ಚಿಕ್ಕಮಗಳೂರು: ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿರುವುದಲ್ಲದೆ, ಭಾರತದ ವಿರುದ್ಧ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿದೆ ಎಂದು ಆರೋಪಿಸಿ ಚೀನಾದ ಧ್ವಜಕ್ಕೆ ಬೆಂಕಿ ಹಚ್ಚುವ ಮೂಲಕ ಶ್ರೀರಾಮಸೇನೆ ಕಾರ್ಯಕರ್ತರು ನಗರದಲ್ಲಿ ಬುಧವಾರ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಿದರು.
ನಗರದ ಆಜಾದ್ ಪಾರ್ಕಿನಲ್ಲಿ ಬುಧವಾರ ಸಮಾವೇಶಗೊಂಡ ಹಲವಾರು ಕಾರ್ಯಕರ್ತರು ದೇಶದ ಪರವಾಗಿ ಘೋಷಣೆ ಕೂಗಿ ಚೀನಾದ ಬಾವುಟಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮಾತನಾಡಿ, ಪಾಪಿ ಪಾಕಿಸ್ತಾನ ನಿರಂತರವಾಗಿ ಒಂದಿಲ್ಲೊಂದು ತೊಂದರೆ ಕೊಡುತ್ತಲೇ ಬರುತ್ತಿದೆ. ಕೇಂದ್ರ ಸರ್ಕಾರದ ಮಾತುಕತೆಯ ನೀತಿ ಬೋಧನೆಯಿಂದ ಯಾವುದೇ ಪ್ರಯೋಜನವಿಲ್ಲ. ಒಮ್ಮೆ ನಮ್ಮ
ದೇಶದ ತಾಕತ್ತು ತೋರಿಸಬೇಕು. ಒಮ್ಮೆ ಸರಿಯಾಗಿ ಉತ್ತರ ಕೊಡದೇ ಹೋದಲ್ಲಿ ಅವರನ್ನು ಹದ್ದುಬಸ್ತಿನಲ್ಲಿಡಲು ಸಾಧ್ಯವಿಲ್ಲ ಎಂದರು.
ಅದೇ ರೀತಿ ಚೀನಾ ಕೂಡ ನಮಗೆ ಮಗ್ಗಲು ಮುಳ್ಳಾಗಿದ್ದು ಚೀನಾದ ಎಲ್ಲಾ ವಸ್ತುಗಳನ್ನು ನಾವು ನಿರಾಕರಿಸಬೇಕು. ನಮ್ಮನ್ನು ಮಟ್ಟಹಾಕಬೇಕು ಎಂದು ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಿರುವ ಚೀನಾ ದೇಶಕ್ಕೂ ತಕ್ಕ ಪಾಠಕಲಿಸಬೇಕಿದೆ ಎಂದು ಹೇಳಿದರು.
ರಾಜ್ಯಾಧ್ಯಕ್ಷ ಮಹೇಶ್‌ಕುಮಾರ್ ಕಟ್ಟಿನಮನೆ ಮಾತನಾಡಿ, ಪಾಕಿಸ್ತಾನವನ್ನು ನಾವು ಸವಾಲಿನ ದೇಶ ಎಂದು ಪರಿಗಣಿಸಬೇಕಿಲ್ಲ. ಆದರೆ, ಚೀನಾ ನಮ್ಮ ಕಡುವೈರಿಯಾಗುತ್ತಿದೆ. ಇದಕ್ಕೆ ಸರಿಯಾದ ಪಾಠ ಕಲಿಸಬೇಕಾದರೆ ಅವರ ವಸ್ತುಗಳನ್ನು ನಿರಾಕರಿಸಬೇಕು ಎಂದು ಹೇಳಿದರು.
ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ, ಉಡುಪಿ ಜಿಲ್ಲಾಧ್ಯಕ್ಷ ಮೋಹನ್‌ಭಟ್ ಮತ್ತಿತರರು ಹಾಜರಿದ್ದರು.