ನವದೆಹಲಿ: ಭಾರತದಲ್ಲಿ ಮಾರ್ಚ್‌ನಲ್ಲಿ ನಡೆಯಲಿರುವ ಜಿ-20 ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಲು ಚೀನಾದ ವಿದೇಶಾಂಗ ಸಚಿವ ಕ್ವಿನ್ ಗಾಂಗ್ ಭಾರತಕ್ಕೆ ಆಗಮಿಸುತ್ತಾರೆ ಎಂದು ಚೀನಾ ರಾಯಭಾರ ಕಛೇರಿ ಅಧಿಕೃತವಾಗಿ ಹೇಳಿಕೊಂಡಿದೆ.
ಭಾರತಕ್ಕೆ ಚೀನಾದ ವಿದೇಶಾಂಗ ಸಚಿವ ಕ್ವಿನ್ ಗಾಂಗ್ ಭೇಟಿ ಬಗ್ಗೆ ಮಾಹಿತಿ ನೀಡಿರುವ ಚೀನಾ ವಿದೇಶಾಂಗ ಕಾರ್ಯಾಲಯದ ಅಧಿಕಾರಿ ಮಾವೋ ನಿಂಗ್, ʻಜಾಗತಿಕ ಆರ್ಥಿಕತೆಯ ಮೇಲಿರುವ ಸವಾಲುಗಳ ಬಗ್ಗೆ ಜಿ-20 ಗಮನ ಹರಿಸಬೇಕಾಗಿದೆ. ಚೀನಾ ಕೂಡಾ ಜಿ-20 ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗಿಯಾಗಲಿದ್ದು ಬಹುಪಕ್ಷೀಯ ಸಂಬಂಧದ ಬಗ್ಗೆ ಜಗತ್ತಿಗೆ ಸಕಾರಾತ್ಮಕ ಸಂದೇಶ ರವಾನಿಸಲು ಸಿದ್ಧವಾಗಿದೆʼ ಎಂದು ಹೇಳಿದ್ದಾರೆ.
ವಿಶೇಷವೆಂದರೆ, ಭಾರತದ ಗಡಿಯಲ್ಲಿ (ಲೈನ್ ಆಫ್ ಕಂಟ್ರೋಲ್) ಚೀನಾದ ಆಕ್ರಮಣದ ಬಗ್ಗೆ ಭಾರತ ಗಂಭೀರ ಎಚ್ಚರಿಕೆ ನೀಡಿದ ಮರುದಿನವೇ ಚೀನಾ ತನ್ನ ವಿದೇಶಾಂಗ ಸಚಿವರ ಭಾರತ ಭೇಟಿ ಬಗ್ಗೆ ಹೇಳಿಕೊಂಡಿದೆ.
ಜಿ-20 ಸಭೆಯ ನಡುವೆಯೇ ಚೀನಾ ವಿದೇಶಾಂಗ ಸಚಿವರ ಜೊತೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆಯೂ ಇರುವುದರಿಂದ, ಕ್ವಿನ್ ಗಾಂಗ್ ಅವರ ಭಾರತ ಭೇಟಿ ತೀವ್ರ ಕುತೂಹಲ ಕೆರಳಿಸಿದೆ. ಭಾರತದ ಗಡಿಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜೈಶಂಕರ್ ಚೀನಾಕ್ಕೆ ತಕ್ಕ ಎಚ್ಚರಿಕೆ ನೀಡುವ ಸಂಭವವೂ ಇದೆ ಎಂದು ಹೇಳಲಾಗಿದೆ.
2019 ರಲ್ಲಿ ಚೀನಾದ ಈ ಹಿಂದಿನ ವಿದೇಶಾಂಗ ಸಚಿವ ವಾಂಗ್ ಯಿ ಅವರ ನವದೆಹಲಿ ಭೇಟಿಯೇ ಚೀನೀ ವಿದೇಶಾಂಗ ಸಚಿವರೊಬ್ಬರ ಕೊನೆಯ ಭಾರತ ಭೇಟಿಯಾಗಿತ್ತು.
2020ರ ಮೇನಲ್ಲಿ ಲಡಾಖ್‌ನಲ್ಲಿ ನಡೆದಿದ್ದ ಸೇನಾ ಸಂಘರ್ಷದ ಬಳಿಕ ಭಾರತ-ಚೀನಾ ನಡುವಿನ ಸಂಬಂಧ ಹುಳಿ ಹಿಂಡಿದಂತಿತ್ತು. ಈ ಪ್ರಕರಣ ತಿಳಿಗೊಳಿಸಲು ಭಾರತ ಮತ್ತು ಚೀನಾ ನಡುವೆ 17 ಬಾರಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆದಿತ್ತು ಎನ್ನುವುದು ಗಮನಾರ್ಹ.
ಇದನ್ನೂ ಓದಿ:
ಚಂದ್ರಯಾನ-3 ರ ಪ್ರಮುಖ ಕ್ರಯೋಜನಿಕ್ ಇಂಜಿನ್ ಪರೀಕ್ಷೆ ಸಫಲ : ಇಸ್ರೋ