Advertisement

ತಾಲಿಬಾನ್‌ಗೆ ಚೀನ ನೆರವು ಘೋಷಣೆ! 

12:28 AM Aug 25, 2021 | Team Udayavani |

ಕಾಬೂಲ್‌/ಹೊಸದಿಲ್ಲಿ: “ಅಫ್ಘಾನಿಸ್ಥಾನವನ್ನು ಅಮೆರಿಕ ಅರ್ಧಕ್ಕೇ ಕೈಬಿಟ್ಟು ಹೋಗಬಾರದಿತ್ತು’ ಎಂಬ ಹೇಳಿಕೆ ನೀಡಿ “ಅಮಾಯಕ’ನಂತೆ ಬಿಂಬಿಸಿಕೊಂಡಿದ್ದ ಚೀನದ ನಿಜ ಬಣ್ಣ ಮಂಗಳವಾರ ಬಯಲಾಗಿದೆ. ಅಫ್ಘಾನ್‌ನ ಹೊಸ ತಾಲಿಬಾನ್‌ ಆಡಳಿತಕ್ಕೆ ಸಂಪೂರ್ಣ ಹಣಕಾಸು ನೆರವನ್ನು ನೀಡುತ್ತೇವೆ ಎಂದು ಚೀನ ಸ್ವತಃ  ಘೋಷಿಸಿಕೊಂಡಿದೆ.

Advertisement

ಎಲ್ಲ ದೇಶಗಳೂ ಅಫ್ಘಾನ್‌ಗೆ ನೀಡುತ್ತಿದ್ದ  ನೆರವನ್ನು ಸ್ಥಗಿತಗೊಳಿಸುತ್ತಿರುವ ನಡುವೆಯೇ ಚೀನ ಆರ್ಥಿಕ ನೆರವು ಘೋಷಿಸುವ ಮೂಲಕ ತನ್ನ ಬೇಳೆ ಬೇಯಿಸಲು ಮುಂದಾಗಿದೆ. ಜತೆಗೆ, ಅಫ್ಘಾನ್‌ನಲ್ಲಿ ತನ್ನ ಪ್ರಾಬಲ್ಯ ವೃದ್ಧಿಸಿಕೊಂಡು, ಖನಿಜ ಸಂಪತ್ತನ್ನು ತನ್ನದಾಗಿಸಿಕೊಳ್ಳುವ ಸಂಚು ಕೂಡ ಈ ಘೋಷಣೆ ಹಿಂದೆ ಅಡಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಯುದ್ಧಪೀಡಿತ ದೇಶದ ಕುರಿತು ಮಂಗಳವಾರ ಮಾತನಾಡಿದ ಚೀನ ವಿದೇಶಾಂಗ ಇಲಾಖೆ ವಕ್ತಾರ ವಾಂಗ್‌ ವೆನ್‌ಬಿನ್‌, “ಅಫ್ಘಾನ್‌ ಬಿಕ್ಕಟ್ಟಿಗೆ ಅಮೆರಿಕವೇ ಕಾರಣ. ಹಾಗೆಂದು ನಾವು  ಸುಮ್ಮನಿರಲು ಆಗುವುದಿಲ್ಲ. ನಾವು ನೀಡುವ ಹಣಕಾಸಿನ ನೆರವು ಆ ದೇಶದಲ್ಲಿ ಸಕಾರಾತ್ಮಕ ಪಾತ್ರ ವಹಿಸಲಿದೆ. ಅಫ್ಘಾನ್‌ ಜನರೊಂದಿಗೆ ಚೀನ ಯಾವತ್ತೂ ಸ್ನೇಹಮಯ ಬಾಂಧವ್ಯ ಹೊಂದಿದೆ’ ಎಂದು ಹೇಳಿದ್ದಾರೆ.

ತಾಲಿಬಾನ್‌ ಅಲ್ಲಿ ಎಲ್ಲರನ್ನೊಳಗೊಂಡ, ಉತ್ತಮ ದೇಶೀಯ ಹಾಗೂ ವಿದೇಶಾಂಗ ನೀತಿಯುಳ್ಳ ಸರಕಾರವನ್ನು ರಚಿಸಲಿ ಎಂದು ನಾವು ಆಶಿಸುತ್ತೇವೆ. ಅಫ್ಘಾನಿಸ್ಥಾನದ ಮರುನಿರ್ಮಾಣಕ್ಕೆ ನಾವು ಸದಾ ಸಿದ್ಧ ಎಂದೂ ಅವರು ಹೇಳಿದ್ದಾರೆ.

ಸಿಐಎ ನಿರ್ದೇಶಕ ರಹಸ್ಯ ಮಾತುಕತೆ: ಅಮೆರಿಕದ ಉನ್ನತ ಬೇಹುಗಾರಿಕಾ ಸಂಸ್ಥೆ ಸಿಐಎ ನಿರ್ದೇಶಕ ವಿಲಿಯಂ ಜೆ.ಬರ್ನ್ಸ್ ಅವರು ಸೋಮವಾರ ಅಫ್ಘಾನ್‌ನಲ್ಲಿ ತಾಲಿಬಾನ್‌ ನಾಯಕ ಅಬ್ದುಲ್‌ ಘನಿ ಬರಾದಾರ್‌ನೊಂದಿಗೆ ರಹಸ್ಯ ಮಾತುಕತೆ ನಡೆಸಿರುವುದು ಬೆಳಕಿಗೆ ಬಂದಿದೆ. ದೇಶವು ಉಗ್ರರ ವಶವಾದ ಬಳಿಕ ಅಮೆರಿಕದ ಅಧಿಕಾರಿಗಳು ಮತ್ತು ಉಗ್ರರ ನಡುವೆ ನಡೆದ ಮೊದಲ ಮುಖಾಮುಖಿ ಇದಾಗಿದೆ. ಅಮೆರಿಕ ನಾಗರಿಕರ ಸ್ಥಳಾಂತರಕ್ಕೆ ಉಗ್ರರು ಆ.31ರ ಗಡುವು ವಿಧಿಸಿದ್ದು, ಅದರ ವಿಸ್ತರಣೆ ಕುರಿತು ಚರ್ಚೆ ನಡೆದಿರುವ ಸಾಧ್ಯತೆಯಿದೆ.

Advertisement

ಆಹಾರ, ಇಂಧನ ಪೂರೈಕೆ ಸ್ಥಗಿತ: ತಾಲಿಬಾನ್‌ ವಿರುದ್ಧ ತೀವ್ರ ಪ್ರತಿರೋಧ ಒಡ್ಡಿರುವ ಅಂದರಾಬ್‌ ಕಣಿವೆ ಪ್ರದೇಶಕ್ಕೆ ಉಗ್ರರು ಆಹಾರ, ಇಂಧನದಂತಹ ಅಗತ್ಯ ವಸ್ತುಗಳ ಪೂರೈಕೆಯನ್ನೇ ಸ್ಥಗಿತಗೊಳಿಸಿದ್ದಾರೆ ಎಂದು ಅಫ್ಘಾನ್‌ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್‌ ಆರೋಪಿಸಿದ್ದಾರೆ. ಜತೆಗೆ, ಉಗ್ರರು ನಿರಂತರವಾಗಿ ಮಾನವ ಹಕ್ಕುಗಳನ್ನು ಉಲ್ಲಂ ಸುತ್ತಿದ್ದಾರೆ. ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರನ್ನು ಅಪಹರಿಸಿ, ಅವರನ್ನೇ ಗುರಾಣಿಯಾಗಿಸಿಕೊಂಡು ಇಲ್ಲಿನ ಮನೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದೂ ಟ್ವೀಟ್‌ ಮಾಡಿದ್ದಾರೆ.

ಮೋದಿ- ಪುತಿನ್‌ ಚರ್ಚೆ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ರಷ್ಯಾ ಅಧ್ಯಕ್ಷ ಪುತಿನ್‌ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಅಫ್ಘಾನ್‌ ಪರಿಸ್ಥಿತಿ ಕುರಿತು ಚರ್ಚಿಸಿದ್ದಾರೆ.

ನೆರೆರಾಷ್ಟ್ರಗಳಿಗೆ ಅಪಾಯ ಆಗದಿರಲಿ: ಭಾರತ :

ಅಫ್ಘಾನಿಸ್ಥಾನದ ಪರಿಸ್ಥಿತಿಯು ನೆರೆರಾಷ್ಟ್ರಗಳಿಗೆ ಅಪಾಯ ಉಂಟುಮಾಡದಿರಲಿ ಮತ್ತು ಲಷ್ಕರ್‌, ಜೈಶ್‌ನಂತಹ ಉಗ್ರ ಸಂಘಟನೆಗಳು ಅಫ್ಘಾನ್‌ ನೆಲವನ್ನು ಬಳಸಿಕೊಂಡು ಬೇರೆ ದೇಶಗಳ ಮೇಲೆ ದಾಳಿ ನಡೆಸ ದಿರಲಿ ಎಂದು ಆಶಿಸುವುದಾಗಿ ಭಾರತ ಹೇಳಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ವಿಶೇಷ ಸಭೆಯನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದ ಜಿನೇವಾದಲ್ಲಿ ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ಇಂದ್ರಮಣಿ ಪಾಂಡೆ, ಅಫ್ಘಾನ್‌ನಲ್ಲಿ ಅತ್ಯಂತ ಗಂಭೀರ ಮಾನವತಾ ಬಿಕ್ಕಟ್ಟು ಸೃಷ್ಟಿಯಾಗಿದೆ. ಅಲ್ಲಿನ ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿವೆ. ಇದು ಕಳವಳಕಾರಿ ಎಂದು ಹೇಳಿದ್ದಾರೆ.

“ಆಪರೇಷನ್‌  ದೇವಿ ಶಕ್ತಿ’ :

ಅಫ್ಘಾನ್‌ನಲ್ಲಿ ಸಿಲುಕಿದ್ದವರನ್ನು ರಕ್ಷಿಸಿ ಭಾರತಕ್ಕೆ ಕರೆತರುವ ಕಾರ್ಯಾಚರಣೆಗೆ “ಆಪರೇಷನ್‌ ದೇವಿಶಕ್ತಿ’ ಎಂದು ಹೆಸರಿಡಲಾಗಿದ್ದು, ಈವರೆಗೆ ಸುಮಾರು 800 ಮಂದಿಯನ್ನು ಸ್ಥಳಾಂತರಿಸಲಾಗಿದೆ. ಮಂಗಳವಾರ ದಿಲ್ಲಿಗೆ ಮತ್ತೆ 78 ಮಂದಿಯ ತಂಡ ಬಂದಿಳಿದಿದ್ದು, ಅದರ ಬೆನ್ನಲ್ಲೇ ಟ್ವೀಟ್‌ ಮಾಡಿರುವ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಈ ವಿಚಾರ ತಿಳಿಸಿದ್ದಾರೆ. ಇದೇ ವೇಳೆ, ಅಫ್ಘಾನ್‌ನಿಂದ ಬಂದವರು 14 ದಿನ ಸಾಂಸ್ಥಿಕ ಕ್ವಾರಂ ಟೈನ್‌ಗೆ ಒಳಗಾಗಬೇಕಾದದ್ದು ಕಡ್ಡಾಯ ಎಂದು ಸರಕಾರ ಘೋಷಿಸಿದೆ.

ತಾಲಿಬಾನ್‌ ಬಗ್ಗೆ “ಭರವಸೆ’ ವ್ಯಕ್ತಪಡಿಸಿದ ಪಿಎಫ್ಐ! :

ಅಮೆರಿಕದ ಪಡೆಯ ವಿರುದ್ಧ “ಪ್ರತಿರೋಧ’ವೊಡ್ಡಿದ ತಾಲಿಬಾನ್‌, ಅಫ್ಘಾನಿಸ್ಥಾನದಲ್ಲಿ ಉತ್ತಮ ಆಡಳಿತ ನೀಡುವ “ಭರವಸೆ’ಯಿದೆ ಎಂದು ಕೇರಳದ ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ (ಪಿಎಫ್ಐ) ಹೇಳಿದೆ. ವಿಯೆಟ್ನಾಂ ಮತ್ತು ಬೊಲಿವಿಯಾದಲ್ಲೂ ಅಮೆರಿಕ ಪಡೆಗಳ ವಿರುದ್ಧ ಇದೇ ಮಾದರಿಯ ಪ್ರತಿರೋಧ ವ್ಯಕ್ತವಾಗಿತ್ತು. ತಾಲಿಬಾನ್‌ ಅನ್ನು ನಾವು ಪೂರ್ವಗ್ರಹದಿಂದ ನೋಡಬಾರದು. ಪಾಕಿಸ್ಥಾನವನ್ನು ಅಫ್ಘಾನ್‌ನಿಂದ ದೂರವಿಡಬೇಕೆಂದರೆ ಭಾರತವು ತಾಲಿಬಾನ್‌ ಜತೆ ರಾಜತಾಂತ್ರಿಕ ಸಂಬಂಧವನ್ನು ಆರಂಭಿಸಬೇಕು ಎಂದು ಪಿಎಫ್ಐ ನಾಯಕ, ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪರಪ್ಪುರತ್ತು ಕೋಯಾ ಹೇಳಿದ್ದಾರೆ ಎಂದು ನ್ಯೂಸ್‌18 ಸುದ್ದಿವಾಹಿನಿ ವರದಿ ಮಾಡಿದೆ.

ಬಯೋಮೆಟ್ರಿಕ್‌ ದತ್ತಾಂಶ ಉಗ್ರರ ಕೈಯ್ಯಲ್ಲಿ! :

2007ರಲ್ಲಿ ಅಮೆರಿಕ ಸೇನಾಪಡೆಯು “ಹ್ಯಾಂಡ್‌ಹೆಲ್ಡ್‌ ಇಂಟರ್‌ಏಜೆನ್ಸಿ ಐಡೆಂಟಿಟಿ ಡಿಟೆಕ್ಷನ್‌ ಈಕ್ವಿಪ್‌ಮೆಂಟ್‌’ ಎಂಬ ಸಾಧನದ ಮೂಲಕ ಅಫ್ಘಾನಿಸ್ಥಾನದ ಸುಮಾರು 15 ಲಕ್ಷ ಮಂದಿಯ ಕಣ್ಣು, ಬೆರಳಚ್ಚು ಮತ್ತು ಮುಖದ ಸ್ಕ್ಯಾನ್‌ ಅನ್ನು ಸಂಗ್ರಹಿಸಿಟ್ಟಿತ್ತು. ತದನಂತರ ಯುದ್ಧದ ಸಮಯದಲ್ಲಿ ಅಮೆರಿಕ ಸೇನೆಗೆ ನೆರವಾದ ಅಫ್ಘಾನ್‌ ನಾಗರಿಕರ ವಿವರಗಳನ್ನೂ ಈ ಸಾಧನದಲ್ಲೇ ಸಂಗ್ರಹಿಸಿಡಲಾಗಿತ್ತು. ಇದು ಈಗ ನಾಗರಿಕರಿಗೆ ಶಾಪವಾಗಿ ಪರಿಣಮಿಸಿದೆ. ಏಕೆಂದರೆ ಅಮೆರಿಕಕ್ಕೆ ನೆರವಾದ ಎಲ್ಲ ನಾಗರಿಕರ ದತ್ತಾಂಶವುಳ್ಳ ಈ ಸಾಧನ ತಾಲಿಬಾನ್‌ ಉಗ್ರರ ವಶವಾಗಿರುವ ಸಾಧ್ಯತೆಯಿದೆ. ಇದನ್ನು ಬಳಸಿಕೊಂಡು ಉಗ್ರರು ನಾಗರಿಕರನ್ನು ಟಾರ್ಗೆಟ್‌ ಮಾಡುವ ಭೀತಿ ಶುರುವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next