Advertisement

ಕೊರೊನಾ ಭೀತಿ: ಚೀನದಲ್ಲಿರುವ ಭಾರತೀಯರನ್ನು ಕರೆತರಲು ಸಿದ್ಧತೆ : ಇಂದು ಏರ್‌ಲಿಫ್ಟ್ ಸಾಧ್ಯತೆ

07:15 PM Mar 20, 2020 | Hari Prasad |

ಹೊಸದಿಲ್ಲಿ/ಬೀಜಿಂಗ್‌: ಕೊರೊನಾ ವೈರಸ್‌ನ ಕೇಂದ್ರ ಸ್ಥಾನವಾದ ಚೀನದ ವುಹಾನ್‌ ನಗರದಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಸುರಕ್ಷಿತವಾಗಿ ಕರೆತರಲು ಕೇಂದ್ರ ಸರಕಾರ ಸಿದ್ಧತೆ ಆರಂಭಿಸಿದೆ.

Advertisement

‘ಶುಕ್ರವಾರ ಸಂಜೆಯಿಂದ ಭಾರತೀಯರನ್ನು ಏರ್‌ಲಿಫ್ಟ್ ಮಾಡಲು ನಾವು ಸಿದ್ಧತೆ ನಡೆಸುತ್ತಿದ್ದೇವೆ. ವುಹಾನ್‌ ಮತ್ತು ಸುತ್ತಮುತ್ತಲಿನ ಭಾರತೀಯರನ್ನು ಅವರ ಸಮ್ಮತಿಯ ಮೇರೆಗೆ ಸ್ವದೇಶಕ್ಕೆ ಕರೆತರಲಿದ್ದೇವೆ’ ಎಂಬ ಭಾರತೀಯ ರಾಯಭಾರ ಕಚೇರಿಯ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ಅಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಹಾಗೂ ವೃತ್ತಿಪರರಿಗೆ ದೊಡ್ಡಮಟ್ಟಿನ ರಿಲೀಫ್ ನೀಡಿದೆ.

ಇದೇ ವೇಳೆ, ಭಾರತಕ್ಕೆ ಆಗಮಿಸಿದರೂ ನೀವು 14 ದಿನಗಳ ಕಾಲ ನಾವು ಸೂಚಿಸಿದ ನಗರದ ಆಸ್ಪತ್ರೆಯಲ್ಲಿ ತೀವ್ರ ನಿಗಾದಲ್ಲಿ ಇರಬೇಕಾಗುತ್ತದೆ ಎಂಬ ಷರತ್ತನ್ನೂ ಅಲ್ಲಿರುವವರಿಗೆ ರಾಯಭಾರ ಕಚೇರಿ ನೀಡಿದೆ ಎಂದು ಹೇಳಲಾಗಿದೆ. ಭಾರತ ಮಾತ್ರವಲ್ಲದೆ, ಅಮೆರಿಕ, ಫ್ರಾನ್ಸ್‌, ಜಪಾನ್‌, ದ.ಕೊರಿಯಾ ಕೂಡ ತಮ್ಮ ತಮ್ಮ ನಾಗರಿಕರನ್ನು ಚೀನದಿಂದ ಏರ್‌ಲಿಫ್ಟ್ ಮಾಡುವ ಪ್ರಕ್ರಿಯೆ ಆರಂಭಿಸಿವೆ.

ಸಾವಿನ ಸಂಖ್ಯೆ 170: ಚೀನದಲ್ಲಿ ಸಾವಿನ ಸಂಖ್ಯೆ ಏರುತ್ತಲೇ ಇದ್ದು, ಗುರುವಾರ ಮೃತರ ಸಂಖ್ಯೆ 170ಕ್ಕೇರಿದೆ. 7,711 ಮಂದಿಗೆ ಸೋಂಕಿರುವುದು ದೃಢಪಟ್ಟಿದೆ. 12 ಸಾವಿರಕ್ಕೂ ಅಧಿಕ ಮಂದಿಯಲ್ಲಿ ರೋಗಲಕ್ಷಣ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದೇ ವೇಳೆ, ಟಿಬೆಟ್‌ನಲ್ಲೂ ಮೊದಲ ಪ್ರಕರಣ ಪತ್ತೆಯಾಗಿದ್ದು, ಚೀನದ ಹ್ಯುಬೆ ಪ್ರಾಂತ್ಯದಿಂದ ಟಿಬೆಟ್‌ಗೆ ತೆರಳಿದ್ದ 34 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ. ಈ ನಡುವೆ, ಮಲೇಷ್ಯಾದಲ್ಲಿ ತ್ರಿಪುರಾದ ವ್ಯಕ್ತಿಯೊಬ್ಬರು ಕೊರೊನಾವೈರಸ್‌ಗೆ ಬಲಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗೌಪ್ಯ ಪ್ರಾಣಿಯಿಂದ: ಕೊರೊನಾ ವೈರಸ್‌ನ ಮೂಲ ಬಾವಲಿ ಅಥವಾ ಹಾವುಗಳು ಇರಬಹುದು ಎಂಬ ಸಂಶಯಗಳ ನಡುವೆಯೂ, ವುಹಾನ್‌ನ ಸೀಫ‌ುಡ್‌ ಮಾರ್ಕೆಟ್‌ನಲ್ಲಿ ಯಾವುದೋ ಒಂದು ಗೌಪ್ಯ ಪ್ರಾಣಿಯಿಂದ ಇದು ಹರಡಿರುವ ಸಾಧ್ಯತೆಯಿದೆ ಎಂಬ ವಾದವೊಂದು ಹುಟ್ಟಿಕೊಂಡಿದೆ.

Advertisement

ವೈರಸ್‌ನ ಮೂಲ ಬಾವಲಿಯಾಗಿದ್ದರೂ, ಮಾರುಕಟ್ಟೆಯಲ್ಲಿ ಮಾರಾಟವಾದ ಯಾವುದೋ ಒಂದು ಪ್ರಾಣಿಯಿಂದ ಅದು ಮನುಷ್ಯನ ದೇಹಕ್ಕೆ ಸೇರಿರಬಹುದು ಎಂದು ಸಂಶೋಧಕರ ತಂಡವೊಂದು ಅಭಿಪ್ರಾಯಪಟ್ಟಿದೆ. ಈ ನಡುವೆ, ವೈರಸ್‌ ಹರಡುವ ಭೀತಿಯಿಂದ ಚೀನದೊಂದಿಗಿನ ಗಡಿಯನ್ನು ಮುಚ್ಚುತ್ತಿರುವುದಾಗಿ ರಷ್ಯಾ ಗುರುವಾರ ಘೋಷಿಸಿದೆ. ಜತೆಗೆ ಚೀನದ ನಾಗರಿಕರಿಗೆ ಎಲೆಕ್ಟ್ರಾನಿಕ್‌ ವೀಸಾ ವಿತರಣೆಯನ್ನೂ ಸ್ಥಗಿತಗೊಳಿಸಿದೆ.

ವೈರಸ್‌ ಬಗ್ಗೆ ಎಚ್ಚರಿಸಿದ್ದವರನ್ನೇ ಜೈಲಿಗೆ ತಳ್ಳಿದರು!
ಚೀನದಲ್ಲಿ ಕೊರೊನಾ ವೈರಸ್‌ಗೆ ಸಂಬಂಧಿಸಿದ ಹೊಸ ವಿಚಾರವೊಂದು ಬೆಳಕಿಗೆ ಬಂದಿದೆ. ಜ.1ರಂದೇ ಇಲ್ಲಿನ ವೈದ್ಯರೊಬ್ಬರು ‘ಸಾರ್ಸ್‌ ಮಾದರಿಯ ವೈರಸ್‌ವೊಂದು ನಗರದಲ್ಲಿ ಹಬ್ಬುತ್ತಿದೆ’ ಎಂಬ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಅಲ್ಲದೆ, ‘ನ್ಯುಮೋನಿಯಾ ಇರುವಂಥ ಹಲವು ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇವರೆಲ್ಲರೂ ವುಹಾನ್‌ನ ಮೀನು ಮಾರುಕಟ್ಟೆಯಿಂದ ಬಂದವರು’ ಎಂದೂ ಆ ವೈದ್ಯ ಹೇಳಿದ್ದರು. ಒಟ್ಟು 8 ಮಂದಿ ಈ ಸಂದೇಶವನ್ನು ಶೇರ್‌ ಮಾಡಿದ್ದರು.

ಆದರೆ, ಇದು ಜನರಲ್ಲಿ ಭೀತಿ ಹುಟ್ಟಿಸಲು ಸೃಷ್ಟಿಸಿರುವ ವದಂತಿ ಎಂದು ಆರೋಪಿಸಿದ್ದ ಪೊಲೀಸರು, ಆ ವೈದ್ಯ ಸೇರಿದಂತೆ 8 ಮಂದಿಯನ್ನು ಬಂಧಿಸಿ, ಕಿರುಕುಳ ನೀಡಿದ್ದರು. ಆದರೆ, ಆ ವೈದ್ಯ ಹೇಳಿದ್ದು ಸತ್ಯವೇ ಆಗಿತ್ತು. ಸೋಂಕಿತರ ಪೈಕಿ ಶೇ.90 ರಷ್ಟು ಮಂದಿ ಅದೇ ಮೀನು ಮಾರುಕಟ್ಟೆಯೊಂದಿಗೆ ನಂಟು ಹೊಂದಿದವರೇ ಆಗಿದ್ದಾರೆ.

ಈಗ ಪೊಲೀಸರನ್ನು ಚೀನದ ಸುಪ್ರೀಂ ಪೀಪಲ್ಸ್‌ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ‘ಆ ವದಂತಿಯನ್ನೇ ಜನರು ನಂಬಿದ್ದರೂ ಸಾಕಿತ್ತು. ಜನರು ಎಚ್ಚೆತ್ತು ಮಾಸ್ಕ್ ಧರಿಸಲು ಆರಂಭಿಸುತ್ತಿದ್ದರು. ಮಾರುಕಟ್ಟೆಯ ಬಳಿ ಸುಳಿಯುತ್ತಿರಲಿಲ್ಲ. ಎಷ್ಟೋ ಜೀವಗಳು ಉಳಿಯುತ್ತಿದ್ದವು’ ಎಂದು ಕೋರ್ಟ್‌ ಹೇಳಿದೆ.

ಬಿಕೋ ಎನ್ನುತ್ತಿದೆ ಮಕಾವು ಜೂಜು ಮಾರುಕಟ್ಟೆ
ಕೊರೊನಾ ವೈರಸ್‌ ಚೀನ ಮತ್ತು ಹಾಂಕಾಂಗ್‌ಗೆ ದಾಂಗುಡಿ ಇಟ್ಟ ಅನಂತರ ವಿಶ್ವದಲ್ಲಿಯೇ ಅತ್ಯಂತ ಜನನಿಬಿಡ ಜೂಜಿನ ಮಾರುಕಟ್ಟೆ ಮಕಾವುನಲ್ಲಿ ಯಾರೂ ಇಲ್ಲ. ಇದರಿಂದಾಗಿ ಕ್ಯಾಸಿನೋ ನಿರ್ವಹಣೆ ಮಾಡುವವರ ಆದಾಯದಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಈ ಸ್ಥಳದಲ್ಲಿನ ವಿಶ್ವ ಪ್ರಸಿದ್ಧ ಮಳಿಗೆಗಳು-ಮಾಲ್‌ಗ‌ಳಲ್ಲಿ ಯಾರೂ ಇರಲಿಲ್ಲ.

ವೈರಸ್‌ ಭೀತಿಯ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ವಹಿವಾಟು ಸ್ಥಗಿತಗೊಂಡಿದೆ. ವೈರಸ್‌ ಹಿನ್ನೆಲೆಯಲ್ಲಿ ಯಾರೂ ಮನೆಯಿಂದ ಹೊರಗೆ ಬರಬಾರದು ಎಂದು ಚೀನ ಸರಕಾರ ನಿಷೇಧ ಹೇರಿರುವುದೂ ಇದಕ್ಕೆ ಕಾರಣ. ಈ ಸ್ಥಳಕ್ಕೆ ಪ್ಯಾಕೇಜ್‌ ಟೂರ್‌ಗಳನ್ನು ನಿಷೇಧಿಸಲಾಗಿದೆ. ಕಳೆದ ಶುಕ್ರವಾರದಿಂದ ಈಚೆಗೆ ಜೂಜಿನ ಮಾರುಕಟ್ಟೆಗೆ ಬರುವವರ ಸಂಖ್ಯೆ ಶೇ.69ರಷ್ಟು ಕಡಿಮೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next