್ಲೇ ಬಿಕ್ಕಟ್ಟು ಬಗೆಹರಿಯುವ ಲಕ್ಷಣಗಳು ಕಾಣಿಸುತ್ತಿಲ್ಲ.
Related Articles
Advertisement
ಕಾಲಕಾಲಕ್ಕೆ ಭಾರತದೊಂದಿಗೆ ಗಡಿ ವಿಚಾರದಲ್ಲಿ ಕುತಂತ್ರದ ನಡೆಗಳನ್ನು ಇಡುತ್ತಾ ಬರುತ್ತಿದ್ದ ಚೀನ ಈ ಬಾರಿಯಂತೂ ಹದ್ದುಮೀರುತ್ತಿದೆ. ಕುತಂತ್ರದಿಂದ ನಮ್ಮ ಸೈನಿಕರ ಮೇಲೆ ದಾಳಿ ಮಾಡಿ ಅದಕ್ಕೆ ತಾನು ಭಾರೀ ಬೆಲೆಯನ್ನೂ ತೆತ್ತರೂ ಸುಮ್ಮನೆ ಕೂಡುತ್ತಿಲ್ಲ. ಈ ವಿಚಾರವಾಗಿ
ಮಾತನಾಡಿದ ರಕ್ಷಣ ಸಚಿವರು, ನಮ್ಮ ಪಡೆಗಳು ಚೀನಕ್ಕೆ ಮರೆಯಲಾಗದ ಪೆಟ್ಟು ನೀಡಿವೆ ಎಂದೂ ಹೇಳಿದ್ದಾರೆ.
ಈ ಬಾರಿಯಂತೂ ಭಾರತದ ಎದಿರೇಟುಗಳು ಚೀನಕ್ಕೆ ಭಾರೀ ನೋವು ಕೊಡುತ್ತಿವೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಸಂಘರ್ಷದ ವೇಳೆ ತನ್ನ 45ಕ್ಕೂ ಅಧಿಕ ಸೈನಿಕರು ಮೃತಪಟ್ಟರೂ ಚೀನ ಈ ವಿಚಾರ ತನ್ನ ನಾಗರಿಕರಿಗೆ ತಲುಪದಂತೆ ಮುಚ್ಚಿಟ್ಟಿತು. ಭಾರತವು ಗಡಿರೇಖೆಯುದ್ದಕ್ಕೂ ನಿರ್ಮಿಸುತ್ತಿರುವ ರಸ್ತೆಗಳು, ಕೈಗೊಳ್ಳುತ್ತಿರುವ ಅಭಿವೃದ್ಧಿ ಕಾರ್ಯಗಳು ಡ್ರ್ಯಾಗನ್ ರಾಷ್ಟ್ರದ ನಿದ್ದೆಗೆಡಿಸಿರುವುದು ಇದಕ್ಕೆ ಒಂದು ಕಾರಣವಾದರೆ, ಕೋವಿಡ್ ವಿರುದ್ಧದ ಹೋರಾಟದಲ್ಲಿ ಜಗತ್ತು ವ್ಯಸ್ತವಾಗಿರುವ ಸಮಯದಲ್ಲಿ ತನ್ನ ವಿಸ್ತರಣಾಕಾಂಕ್ಷೆಯನ್ನು ಈಡೇರಿಸಿಕೊಳ್ಳಬೇಕು ಎನ್ನುವ ಅದರ ದುರ್ಬುದ್ಧಿ ಈ ಬೆಳವಣಿಗೆಗೆ ಮತ್ತೂಂದು ಕಾರಣ.
ಚೀನ ಕೇವಲ ತನ್ನ ಸೈನ್ಯದ ಮೂಲಕ ಮಾತ್ರವಲ್ಲ, ವಿವಿಧ ರೂಪದಲ್ಲೂ ಭಾರತದ ವಿರುದ್ಧ ಸಂಚು ರೂಪಿಸುತ್ತಿರುವುದರಿಂದಾಗಿ ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ದಿಟ್ಟ ಕ್ರಮಗಳನ್ನು ಕೈಗೊಳ್ಳುತ್ತಿದೆ, ಮುಂದೆಯೂ ಕೈಗೊಳ್ಳಬೇಕಿದೆ. ಭಾರತದ ಬಳಕೆದಾರರ ಮಾಹಿತಿ ಕದಿಯುತ್ತಿರುವ ಅನೇಕ ಚೀನಿ ಆ್ಯಪ್‌ಗಳನ್ನು ನಿಷೇಧಿಸಿದ್ದು ಈ ನಿಟ್ಟಿನಲ್ಲಿ ಮೊದಲ ಯಶಸ್ವಿ ಹೆಜ್ಜೆ. ಆದಾಗ್ಯೂ ಈ ಕಂಪೆನಿಗಳು, ತಾವು ಚೀನದೊಂದಿಗೆ ಭಾರತೀಯರ ಮಾಹಿತಿಯನ್ನು ಹಂಚಿಕೊಳ್ಳುತ್ತಿಲ್ಲ ಎಂದು ಎಷ್ಟೇ ವಾದಿಸಿದರೂ, ವಾಸ್ತವವೇ ಬೇರೆ ಎನ್ನುವುದು ಭಾರತಕ್ಕೆ ಸ್ಪಷ್ಟವಾಗಿ ಅರಿವಿದೆ.
ಚೀನಿ ಸರಕಾರದ ಜತೆ ಸಂಪರ್ಕದಲ್ಲಿರುವ ಜೆನ್‌ಹುವಾ ಟಾಡಾ ಇನ್ಫಾರ್ಮೇಷನ್ ಟೆಕ್ನಾಲಜಿ ಕೋ ಲಿಮಿಟೆಡ್ ಎನ್ನುವ ಕಂ±ನಿಯು, ಭಾರತದ ಸುಮಾರು 10 ಸಾವಿರಕ್ಕೂ ಅಧಿಕ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಡೇಟಾ ಕಲೆಹಾಕುತ್ತಿದೆ ಎನ್ನುವ ಸತ್ಯ ಕೆಲದಿನಗಳ ಹಿಂದೆ ಬಯಲಾಗಿದೆ. ಪ್ರಧಾನಿ, ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ಅವರ ಕುಟುಂಬಸ್ಥರು, ಮಿಲಿಟರಿ, ಉದ್ಯಮಿಗಳು, ಸಂಸದರು ಹಾಗೂ ಕೆಲವು ಪಾತಕಿಗಳ ಆನ್‌ಲೈನ್ ಡೇಟಾವನ್ನೂ ಈ ಸಂಸ್ಥೆ ಕಲೆಹಾಕಿದೆಯಂತೆ.
ಭಾರತದ ಸೈಬರ್ ಶಕ್ತಿ ಎಷ್ಟು ಬಲಿಷ್ಠವಾಗಿದೆ ಎನ್ನುವ ವಿಶ್ಲೇಷಣೆಯನ್ನೂ ಈ ಸಂಸ್ಥೆ ಮಾಡುತ್ತಿದೆ ಎಂದು ವರದಿಯಾಗಿದೆ. ಇದೆಲ್ಲವನ್ನೂ ಗಮನಿಸಿದಾಗ, ಚೀನ ಭಾರತವನ್ನು ತನ್ನ ಪ್ರಬಲ ಪ್ರತಿಸ್ಪರ್ಧಿ ಎಂದು ಪರಿಗಣಿಸುತ್ತದೆ ಎನ್ನುವುದು ಸ್ಪಷ್ಟವಾಗುತ್ತದೆ. ಈ ಕಾರಣಕ್ಕಾಗಿಯೇ, ಗಡಿ ಭಾಗದಲ್ಲಷ್ಟೇ ಅಲ್ಲದೇ ಈ ರೀತಿಯ ಚೀನದ ಡಿಜಿಟಲ್ ಕಳ್ಳಮಾರ್ಗಗಳಿಗೆ ಮತ್ತಷ್ಟು ಬಲವಾದ ಪೆಟ್ಟುಕೊಡಲು ಭಾರತ ಮುಂದಾಗಬೇಕಿರುವ ಸಮಯವಿದು.