Advertisement
ಆದಾಗ್ಯೂ, ಈ ವಿಚಾರದಲ್ಲಿ ಚೀನವನ್ನು ನೇರಾನೇರ ಎದುರು ಹಾಕಿಕೊಳ್ಳುವುದಕ್ಕೆ ಇತರ ರಾಷ್ಟ್ರಗಳು ಹಿಂಜರಿಯುತ್ತಿವೆಯಾದರೂ ಡ್ರ್ಯಾಗನ್‌ನ ದರ್ಪವನ್ನು ತಮ್ಮದೇ ಆದ ರೀತಿಯಲ್ಲಿ ಪ್ರಶ್ನಿಸುವ ಮೂಲಕ ಅದಕ್ಕೆ ಸೂಕ್ತ ಸಂದೇಶವನ್ನು ಕಳುಹಿಸಲಾರಂಭಿಸಿರುವುದು ಸ್ವಾಗತಾರ್ಹ.
Related Articles
Advertisement
ಚೀನದ ಈ ನಡೆಗೆ ಆಸ್ಟ್ರೇಲಿಯಾ ಎಂದಷ್ಟೇ ಅಲ್ಲ, ಅತ್ತ ಕೆನಡಾ ಕೂಡ ಅಸಮಾಧಾನ ವ್ಯಕ್ತಪಡಿಸುತ್ತಾ ಹಸ್ತಾಂತರ ಕಾನೂನನ್ನು ರದ್ದುಗೊಳಿಸಿದ್ದರೆ ಇನ್ನೊಂದೆಡೆ ಬ್ರಿಟನ್ ಸರಕಾರವೂ ಹಾಂಕಾಂಗ್ ಜನರಿಗೆ ತನ್ನ ದೇಶಕ್ಕೆ ಬಂದು ನೆಲೆಸಲು ಆಹ್ವಾನ ನೀಡುವ ಮೂಲಕ ಚೀನದ ಕಣ್ಣು ಕೆಂಪಾಗಿಸಿದೆ.
ಇನ್ನು ಅಮೆರಿಕ ಸಹ ಚೀನದ ದುರ್ವರ್ತನೆಯನ್ನು ಖಂಡಿಸುತ್ತಿದ್ದು, ಇತ್ತ ಭಾರತವೂ ವಿಶ್ವಸಂಸ್ಥೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದೆ. ಚೀನದ ವಿಸ್ತರಣಾವಾದಿ ದಾಹವನ್ನು ಇಂದು ಜಗತ್ತು ಖಂಡಿಸುತ್ತಿರುವುದಕ್ಕೆ “ಹಾಂಕಾಂಗ್’ನ ವಿಚಾರವೊಂದೇ ಕಾರಣವಲ್ಲ ಎನ್ನುವುದನ್ನು ಗಮನಿಸಬೇಕು.
ಆಸ್ಟ್ರೇಲಿಯಾದ ವಿಚಾರಕ್ಕೇ ಬರುವುದಾದರೆ, ಚೀನ ಈಗ ಆಸ್ಟ್ರೇಲಿಯಾದ ಅತಿದೊಡ್ಡ ವ್ಯಾಪಾರ ಮಿತ್ರರಾಷ್ಟ್ರ. ಆದರೆ ಕೆಲವು ಸಮಯದಿಂದ ಚೀನ ಇದೇ ನೆಪದಲ್ಲಿ ಆಸ್ಟ್ರೇಲಿಯಾವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ಕೋವಿಡ್-19ನ ಈ ಸಮಯದಲ್ಲಿ ದುರ್ಬಲಗೊಂಡ ಆಸ್ಟ್ರೇಲಿಯನ್ ಕಂಪೆನಿಗಳಲ್ಲಿ ಚೀನ ಹೂಡಿಕೆಯನ್ನು ಹೆಚ್ಚು ಮಾಡಿಕೊಂಡಿದೆ ಅಥವಾ ಸ್ವಾಧೀನಕ್ಕೆ ತೆಗೆದುಕೊಂಡಿದೆ.
ಈ ಕಾರಣಕ್ಕಾಗಿಯೇ ಚೀನದ ವಿರುದ್ಧ ಆಸ್ಟ್ರೇಲಿಯನ್ನರಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಧ್ವನಿಯೆತ್ತಲೇಬೇಕಾದ ಅನಿವಾರ್ಯತೆ ಆಸ್ಟ್ರೇಲಿಯಾದ ಆಡಳಿತಕ್ಕೆ ಸೃಷ್ಟಿಯಾಗಿದೆ. ನಿಸ್ಸಂಶಯವಾಗಿಯೂ ತನ್ನ ವಿರುದ್ಧ ಹೆಜ್ಜೆ ಹಾಕುತ್ತಿರುವ ರಾಷ್ಟ್ರಗಳಿಗೆ ಚೀನ ಒಂದಲ್ಲ ಒಂದು ರೀತಿಯಲ್ಲಿ ತೊಂದರೆ ಕೊಡಲಿದೆಯಾದರೂ, ಸುಮ್ಮನಿದ್ದರೆ ಚೀನ ತಮ್ಮನ್ನು ಇನ್ನಷ್ಟು ಹೈರಾಣಾಗಿಸುತ್ತದೆ ಎನ್ನುವುದನ್ನು ಈಗ ಜಗತ್ತು ಅರ್ಥಮಾಡಿಕೊಳ್ಳಲಾರಂಭಿಸಿದೆ.
ಇವೆಲ್ಲದರ ನಡುವೆ ಚೀನ ಹಾಂಕಾಂಗ್‌ನಲ್ಲಿ ಜಾರಿ ಮಾಡಿರುವ ಕ್ರೂರ ಕಾನೂನಿಗೆ ಹೆದರದೇ ಅಲ್ಲಿನ ಜನರು ಪ್ರತಿಭಟನೆಗಳಲ್ಲಿ ನಿರತರಾಗಿದ್ದಾರೆ. ಅವರೆಲ್ಲರಿಗೂ ನ್ಯಾಯ ದೊರಕಿಸುವ ದಿಕ್ಕಿನಲ್ಲಿ ಜಗತ್ತು ಒಗ್ಗಟ್ಟು ಪ್ರದರ್ಶಿಸಬೇಕಿದೆ.